ಮುಂಬೈ: ಕೆಲವು ರಿಯಾಲಿಟಿ ಶೋಗಳು ಅಸಭ್ಯವೆನಿಸುವಂತಹ ಸಂಭಾಷಣೆಯನ್ನು ಹೊಂದಿರುತ್ತವೆ. ರಿಯಾಲಿಟಿ ಶೋ ಆದ ಸೂಪರ್ ಡ್ಯಾನ್ಸರ್ 3ನಲ್ಲಿ ಚಿಕ್ಕ ಮಗುವೊಂದಕ್ಕೆ ಅಪ್ಪ ಅಮ್ಮನ ಖಾಸಗಿ ವಿಚಾರಗಳ ಬಗ್ಗೆ ಪ್ರಶ್ನಿಸಿದ ವಿಚಾರದಲ್ಲಿ ಇದೀಗ ಸೋನಿ ಪಿಕ್ಚರ್ಸ್ ನೆಟ್‌ವರ್ಕ್‌ಗೆ ನೋಟಿಸ್ ಕಳುಹಿಸಿಕೊಡಲಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಈ ನೋಟಿಸ್ ಅನ್ನು (Viral News) ರವಾನಿಸಿದೆ.
ರಿಯಾಲಿಟಿ ಶೋನಲ್ಲಿ ಮಗುವೊಂದಕ್ಕೆ ಜಡ್ಜ್‌ಗಳು ಪೋಷಕರ ಕುರಿತಾಗಿ ಅನುಚಿತ ಮತ್ತು ಲೈಂಗಿಕ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದ್ದರು. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದನ್ನು ಗಮನಿಸಿರುವ ಆಯೋಗ ಕಾರ್ಯಕ್ರಮವನ್ನು ಪ್ರಸಾರ ಮಾಡಿದ ಸೋನಿ ವಾಹಿನಿಯ ಮುಖ್ಯ ಸಂಸ್ಥೆಯಾದ ಸೋನಿ ಪಿಕ್ಚರ್ಸ್ ನೆಟ್‌ವರ್ಕ್‌ಗೆ ನೋಟಿಸ್ ಕಳುಹಿಸಿಕೊಟ್ಟಿದೆ. ಹಾಗೆಯೇ ಆ ವಿಡಿಯೊವನ್ನು ಎಲ್ಲ ಕಡೆಗಳಲ್ಲೂ ಡಿಲೀಟ್ ಮಾಡುವಂತೆ ಸೂಚಿಸಿದೆ. ಆ ಕಾರ್ಯಕ್ರಮದಲ್ಲಿ ಬಾಲಕ ಕಲಾವಿದರಿಗೆ ಆ ರೀತಿಯ ಅನುಚಿತ ಪ್ರಶ್ನೆಗಳನ್ನು ಏಕೆ ಕೇಳಲಾಯಿತು ಎಂದು ಆಯೋಗಕ್ಕೆ ವಿವರಣೆ ನೀಡಬೇಕು ಎಂದೂ ತಿಳಿಸಲಾಗಿದೆ.
ಇದನ್ನೂ ಓದಿ: Viral Video: ಪಿಯಾನೋ ನುಡಿಸಿದ ಲಸಿತ್ ಮಾಲಿಂಗ; ವಿಡಿಯೊ ವೈರಲ್
ಸೂಪರ್ ಡ್ಯಾನ್ಸರ್ 3 ಕಾರ್ಯಕ್ರಮ 2019ರಲ್ಲಿ ಪ್ರಸಾರವಾಗಿತ್ತು. ಆಗ ಕೂಡ ಈ ವಿಡಿಯೊ ಬಗ್ಗೆ ಅಸಮಾಧಾನ ವ್ಯಕ್ತವಾಗಿದ್ದರಿಂದ ಅದನ್ನು ವಾಹಿತಿ ತೆರವುಗೊಳಿಸಿತ್ತು ಎನ್ನಲಾಗಿದೆ. ಆದರೆ ಇದೀಗ ಅದೇ ವಿಡಿಯೊ ಮತ್ತೆ ಹೇಗೆ ವೈರಲ್ ಆಯಿತು ಎನ್ನುವುದರ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಬಗ್ಗೆ ವಾಹಿನಿಯು ಶೀಘ್ರವೇ ಆಯೋಗಕ್ಕೆ ವಿವರಣೆಯನ್ನು ನೀಡಲಿದೆ.
ಸೂಪರ್ ಡ್ಯಾನ್ಸರ್ 3 ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಯನ್ನು 2019ರ ಜೂನ್ 23ರ ಪ್ರಸಾರ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ, ಗೀತಾ ಕಪೂರ್ ಮತ್ತು ಅನುರಾಗ್ ಬಸು ತೀರ್ಪುಗಾರರಾಗಿದ್ದರು. ಕೋಲ್ಕೊತಾದ ರುಪ್ಸಾ ಬಟಾಬ್ಯಾಲ್ ಅವರು ಕಾರ್ಯಕ್ರಮದ ವಿಜೇತರಾಗಿ ಹೊರಹೊಮ್ಮಿದ್ದರು. ಈ ಸೀಸನ್ ಆದ ನಂತರ ಸೂಪರ್ ಡ್ಯಾನ್ಸರ್ 4 ನಡೆಸಲಾಯಿತು. ಅದಾದ ನಂತರ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಯಿತು.