ಜೈಪುರ: ರಾಜಮೌಳಿ ನಿರ್ದೇಶನದ ʼಆರ್‌ಆರ್‌ಆರ್ʼ ಸಿನಿಮಾದ ʼನಾಟು ನಾಟುʼ (Naatu Naatu) ಹಾಡು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು, ಭಾರತೀಯ ಚಿತ್ರರಂಗಕ್ಕೆ ಹೆಮ್ಮೆ ತಂದುಕೊಟ್ಟಿದೆ. ಈ ಹಾಡು ಇದೀಗ ಅದೆಷ್ಟರ ಮಟ್ಟಿಗೆ ಜನರ ಮನಸಲ್ಲಿ ಕುಳಿತಿದೆ ಎಂದರೆ ಕಳ್ಳರಿಂದ ಹಿಡಿದು ಪೊಲೀಸರವರೆಗೆ ಎಲ್ಲರ ಬಾಯಲ್ಲೂ ಇದೇ ಹಾಡು. ಆದರೆ ಈಗ ಜೈಪುರದ ಪೊಲೀಸರು ʼನಾಟು ನಾಟುʼ ಬದಲಾಗಿ ʼನೋ ಟು ನೋ ಟುʼ ಎನ್ನಲಾರಂಭಿಸಿದ್ದಾರೆ.
ಹೌದು. ಜೈಪುರ ಪೊಲೀಸರು ವಿಶೇಷವಾದ ಟ್ವೀಟ್ ಒಂದನ್ನು ಗುರುವಾರ ಮಾಡಿದ್ದಾರೆ. “ಆರ್‌ಆರ್‌ಆರ್ ಸಿನಿಮಾಕ್ಕೆ ಸಿಕ್ಕ ಪ್ರಶಸ್ತಿಯ ಗರಿಯ ಖುಷಿಯಲ್ಲಿ ಪಾರ್ಟಿ ಮಾಡುವುದೇನೋ ಸರಿ, ಆದರೆ ನೀವು ನಿಮ್ಮ ಕಾರಲ್ಲೇ ಕುಳಿತು ಪಾರ್ಟಿ ಮಾಡಬೇಡಿ. ಕುಡಿದು ಗಾಡಿ ಓಡಿಸುವುದು ಅತ್ಯಂತ ದೊಡ್ಡ ಅಪರಾಧ ಮತ್ತು ಅದರಿಂದ ಸಾಕಷ್ಟು ಸಮಸ್ಯೆಗಳು ಉಂಟಾಗಬಹುದು. ಜವಾಬ್ದಾರಿಯುತವಾಗಿ ನಿಮ್ಮ ಖುಷಿ ಆಚರಿಸಿ” ಎಂದು ಟ್ವೀಟ್ ಮಾಡಿದ್ದಾರೆ. ಅದರೊಂದಿಗೆ ನಾಟು ನಾಟು ಹಾಡಿನ ಚಿತ್ರವೊಂದನ್ನೂ ಹಂಚಿಕೊಂಡಿದ್ದಾರೆ. ಆ ಚಿತ್ರದಲ್ಲಿ “ವಾಹನ ಚಲಾಯಿಸುವಾಗ ಮದ್ಯಪಾನಕ್ಕೆ ಹೇಳಿ ನೋ ಟು ನೋ ಟು ನೋ ಟು ನೋ ಟು” ಎಂದು ಬರೆದಿದೆ.
ಜೈಪುರ ಪೊಲೀಸರ ಈ ರೀತಿಯ ವಿಶೇಷ ಎಚ್ಚರಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ. “ಪೊಲೀಸ್ ಇಲಾಖೆ ಸ್ಮಾರ್ಟ್ ಆಗಿದೆ” ಎಂದು ಅನೇಕರು ಕಮೆಂಟ್‌ಗಳನ್ನು ಮಾಡಲಾರಂಭಿಸಿದ್ದಾರೆ.