ಲಂಡನ್: ನಿಮ್ಮ ಮನೆಯಲ್ಲಿ ಹಳೆಯ ಕಾಲದ ಸಾಮಗ್ರಿಗಳು ಇವೆಯಲ್ಲವೇ? ಅವುಗಳಲ್ಲಿ ಯಾವುದಾದರೂ ಗೊಂಬೆಯಿದೆಯೇ? ಇದ್ದರೆ ಅದನ್ನು ನೀವೇನು ಮಾಡುವಿರಿ? ಗುಜುರಿ ಎಂದು ಎಸೆಯುವಿರಿ. ಇಲ್ಲವೇ ಸುಮ್ಮನೆ ಕಸಕ್ಕೆ ಹಾಕಿಬಿಡುವಿರಿ ಅಲ್ಲವೇ? ಆದರೆ ಈ ಒಂದು ಗೊಂಬೆಯ ಕಥೆ (Viral News) ಕೇಳಿದ ಮೇಲೆ ನೀವು ಗೊಂಬೆಯನ್ನು ಎಸೆಯುವುದಕ್ಕೆ ಹಿಂದೆ ಮುಂದೆ ಯೋಚಿಸುತ್ತೀರಿ!
ಬ್ರಿಟನ್‌ನಲ್ಲಿ ಇಂಥದ್ದೊಂದು ಹಳೆಯ ಗೊಂಬೆಯನ್ನು ಬರೋಬ್ಬರಿ 54 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ. ಹೌದು. ಬ್ರಿಟನ್‌ನ ನಿವಾಸಿಯೊಬ್ಬರ ಅಜ್ಜಿಯ ಮನೆಯಲ್ಲಿ ಗೊಂಬೆಯೊಂದು ಸಿಕ್ಕಿತಂತೆ. ಚಿಕ್ಕ ಬಾಲಕನ ರೀತಿಯಲ್ಲಿ ಮಾಡಲಾಗಿದ್ದ ಆ ಗೊಂಬೆಗೆ ಶರ್ಟ್, ಚಡ್ಡಿ ಮತ್ತು ತಲೆಗೆ ಸ್ಕಾರ್ಫ್ ಹಾಕಲಾಗಿತ್ತು. ಅಜ್ಜಿಯ ಕಾಲದ್ದೆಂದು ಎತ್ತಿಟ್ಟುಕೊಳ್ಳಲಾಗಿದ್ದ ಗೊಂಬೆಯ ಜತೆ ಮನೆಯಲ್ಲಿ ಸಾಕಿದ್ದ ನಾಯಿ ಆಟವಾಡಿ, ಗೊಂಬೆಯ ಕಾಲಿನ ಪಾದವನ್ನು ಮುರಿದುಹಾಕಿದೆ. ಹಾಗೆಯೇ ಬಲಗೈನ ತೋರುಬೆರಳನ್ನೂ ಮುರಿದಿದೆ.
ಇದನ್ನೂ ಓದಿ: Viral News: 2019ರ ವಿಶ್ವಕಪ್ ಘಟನೆ ನೆನೆದ ಅಂಬಾಟಿ ರಾಯುಡು
ಈ ಮುರಿದ ಗೊಂಬೆಯನ್ನು ಏನು ಮಾಡಬಹುದು ಎಂದು ಯೋಚಿಸಿದ ಮನೆಯ ಮಾಲೀಕ ಅದನ್ನು ಹರಾಜಿಗೆ ಇಟ್ಟಿದ್ದಾನೆ. ಪುರಾತನ ಕಾಲದ ಗೊಂಬೆ ಎನ್ನುವ ಕಾರಣಕ್ಕೆ ಅಲ್ಪಸ್ವಲ್ಪ ಹಣಕ್ಕೆ ಗೊಂಬೆ ಹರಾಜಾಗಬಹುದು ಎಂದು ಆತ ಎಂದುಕೊಂಡಿದ್ದ. ಆದರೆ ಅಮೆರಿಕದ ವ್ಯಕ್ತಿಯೊಬ್ಬರು ಈ ಗೊಂಬೆಗೆ ಬರೋಬ್ಬರಿ 54 ಲಕ್ಷ ರೂ. ಕೊಟ್ಟಿದ್ದಾರೆ.
ಅಂದ ಹಾಗೆ ಈ ಗೊಂಬೆಯ ವಿಶೇಷತೆ ವಿಚಾರಕ್ಕೆ ಬಂದರೆ ಇದನ್ನು 1910ರಲ್ಲಿ ಸಿದ್ಧಮಾಡಲಾಗಿತ್ತು. ಇದು ಒಟ್ಟು 22 ಇಂಚಿನಷ್ಟು ಉದ್ದವಿದೆ. ಆಗಿನ ಕಾಲದಲ್ಲಿ ಮಕ್ಕಳು ಇರುವ ರೀತಿಯಲ್ಲೇ ಗೊಂಬೆಗಳನ್ನು ಮಾಡಿಕೊಡಲಾಗುತ್ತಿತ್ತಂತೆ. 20-30 ವರ್ಷಗಳಿಗೊಮ್ಮೆ ಇಂತಹ ಪುರಾತನ ಗೊಂಬೆ ಸಿಕ್ಕು, ಹರಾಜಿಗೆ ಬರುತ್ತವೆಯಂತೆ. ಅದೇ ಕಾರಣಕ್ಕೆ ಅಷ್ಟೊಂದು ದುಬಾರಿ ದರಕ್ಕೆ ಈ ಗೊಂಬೆ ಹರಾಜಾಗಿದೆ.