ನವ ದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡುವಾಗ ಬಾಯ್ತಪ್ಪಿ ಹೇಳಿದ ಶಬ್ದವೊಂದನ್ನು ಕಾಂಗ್ರೆಸ್ ನಾಯಕರು ವ್ಯಂಗ್ಯ ಮಾಡುತ್ತಿದ್ದಾರೆ. ಸರಕು ಮತ್ತು ಸೇವಾ ತೆರಿಗೆಯ 47ನೇ ಸಭೆಯ ಬಳಿಕ ಮಾಧ್ಯಮಗಳಿಗೆ ಅದರ ಬಗ್ಗೆ ಮಾಹಿತಿ ನೀಡುವಾಗ ನಿರ್ಮಲಾ ಅವರು ಹಾರ್ಸ್ ರೇಸಿಂಗ್ ಎಂದು ಹೇಳುವ ಬದಲು “ಹಾರ್ಸ್ ಟ್ರೇಡಿಂಗ್ʼ ಎಂದು ಹೇಳಿ ಟ್ರೋಲ್ ಆಗುತ್ತಿದ್ದಾರೆ. ಅಂದಹಾಗೆ, ನಿರ್ಮಲಾ ಸೀತಾರಾಮನ್ ಈ ಮಾತುಗಳನ್ನಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್ “”ಕ್ಯಾಸಿನೋ, ಆನ್‌ಲೈನ್ ಗೇಮ್‌ಗಳು, ಹಾರ್ಸ್ ರೇಸಿಂಗ್ ಮತ್ತು ಲಾಟರಿ ಮೇಲೆ ಶೇ.28ರಷ್ಟು ತೆರಿಗೆ ಹೇರುವ ನಿರ್ಧಾರವನ್ನು ಜಿಎಸ್‌ಟಿ ಮಂಡಳಿ ಸದ್ಯಕ್ಕೆ ಜಾರಿಗೊಳಿಸುವುದಿಲ್ಲ. ಈ ಕುರಿತು ಇನ್ನಷ್ಟು ಸಮಾಲೋಚನೆಗಳ ಅಗತ್ಯವಿದ್ದು, ಮುಂದಿನ ದಿನಗಳಲ್ಲಿ ಅದು ಜಾರಿಯಾಗಲಿದೆʼʼ ಎಂದು ಹೇಳಿದರು. ಆದರೆ ಈ ವೇಳೆ ಹಾರ್ಸ್ ರೇಸಿಂಗ್ ಎಂದು ಹೇಳುವ ಬದಲು ಹಾರ್ಸ್ ಟ್ರೇಡಿಂಗ್ (ಕುದುರೆ ವ್ಯಾಪಾರ) ಎಂದು ಹೇಳಿ, ನಂತರ ಸರಿಪಡಿಸಿಕೊಂಡರು! ಆದರೆ, ಮಹಾರಾಷ್ಟ್ರದ ಶಿವಸೇನೆ ಶಾಸಕರ ಬಂಡಾಯದ ಹಿನ್ನೆಲೆಯಲ್ಲಿ, ನಿರ್ಮಲಾ ಬಳಸಿದ “ಹಾರ್ಸ್ ಟ್ರೇಡಿಂಗ್ʼ ಪದ ಗೇಲಿಗೊಳಗಾಗಿದೆ.
ಕೆಪಿಸಿಸಿ ವಕ್ತಾರ ಡಾ. ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ತಮ್ಮ ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಈ ವಿಡಿಯೋ ಹಂಚಿಕೊಂಡು ಬಿಜೆಪಿ ಮತ್ತು ನಿರ್ಮಲಾ ಸೀತಾರಾಮನ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಹಾರ್ಸ್ ಟ್ರೇಡಿಂಗ್ ಅಥವಾ ಕುದುರೆ ವ್ಯಾಪಾರ ಎಂಬುದನ್ನು ರಾಜಕೀಯದಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ. ಅಧಿಕಾರಕ್ಕಾಗಿ ಇನ್ನೊಂದು ಪಕ್ಷದ ಜನಪ್ರತಿನಿಧಿಗಳನ್ನು ಹಣಕೊಟ್ಟು ಖರೀದಿಸುವುದಕ್ಕೆ ಪರ್ಯಾಯವಾಗಿ ಈ ಪದ ಬಳಕೆಯಲ್ಲಿದೆ. ಅದರಲ್ಲೂ ಹಾರ್ಸ್ ಟ್ರೇಡಿಂಗ್ ಹೆಚ್ಚು ಅನ್ವಯ ಆಗುವುದು ಬಿಜೆಪಿಗೇ ಎಂಬ ಆರೋಪವೂ ಇದೆ! ಈಗಂತೂ ಮಹಾರಾಷ್ಟ್ರದಲ್ಲಿ ಶಿವಸೇನೆಯ 40ಕ್ಕೂ ಶಾಸಕರು ಬಂಡಾಯವೆದ್ದು, ಕೊನೆಗೂ ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿಯೇ ಬಿಟ್ಟಿದ್ದಾರೆ. ಹೀಗೆ ಮಹಾರಾಷ್ಟ್ರ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನವಾಗುವುದಕ್ಕೂ ಬಿಜೆಪಿ ಕಾರಣ. ಅಲ್ಲಿಯೂ ಅಧಿಕಾರಕ್ಕಾಗಿ ಆ ಪಕ್ಷ ಕುದುರೆ ವ್ಯಾಪಾರ ನಡೆಸಿತು ಎಂಬ ಆರೋಪವಿದೆ. ಇಷ್ಟೆಲ್ಲದರ ಮಧ್ಯೆ ಹಣಕಾಸು ನಿರ್ಮಲಾ ಸೀತಾರಾಮನ್ ಹೇಳಿದ ಹಾರ್ಸ್ ಟ್ರೇಡಿಂಗ್ ಮೇಲೆ ಜಿಎಸ್‌ಟಿ ಹೇರಿಕೆಯ ಮಾತುಗಳು ಕಾಂಗ್ರೆಸ್‌ಗೆ ಸಿಕ್ಕ ಟೀಕಾಸ್ತ್ರವಾಗಿದೆ.
ವಿಡಿಯೋವನ್ನು ಶೇರ್ ಮಾಡಿಕೊಂಡ ಕೆಪಿಸಿಸಿ ವಕ್ತಾರ ಡಾ. ಶಂಕರ್ ಗುಹಾ “ಕುದುರೆ ವ್ಯಾಪಾರ ಎಂಬುದು ಬಿಜೆಪಿ ಪಾಲಿಗೆ ಅತ್ಯಂತ ಮಹತ್ವದ ಉದ್ಯಮ ಎಂದು ಒಪ್ಪಿಕೊಂಡಿದ್ದಕ್ಕೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದಗಳು. ಅದರಂತೆ ಈಗ ಮಹಾರಾಷ್ಟ್ರದಲ್ಲಿ ಜಿಎಸ್‌ಟಿ ಸಂಗ್ರಹವಾಗಿದೆ ಎಂದು ನೀವೊಮ್ಮೆ ಖಚಿತಪಡಿಸಿಕೊಂಡುಬಿಡಿ. ಯಾಕೆಂದರೆ ಅಲ್ಲಿ ಇದರಿಂದ ದೊಡ್ಡ ಮೊತ್ತದ ಹಣ ಸಂಗ್ರಹವಾಗಲಿದೆ!” ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಪವನ್ ಖೇರಾ ಟ್ವೀಟ್ ಮಾಡಿ “”ನಿರ್ಮಲಾ ಸೀತಾರಾಮನ್ ಅವರ ಆಲೋಚನಾ ಸಾಮರ್ಥ್ಯ ಬರೀ ಚುನಾವಣೆ, ಮತಗಳಿಕೆಗೆ ಸೀಮಿತವಲ್ಲ ಎಂದು ನನಗೆ ತಿಳಿದಿತ್ತು. ಈಗದನ್ನು ಅವರು ಸಾಕ್ಷೀಕರಿಸಿದ್ದಾರೆ. ನಿರ್ಮಲಾ ಜೀ ಹೇಳಿದಂತೆ ಆಗಬೇಕು. ಹಾರ್ಸ್ ಟ್ರೇಡಿಂಗ್ ಮೇಲೆ ಕೂಡ ಜಿಎಸ್‌ಟಿ ಹೇರಬೇಕುʼʼ ಎಂದು ಹೇಳಿದ್ದಾರೆ. ಹಾಗೇ ಇನ್ನೊಬ್ಬ ಕಾಂಗ್ರೆಸ್ ನಾಯಕ ಡಾ. ವಿನೀತ್ ಪುನಿಯಾ ಟ್ವೀಟ್ ಮಾಡಿ “”ಕುದುರೆ ವ್ಯಾಪಾರದ ಮೇಲೆ ಜಿಎಸ್‌ಟಿ ಹೇರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಈ ಬಿಜೆಪಿ ವಿರೋಧಿ ತೆರಿಗೆ ಜಾರಿಗೆ ಪ್ರಧಾನಮಂತ್ರಿ ಮತ್ತು ಗೃಹ ಮಂತ್ರಿ ಅವಕಾಶ ಕೊಡಲಿಕ್ಕಿಲ್ಲʼʼ ಎಂದು ವ್ಯಂಗ್ಯ ಮಾಡಿದ್ದಾರೆ. ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಟ್ವೀಟ್ ಮಾಡಿ “ಸತ್ಯ ಹೊರಬಿದ್ದಿತೇ? ಕುದುರೆ ವ್ಯಾಪಾರದ ಮೇಲೆ ಜಿಎಸ್‌ಟಿ!-ದಯವಿಟ್ಟು ಮೊದಲು ಜಾರಿಗೆ ತನ್ನಿʼ ಎಂದಿದ್ದಾರೆ.
ಇದನ್ನೂ ಓದಿ: GST rate hike| ಜಿಎಸ್‌ಟಿ ನಷ್ಟಪರಿಹಾರ ವಿತರಣೆ ತೀರ್ಮಾನ ಇನ್ನೂ ಆಗಿಲ್ಲ ಎಂದ ವಿತ್ತ ಸಚಿವೆ ನಿರ್ಮಲಾ