ಗುಜರಾತ್ನಲ್ಲಿ ವಿಧಾನಸಭೆ ಚುನಾವಣೆ ಮೊದಲ ಹಂತದ ಮತದಾನ ಇಂದು ನಡೆಯುತ್ತಿದ್ದು. ಎರಡನೇ ಹಂತದ ಮತದಾನ ಡಿಸೆಂಬರ್ 5ರಂದು ಇದೆ. ಈ ಚುನಾವಣಾ ಕಣದಲ್ಲಿರುವ ಸ್ವತಂತ್ರ ಅಭ್ಯರ್ಥಿಯೊಬ್ಬರು ಈಗ ಒಂದು ವಿಭಿನ್ನ ಕಾರಣಕ್ಕೆ ಗಮನ ಸೆಳೆದಿದ್ದಾರೆ. ಇವರು ‘ಮೀಸೆ ಮನುಷ್ಯ’. ಇವರ ಮೀಸೆಯ ಉದ್ದ 2.5 ಅಡಿ. ಗುಜರಾತ್ನ ಸಬರ್ಕಾಂತಾ ಜಿಲ್ಲೆಯ ಹಿಮ್ಮತ್ನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಇವರ ಹೆಸರು ಮಗನ್ಭಾಯ್ ಸೋಲಂಕಿ. ತಾವು ಮಾರುದ್ದ ಮೀಸೆ ಬೆಳೆಸಿದ್ದಲ್ಲದೇ, ಯುವಕರೂ ಉದ್ದನೆಯ ಮೀಸೆ ಬೆಳೆಸಲು ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಹಿಮ್ಮತ್ನಗರ ವಿಧಾನಸಭೆ ಕ್ಷೇತ್ರದಲ್ಲಿ ಸದ್ಯ ಬಿಜೆಪಿ ಶಾಸಕರು ಇದ್ದಾರೆ. ಈ ಕ್ಷೇತ್ರಕ್ಕೆ ಡಿಸೆಂಬರ್ 5ರಂದು ಮತದಾನ ನಡೆಯಲಿದೆ. ಸೋಲಂಕಿಯವರು ಈಗಾಗಲೇ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಂತ ಇವರು ಇದೇ ಮೊದಲೇನೂ ಅಲ್ಲ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು. ಮಗನ್ಭಾಯ್ ಸೋಲಂಕಿ ಈ ಮೊದಲು ಸೇನೆಯಲ್ಲಿದ್ದರು. ಅವರು 2012ರಲ್ಲಿ ನಿವೃತ್ತರಾಗಿದ್ದಾರೆ. 2017ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲೂ ತಾನು ಸ್ಪರ್ಧಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.
ಪಿಟಿಐ ಜತೆ ಮಾತನಾಡಿದ ಸೋಲಂಕಿ, ‘2017ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ನಾನು ಬಹುಜನ ಸಮಾಜ ಪಾರ್ಟಿ (BSP)ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಆಗ ಸೋತಿದ್ದೆ. ಆದರೆ ನಾನು ಸೋತು ಹಿಂದೆ ಸರಿಯಲಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ್ಯವಾಗಿ ಸ್ಪರ್ಧಿಸಿದ್ದೆ. ಈ ಸಲ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಕೂಡ ಸ್ವತಂತ್ರ್ಯ ಅಭ್ಯರ್ಥಿಯಾಗಿದ್ದೇನೆ’ ಎಂದು ಹೇಳಿದ್ದಾರೆ.
ಸೇನಾ ಸೇವೆಯಿಂದ ನಿವೃತ್ತರಾದವರ ಸಮಸ್ಯೆಗಳನ್ನು ಸೋಲಂಕಿ ತಮ್ಮ ಪ್ರಚಾರದ ವೇಳೆ ಹೈಲೈಟ್ ಮಾಡುತ್ತಾರೆ. ‘ಇತ್ತೀಚೆಗೆ ಸೇನೆಯಲ್ಲಿ ಆದ ಹಲವು ಬದಲಾವಣೆಗಳಿಂದ ಸೈನಿಕರು ಬೇಗ ನಿವೃತ್ತರಾಗುತ್ತಾರೆ. ಅನೇಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. 40-45 ವರ್ಷಕ್ಕೆಲ್ಲ ನಿವೃತ್ತರಾಗಿ, ನಿರುದ್ಯೋಗಿಗಳು ಆಗುತ್ತಿದ್ದಾರೆ. ಈ ಹಿಂದೆಲ್ಲ ನಿವೃತ್ತರಾದ ಸೈನಿಕರು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಪಡೆಯುತ್ತಿದ್ದರು. ಆದರೆ ಈಗ ಹಾಗೆ ಆಗುತ್ತಿಲ್ಲ. ಹೀಗಾಗಿ ಮಾಜಿ ಸೈನಿಕರ ಸೌಲಭ್ಯಗಳು, ಹಕ್ಕುಗಳಿಗಾಗಿ ನಾನು ಹೋರಾಟ ನಡೆಸುತ್ತಿದ್ದೇನೆ. ಈ ಬಗ್ಗೆ ಧ್ವನಿ ಎತ್ತುತ್ತಿದ್ದೇನೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ಕಾರಣವೂ ಇದೇ ಆಗಿರುತ್ತದೆ’ ಎಂದು ಸೋಲಂಕಿ ತಿಳಿಸಿದ್ದಾರೆ.
ಹಾಗೇ, ತಮ್ಮ ಉದ್ದನೆಯ ಮೀಸೆಯ ಬಗ್ಗೆಯೂ ಮಾತನಾಡಿದ ಅವರು ‘ನಾನು ಸೇನೆಯಲ್ಲಿ ಇದ್ದಾಗ, ನನ್ನ ಮೀಸೆ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಹಿರಿಯ ಅಧಿಕಾರಿಗಳೂ ಅದನ್ನು ಅಭಿಮಾನದಿಂದ ನೋಡುತ್ತಿದ್ದರು. ಸೇನೆ ಬಿಟ್ಟು ಬಂದು ಎಲೆಕ್ಷನ್ಗೆ ನಿಂತು, ಪ್ರಚಾರ ನಡೆಸುತ್ತಿದ್ದರೆ ಇಲ್ಲಿಯೂ ಜನರು ನನ್ನ ಮೀಸೆಯತ್ತಲೇ ಆಕರ್ಷಿತರಾಗುತ್ತಿದ್ದಾರೆ. ಅದೆಷ್ಟೋ ಮಂದಿ, ಬಂದು ನನ್ನ ಮೀಸೆಯನ್ನು ಮುಟ್ಟಿದ್ದಾರೆ. ಯುವಕರು ಬಂದು ಮೀಸೆ ಬೆಳೆಸುವ ಬಗ್ಗೆ ಟಿಪ್ಸ್ ಕೂಡ ಕೇಳಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ.
ತಾನು ಇಷ್ಟುದ್ದನೆಯ ಮೀಸೆ ಬೆಳೆಸಲು ನನ್ನ ತಂದೆಯಿಂದಲೇ ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳಿರುವ ಸೋಲಂಕಿ ‘ಯುವಕರು ಉದ್ದನೆಯ ಮೀಸೆ ಬೆಳೆಸಲು ಉತ್ತೇಜನ ಕೊಡುವಂಥ ಕಾನೂನನ್ನು ರಾಜ್ಯಸರ್ಕಾರ ತರಬೇಕು. ಅದರ ನಿರ್ವಹಣೆಗಾಗಿ ಸ್ವಲ್ಪ ಹಣವನ್ನೂ ಕೊಡಬೇಕು’ ಎಂದು ಸೋಲಂಕಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಇಷ್ಟುದ್ದ ಮೂಗು ಭಾರವಾಗಲ್ವಾ? – ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಸೇರಿದ ಮೂಗು ಇದು!