ಬಹಳಷ್ಟು ಮಂದಿ ವಯಸ್ಸಾಗುತ್ತಿದ್ದಂತೆಯೇ ಜೀವನದಲ್ಲಿ ಉತ್ಸಾಹ ಕಳೆದುಕೊಳ್ಳುತ್ತೆ. ೫೦ ಆಗುತ್ತಿದ್ದಂತೆ ಇನ್ನೇನು ಅರ್ಧ ಆಯಸ್ಸು ಕಳೆದಾಯಿತು, ಜವಾಬ್ದಾರಿಗಳು ಮುಗಿದರೆ, ಚಿಂತೆಯಿಲ್ಲದೆ, ದೇವರು ಇಟ್ಟಷ್ಟು ದಿನ ಇರುವುದು ಎಂದು ನಿರಾಶಾವಾದದ ಮಾತಾಡುವುದನ್ನು ಕೇಳಿಯೇ ಇರುತ್ತೇವೆ. ನಮ್ಮದೇ ರಾಜ್ಯದೊಳಗೆ ಸುತ್ತಾಡಿ ಬರಲೂ ಸಹ, ಅಯ್ಯೋ ವಯಸ್ಸಾಯ್ತು, ಇನ್ನೆಲ್ಲ ಆಗಲ್ಲ ಎಂದು ಕೈ ಮುಗಿದುಬಿಡುವವರೇ ಹೆಚ್ಚು. ಆದರೆ, ಕೆಲವೇ ಕೆಲವು ಅಪರೂಪದ ಮಂದಿ ತಮಗೆ ಬೇಕೆನಿಸದ್ದನ್ನು ವಯಸ್ಸಿನ ಹಂಗಿಲ್ಲದೆ ಮಾಡುವ, ಮನಸ್ಸನ್ನೂ, ದೇಹವನ್ನು ಆರೋಗ್ಯವಾಗಿ ಕೊನೆತನಕ ಕಾಪಾಡಿಕೊಳ್ಳುವ ಉತ್ಸಾಹ ತೋರುತ್ತಾರೆ. ಅಂತಹ ಲವಲವಿಕೆಯ ವಯಸ್ಸಾದ ಹಿರಿಯರು ಪುಟ್ಟ ಮಕ್ಕಳ ಜೊತೆಗೂ ಮಕ್ಕಳಾಗಿ, ಯುವ ಮಂದಿಯಲ್ಲೂ ಚೈತನ್ಯದ ಚಿಲುಮೆಯನ್ನು ಹರಿಸುವಲ್ಲಿ, ವಯಸ್ಸಾದ ಮೇಲೆ ನಾವು ಹೀಗಿರಬೇಕು ಎಂಬ ಸ್ಪೂರ್ತಿಯನ್ನು ಹಂಚುವಲ್ಲಿ ಯಶಸ್ವಿಯಾಗುತ್ತಾರೆ. ಸುಂದರ ಸರಳ ಬದುಕಿಗಿನ್ನೆಷ್ಟು ಬೇಕು ಅಲ್ಲವೇ?
ಹೀಗೆ ಇಲ್ಲಿ ಹೇಳಲು ಕಾರಣವಿದೆ. ಇಲ್ಲಿ ಅಂಥದ್ದೇ ವಯಸ್ಸಾದ ಜೋಡಿಯೊಂದು ತಮ್ಮ ಮುಪ್ಪಿನಲ್ಲಿ, ಆಸೆಪಟ್ಟ ಕೆಲಸವೊಂದನ್ನು ಮಾಡಿ ಮುಗಿಸಿ ಧನ್ಯತೆ ಕಂಡಿವೆ. ಹಾಗಂತ ಇವರಿಗೆ ಆಸೆಯಿದ್ದುದು, ಎಲ್ಲ ಹಿರಿಯರಂತೆ ಮೊಮ್ಮಕ್ಕಳನ್ನು ನೋಡುವುದೋ, ಅವರ ಮದುವೆ ಮಾಡಿಸುವುದೋ ಇತ್ಯಾದಿ ನಿತ್ಯ ಬದುಕಿನ ಚರ್ವಿತ ಚರ್ವಣಗಳಲ್ಲ. ಬದಲಾಗಿ ಮೌಂಟ್ ಎವರೆಸ್ಟನ್ನು ಕಣ್ಣಾರೆ ನೋಡಬೇಕೆಂಬುದು!
ಆಶ್ಚರ್ಯವಾಯಿತೇ? ಮುಪ್ಪಿನಲ್ಲಿ ಕಾಣುಬಹುದಾದ ಕನಸೇ ಇದು? ಹುಚ್ಚಲ್ಲವೇ? ಎಂದು ಮೂದಲಿಸಬೇಡಿ. ಮುಪ್ಪಾದರೇನಂತೆ ಕನಸಿಗೆಲ್ಲಿಯ ಬೇಲಿಯ ಹಂಗು? ಮೌಂಟ್ ಎವರೆಸ್ಟ್ ಹತ್ತಬೇಕು ಎಂದು ಇವರೇನೂ ಕನಸು ಕಂಡಿಲ್ಲ. ನೋಡಿ ಕಣ್ತುಂಬಿಕೊಳ್ಳಬೇಕು ಎಂಬುದಷ್ಟೇ ಇವರ ಕನಸಾಗಿತ್ತು. ಇದೀಗ ಅವರೇ ಅದನ್ನು ನನಸೂ ಮಾಡಿಕೊಂಡು ಒಂದಿಷ್ಟು ಮಂದಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಅವರಿಬ್ಬರೂ ಮೌಂಟ್ ಎವರೆಸ್ಟ್ ನೋಡಿದ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನ ಇವರ ಜೀವನೋತ್ಸಾಹಕ್ಕೆ ಉಘೇ ಎನ್ನುತ್ತಿದ್ದಾರೆ.
ಪೈಲಟ್ ಆನಂದ (ಆಂಡೀ) ಥಾಪಾ ಎಂಬವರು ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಈ ಕುರಿತಾದ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಇದು ಲಕ್ಷಗಟ್ಟಲೆ ಜನರನ್ನು ಸೆಳೆದಿದೆ. ಸುಮಾರು ೭೮ ವರ್ಷ ಆಸುಪಾಸಿನ ವಯಸ್ಸಿನ ಗಂಡ ಹೆಂಡಿರಿಬ್ಬರಿಗೆ ಜೀವನದಲ್ಲಿ ಒಮ್ಮೆಯಾದರೂ ಮೌಂಟ್ ಎವರೆಸ್ಟ್ ನೋಡಬೇಕು ಎಂದು ಆಸೆಯಾಗಿದ್ದು ಅವರಿಬ್ಬರೂ ತಮ್ಮ ಆಸೆಯನ್ನು ಖುದ್ದಾಗಿ ನೆರವೇರಿಸಿಕೊಂಡಿದ್ದಾರೆ. ʻಆರ್ಟ್ ಆಫ್ ಲಿವಿಂಗ್ʼ ಎಂಬ ತಲೆಬರಹದೊಂದಿಗೆ ಪೋಸ್ಟ್ ವೈರಲ್ ಆಗುತ್ತಿದ್ದು, ʻಇವರಿಗೆ ೭೮ರ ಹರೆಯ. ಜೀವಮಾನದಲ್ಲೊಮ್ಮ ಎವರೆಸ್ಟ್ ನೋಡಬೇಕೆಂಬ ಕನಸು. ತನ್ನ ಹೆಂಡತಿಯನ್ನೂ ಕರೆದುಕೊಂಡು ಎವರೆಸ್ಟ್ ನೋಡಲು ಹೊರಟ ಇವರ ಧೈರ್ಯಕ್ಕೆ ಸಲಾಂ. ಬಹುಕಾಲ ಬಾಳಲಿ!ʼ ಎಂಬ ವಿವರಣೆಯೊಂದಿಗೆ ಪುಟ್ಟ ವಿಡಿಯೋ ಒಂದು ಮೆಚ್ಚುಗೆ ಗಳಿಸುತ್ತಿದೆ. ದಂಪತಿಗಳು ಹೆಲಿಕಾಪ್ಟರ್‌ನಿಂದಿಳಿದು, ಕಣ್ಣ ಮುಂದೆ ಭವ್ಯವಾಗಿ ನಿಂತಿರುವ ಎವರೆಸ್ಟ್ ಕಣ್ತುಂಬಿಕೊಳ್ಳುವ ದೃಶ್ಯ ಈ ವಿಡಿಯೋನಲ್ಲಿದೆ. ದಂಪತಿಗಳು ಕಾಠ್ಮುಂಡುವಿನಿಂದ ಕಾಲಾಪತ್ಥರ್‌ವರೆಗೆ ಹೆಲೆಕಾಪ್ಟರ್‌ನಲ್ಲಿ ಪಯಣಿಸಿ ಅಲ್ಲಿಂದ ಮೌಂಟ್ ಎವರೆಸ್ಟನ್ನು ನಿಂತಲ್ಲೇ ಸವಿದಿದ್ದಾರೆ. ಮೌಂಟ್ ಎವರೆಸ್ಟನ್ನು ಹತ್ತಿರದಿಂದ ಹೆಲಿಕಾಪ್ಟರ್‌ನಲ್ಲಿ ಹೋಗಿ ಕಣ್ತುಂಬಿಕೊಳ್ಳಬಹುದಾದ ಜಾಗವಿದು.
ಥಾಪಾ ಅವರಿಂದ ಪೋಸ್ಟ್ ಮಾಡಲಾದ ಇನ್ನೊಂದು ವಿಡಿಯೋನಲ್ಲಿ, ಕಡಿಮೆ ಆಮ್ಲಜನಕವಿರುವ ಸಮುದ್ರ ಮಟ್ಟದಿಂದ ಸುಮಾರು ೧೭,೦೦೦ ಅಡಿಗಳಷ್ಟು ಎತ್ತರದಲ್ಲಿರುವ ಈ ಜಾಗಕ್ಕೆ ಇವರನ್ನು ಕರೆದೊಯ್ಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಿಜವಾಗಿಯೂ ಕಷ್ಟವಾಗಿತ್ತು. ಆದರೆ, ಹೆಂಡತಿ ತನ್ನ ಗಂಡನನ್ನು ಸಾಕಷ್ಟು ಹುರಿದುಂಬಿಸಿ ಹೆಲಿಕಾಪ್ಟರ್‌ನಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದಾರೆ. ಅವರಿಬ್ಬರೂ ಕನಸು ಕಂಡರು, ಅದನ್ನು ಪೂರೈಸಿಕೊಂಡರು ಕೂಡಾ. ಇವರಿಬ್ಬರ ಇಡೀ ಕಥೆ ನನ್ನ ಕಣ್ಣ ಮುಂದಿದೆ. ನಿಜಕ್ಕೂ ಮನಸ್ಸು ತುಂಬಿ ಬರುತ್ತಿದೆ. ಇಬ್ಬರೂ ನೂರ್ಕಾಲ ಚೆನ್ನಾಗಿ ಬಾಳಲಿ. ಇವರಿಬ್ಬರ ಪ್ರೀತಿ ಸಹಕಾರ ಜೀವನೋತ್ಸಾಹವೇ ಎಲ್ಲರಿಗೂ ಮಾದರಿ ಎಂದು ಹೇಳಿದ್ದಾರೆ.
ವಾಕಿಂಗ್ ಸ್ಟಿಕ್ ನೆರವಿನಿಂದ ನಡೆಯುವ ಗಂಡನಿಗೆ ಪಕ್ಕದಲ್ಲಿ ಸಹಾಯ ಮಾಡುತ್ತಾ ನಡೆಯುವ ಹೆಂಡತಿಯ ಈ ವಿಡಿಯೋ ವೀಕ್ಷಿಸಿದ ಮಂದಿ, ಇಬ್ಬರ ಧೈರ್ಯ ಹಾಗೂ ಜೀವನಪ್ರೀತಿಯನ್ನು ಮೆಚ್ಚಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಮೊಮ್ಮಗನೂ ಇದಕ್ಕೆ ಕಾಮೆಂಟ್ ಮಾಡಿದ್ದು, ಇವರಿಬ್ಬರೂ ನನ್ನ ಅಜ್ಜ ಅಜ್ಜಿ. ಎವರೆಸ್ಟ್ ನೋಡುವುದು ಇವರ ಕನಸಾಗಿತ್ತು, ಅವರ ಉಳಿದೆಲ್ಲ ಕನಸೂಗಳೂ ನನಸಾಗಲಿ ಎಂದಿದ್ದಾನೆ.
ಕನಸನ್ನು ನನಸಾಗಿಸಲು ಕಾಲ, ವಯಸ್ಸಿನ ಹಂಗಿಲ್ಲ. ಈ ವಿಡೀಯೋ ಎಲ್ಲರಿಗೊಂದು ಪರ್ಫೆಕ್ಟ್ ಉದಾಹರಣೆ ಎಂದು ಒಬ್ಬರು ಹೇಳಿದ್ದಾರೆ. ಇನ್ನೊಬ್ಬರು, ನನ್ನ ಇವತ್ತಿನ ದಿನ ಬಹಳ ಕೆಟ್ಟದಾಗಿ ಆರಂಭವಾಗಿತ್ತು. ಕೆಟ್ಟ ಮೂಡ್‌ನಲ್ಲಿದ್ದೆ. ಇದನ್ನು ನೋಡಿ, ಜೀವನದ ಬಗೆಗಿನ ನನ್ನ ದೃಷ್ಟಿಕೋನವೇ ಬದಲಾಗಿ ಬಿಟ್ಟಿತು. ಬಹಳ ಖುಷಿಯಾಯ್ತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.