ಮದುವೆ ಸಂದರ್ಭದಲ್ಲಿ ವಧು-ವರರು ಫೋಟೋಶೂಟ್ ನಡೆಸಿ ಸಂಭ್ರಮಿಸುವುದು ಈಗಿನ ಟ್ರೆಂಡ್. ವಿದೇಶಗಳಲ್ಲೆಲ್ಲ ಇದು ಮೊದಲಿನಿಂದ ನಡೆದುಕೊಂಡು ಬಂದಿದ್ದು, ಭಾರತದಲ್ಲೂ ಈಗೀಗ ಫುಲ್ ಫೇಮಸ್ ಆಗಿದೆ. ಮದು ಮಕ್ಕಳು ಹೊಸ ಉಡುಪು ತೊಟ್ಟು, ವಿವಿಧ ಭಂಗಿಯಲ್ಲಿ ಅದ್ಧೂರಿಯಾಗಿ ಫೋಟೋ ತೆಗೆಸಿಕೊಳ್ಳುತ್ತಾರೆ. ಹುಡುಗ ತನ್ನ ಪತ್ನಿಯನ್ನು ಎತ್ತಿಕೊಳ್ಳುವುದು, ಚುಂಬಿಸುವುದು, ಪರಸ್ಪರ ಅಪ್ಪಿಕೊಳ್ಳುವುದು-ಹೀಗೆ ವಿವಿಧ ಪೋಸ್ಗಳನ್ನು ಕೊಟ್ಟು ಫೋಟೋ ತೆಗೆಸಿಕೊಂಡು ತಮ್ಮ ಮದುವೆಯ ಕ್ಷಣವನ್ನು ಸಂಭ್ರಮಿಸುತ್ತಾರೆ.
ಅಂಥದ್ದೇ ಒಂದು ನವವಿವಾಹಿತ ಜೋಡಿಯ ಫೋಟೋಶೂಟ್ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಈಗ ಸಖತ್ ವೈರಲ್ ಆಗುತ್ತಿದೆ. ಇಲ್ಲಿ ಮಧ್ಯೆ ಒಂದು ಮಂಗ ಬಂದು ಫೋಟೋಶೂಟ್ಗೆ ತಡೆಯೊಡ್ಡಿದೆ. ಅದೂ ಕೂಡ ತುಂಬ ಕ್ಯೂಟ್ ಅನ್ನಿಸುತ್ತದೆ. ಹುಡುಗ ತನ್ನ ಪತ್ನಿಯನ್ನು ಎತ್ತಿಕೊಂಡು ಸುತ್ತಿರುಗಿಸುತ್ತಿದ್ದ. ಫೋಟೋಗ್ರಾಫರ್ ವಿಡಿಯೊ ಮಾಡುತ್ತಿದ್ದ. ಆಗೊಂದು ಕಪ್ಪು ಬಣ್ಣದ ಕೋತಿ, ಬೆನ್ನ ಮೇಲೆ ಮರಿಯನ್ನು ಇಟ್ಟುಕೊಂಡು ಲಗುಬಗೆಯಿಂದ ಅಲ್ಲಿಗೆ ಓಡಿಬಂತು. ಬಂದಿದ್ದೇ ಆ ಯುವಕನ ಕೈಯನ್ನು ಹಿಡಿದುಕೊಂಡು, ಅವನ ಮೈಮೇಲೆ ಹತ್ತಿ ಬೆಚ್ಚಗೆ ಕುಳಿತೇ ಬಿಟ್ಟಿತು. ವಧು ಹೆದರಿಕೊಂಡು, ನಗುತ್ತಲೇ ಪಕ್ಕಕ್ಕೆ ಸರಿದು ನಿಂತಳು. ನಂತರ ಇಬ್ಬರೂ ಆ ಕೋತಿ ಮತ್ತು ಅದರ ಮರಿಯ ಮೈಯನ್ನು ಪ್ರೀತಿಯಿಂದ ಸವರಿ ಕಳಿಸಿದ್ದಾರೆ. ಆ ಕೋತಿ ಪಕ್ಕಕ್ಕೆ ಹೋದ ಮೇಲೆ ಇವರಿಬ್ಬರೂ ತಮ್ಮ ಫೋಟೋಶೂಟ್ ಮುಂದುವರಿಸಿದ್ದಾರೆ. ಕೋತಿಯ ಕ್ಯೂಟ್ ವಿಡಿಯೊವನ್ನೂ ನೀವು ನೋಡಿ ಬಿಡಿ..
ಇದನ್ನೂ ಓದಿ: Viral Video | ಚಾವಣಿ ಹಿಡಿದು ನೇತಾಡುತ್ತಿದ್ದ ಅಮ್ಮ ಬೀಳದಂತೆ ಕಾಪಾಡಿದ ಮಗು; ಪ್ರಯಾಸ ಆಗುತ್ತಿದ್ದರೂ ಬಿಡದ ಬಾಲಕ