Site icon Vistara News

Viral Video: ಅಯ್ಯೋ ಕೋತಿಗಳಿಗೂ ಮೊಬೈಲ್​ ಗೀಳು ಹಿಡೀತಲ್ಲ!; ಅದೆಂಥಾ ಕುತೂಹಲ ನೋಡಿ ಈ ವಾನರಗಳಿಗೆ

Monkey

ಮೊಬೈಲ್​ ಬಳಕೆ ಮಾಡುವುದನ್ನು ಕೋತಿಗಳೂ ಕಲಿತುಬಿಟ್ಟಿವೆ. ಕೇಂದ್ರ ಕಾನೂನು ಇಲಾಖೆ ಸಚಿವ ಕಿರಣ್​ ರಿಜಿಜು ಅವರೊಂದು ವಿಡಿಯೊ ಶೇರ್​ ಮಾಡಿಕೊಂಡಿದ್ದು, ಅದನ್ನು ನೋಡಿದರೆ ಖಂಡಿತ ಅಚ್ಚರಿಯಾಗುತ್ತದೆ. ಕೋತಿಗಳು ತಮಗೆ ಎಲ್ಲವೂ ಗೊತ್ತಿರುವಂತೆ ಸ್ಮಾರ್ಟ್​ಫೋನ್​​ವೊಂದರನ್ನು ಆಪರೇಟ್​ ಮಾಡುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು. ವಿಡಿಯೊ ಶೇರ್​ ಮಾಡಿಕೊಂಡಿರುವ ಕಿರಣ್​ ರಿಜಿಜು, ‘ಡಿಜಿಟಲ್​ ಸಾಕ್ಷರತೆಯ ಯಶಸ್ಸು ಊಹಿಸಲು ಸಾಧ್ಯವಾಗದ ಮಟ್ಟಕ್ಕೆ ತಲುಪಿದೆ’ ಎಂದು ಕ್ಯಾಪ್ಷನ್​ ಬರೆದಿದ್ದಾರೆ.

ಯಾರೋ ಒಬ್ಬರು ಒಂದು ಸ್ಮಾರ್ಟ್​ಫೋನ್​​ನ್ನು ಮೂರು ಕೋತಿಗಳ ಎದುರು ಹಿಡಿದಿದ್ದಾರೆ. ಆ ಕೋತಿಗಳು ತಮಗೆ ಮೊಬೈಲ್​ ಬಳಕೆ ಗೊತ್ತಿದೆ ಎಂಬಂತೆ ಅದನ್ನು ಸ್ಕ್ರಾಲ್​ ಮಾಡುತ್ತಿವೆ. ಥೇಟ್​ ನಾವು ಮನುಷ್ಯರು ಮೊಬೈಲ್​ ನೋಡುವಂತೆಯೇ, ಆ ಪ್ರಾಣಿಗಳೂ ಮೊಬೈಲ್​ ನೋಡಿವೆ. ಕುತೂಹಲದಲ್ಲಿ ಅದನ್ನು ವೀಕ್ಷಿಸುತ್ತಿರುವುದನ್ನು ವಿಡಿಯೊದಲ್ಲಿ ನೋಡಬಹುದು.

ಈ ವಿಡಿಯೊಕ್ಕೆ ಈಗಾಗಲೇ 19 ಸಾವಿರಕ್ಕೂ ಅಧಿಕ ವೀವ್ಸ್​ ಬಂದಿದೆ. ಅನೇಕರು ಮೆಚ್ಚಿಕೊಂಡಿದ್ದಾರೆ. ಅಯ್ಯೋ ಈ ಕೋತಿಗಳೂ ಸ್ಮಾರ್ಟ್​ಫೋನ್​ ಮತ್ತು ಸಾಮಾಜಿಕ ಜಾಲತಾಣದ ಗೀಳು ಅಂಟಿಸಿಕೊಂಡವಲ್ಲ..! ಎಂದು ಅನೇಕರು ನಕ್ಕಿದ್ದಾರೆ. ‘ಮಾನವರು ಮತ್ತು ಕೋತಿಗಳೆರಡೂ ಸಸ್ತನಿಗಳು ಎಂಬುದು ಸಾಬೀತಾಯಿತು’ ಎಂದು ಇನ್ನೊಬ್ಬರು ಕಮೆಂಟ್ ಬರೆದಿದ್ದಾರೆ.

ಇದನ್ನೂ ಓದಿ: Viral Video | ಚಿತ್ರೀಕರಿಸಲು ಬಂದ ಡ್ರೋನ್‌ ವಿಡಿಯೊವನ್ನೇ ನುಂಗಿ, ನೀರು ಕುಡಿದ ಮೊಸಳೆ!

Exit mobile version