Site icon Vistara News

Viral News : ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಇನ್ನಿಲ್ಲ; ಅಬ್ಬಾ! ಎಷ್ಟೊಂದು ವರ್ಷ ಬದುಕಿದ್ದರು!

oldest man of world

ಬ್ರೆಜಿಲಿಯಾ: ಮನುಷ್ಯರು ಸಾಮಾನ್ಯವಾಗಿ 70-80 ವರ್ಷ ಬದುಕುತ್ತಾರೆ. ಆದರೆ ಆ ಎಲ್ಲ ಎಲ್ಲೆಗಳನ್ನು ಮೀರಿ ಬರೋಬ್ಬರಿ 127 ವರ್ಷಗಳ ಕಾಲ ಆರೋಗ್ಯವಂತರಾಗಿ ಬದುಕಿದ್ದ ಬ್ರೆಜಿಲ್‌ನ ಜೋಸ್ ಪಾಲಿನೊ ಗೋಮ್ಸ್ ಇತ್ತೀಚೆಗೆ ನಿಧನರಾಗಿದ್ದಾರೆ. ಅವರು ಈವರೆಗೆ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದರು. ಅವರ ಸಾವಿನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ (Viral News) ಚರ್ಚೆಯಾಗುತ್ತಿದೆ.

ಜೋಸ್‌ ಅವರದ್ದು ಈ ಆಗಸ್ಟ್‌ 4ರಂದು 128ನೇ ಜನ್ಮದಿನಾಚರಣೆಯಿತ್ತು. ಆದರೆ ಅದಕ್ಕೆ ಏಳು ದಿನಗಳಿರುವಾಗ ಅವರು ಪ್ರಾಣ ಬಿಟ್ಟಿದ್ದಾರೆ. ಬ್ರೆಜಿಲ್‌ನ ಕೊರೆಗೊ ಡೆಲ್‌ ಕೆಫೆಯಲ್ಲಿರುವ ತಮ್ಮ ಮನೆಯಲ್ಲೇ ಅವರು ಕೊನೆಯುಸಿರೆಳೆದಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವರದಿಗಳ ಪ್ರಕಾರ ಜೋಸ್‌ ಅವರು ನಾಲ್ಕು ವರ್ಷದ ಹಿಂದಿನವರೆಗೂ ಆರಾಮವಾಗಿ ಕುದುರೆ ಸವಾರಿ ಮಾಡಿಕೊಂಡಿದ್ದರು. ಆದರೆ ಅದಾದ ಮೇಲೆ ಅವರಿಗೆ ಆರೋಗ್ಯ ಅಷ್ಟಾಗಿ ಸರಿಯಿರುತ್ತಿರಲಿಲ್ಲವಾದ್ದರಿಂದ ಕುದುರೆ ಸವಾರಿಯನ್ನು ನಿಲ್ಲಿಸಿದ್ದರು. ಅವರಿಗೆ ಏಳು ಮಕ್ಕಳು, 25 ಮೊಮ್ಮಕ್ಕಳು, 42 ಮರಿ ಮಕ್ಕಳು ಮತ್ತು ಆ ಮರಿ ಮಕ್ಕಳಿಗೆ ಒಟ್ಟು 11 ಮಕ್ಕಳು ಇದ್ದಾರಂತೆ!

ಇದನ್ನೂ ಓದಿ: Viral Video : ಬೈಕ್‌ನಲ್ಲಿ `ಹುಡುಗಿಯರ’ ಲಿಪ್‌ ಲಾಕ್‌!
ಜೋಸ್‌ ಅವರು ಆಧುನಿಕತೆಗೆ ಒಗ್ಗಿಕೊಳ್ಳದೆ ಹಿಂದಿನವರ ರೀತಿಯಲ್ಲಿಯೇ ಸರಳ ಜೀವನವನ್ನು ನಡೆಸುತ್ತಿದ್ದರು. ಅವರು ಕೈಗಾರೀಕರಣಗೊಂಡ ವಸ್ತುಗಳನ್ನು ಉಪಯೋಗಿಸುತ್ತಿರಲಿಲ್ಲ. ಸ್ಥಳೀಯವಾಗಿ ಬೆಳೆದ ಆಹಾರದವನ್ನೇ ಸೇವಿಸುತ್ತಿದ್ದರು ಮತ್ತು ಕೆಲವು ಸಂದರ್ಭಗಳಲ್ಲಿ ಸ್ಥಳೀಯವಾಗಿ ತಯಾರಿಸಿದ ಪಾನೀಯವನ್ನೇ ಸೇವಿಸಿ ಸಂಭ್ರಮಿಸುತ್ತಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪೆಡ್ರಾ ಬೊನಿಟಾ ನಗರದ ನೋಂದಣಿ ಕಚೇರಿಯಲ್ಲಿ 1917ರಲ್ಲಿ ಜೋಸ್‌ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ದಾಖಲೆಯಿದೆ. ಅದರಲ್ಲಿ ಅವರ ಜನ್ಮದಿನವನ್ನು 1895ರ ಆಗಸ್ಟ್‌ 4 ಎಂದು ನಮೂದಿಸಲಾಗಿದೆ. ಅವರು ಎರಡು ವಿಶ್ವ ಯುದ್ಧಗಳು ಮತ್ತು ಮೂರು ಜಾಗತಿಕ ಸಾಂಕ್ರಾಮಿಕ ರೋಗಗಳ ಸಂದರ್ಭವನ್ನು ಎದುರಿಸಿದ್ದು, ಅವುಗಳಲ್ಲಿ ಗೆದ್ದು ಜೀವ ಉಳಿಸಿಕೊಂಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Viral Video: ಐಸ್‌ಕ್ರೀಂ ಕಡ್ಡಿ, ಬೆಂಕಿ ಪೊಟ್ಟಣದ ನೆರಳಿನಲ್ಲೇ ಕಿಂಗ್‌ ಕೊಹ್ಲಿ ಚಿತ್ರ! ಕಲಾವಿದನಿಗೊಂದು ಸಲಾಂ
ಜೋಸ್‌ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಸಾವನ್ನಪ್ಪಿದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಅವರನ್ನು ಜುಲೈ 29ರಂದು ಬೊನಿಟಾದಲ್ಲಿನ ಕೊರೆಗೊ ಡಾಸ್ ಫಿಯಾಲ್ಹೋಸ್ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು.

ಜೋಸ್‌ ಅವರು ವಿಶ್ವದ ಅತ್ಯಂತ ಹಿರಿಯರು ಎಂದು ಗುರುತಿಸಿಕೊಳ್ಳುತ್ತಾರೆ. ಆದರೂ ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ನಲ್ಲಿ ಅವರಿಗೆ ಆ ದಾಖಲೆ ನೀಡಲಾಗಿಲ್ಲ. ಹುಟ್ಟಿದ ದಿನಾಂಕದ ಬಗ್ಗೆ ದಾಖಲೆಗಳು ಸರಿಯಿಲ್ಲ ಎನ್ನುವ ಕಾರಣಕ್ಕೆ ಅವರನ್ನು ವಿಶ್ವದ ಹಿರಿಯ ವ್ಯಕ್ತಿ ಎಂದು ಪರಿಗಣಿಸಲಾಗಿರಲಿಲ್ಲ. ಸದ್ಯ ವಿಶ್ವದ ಹಿರಿಯ ವ್ಯಕ್ತಿ ಎನ್ನುವ ಗಿನ್ನಿಸ್‌ ದಾಖಲೆಯನ್ನು ಸ್ಪೇನ್‌ನ 115 ವರ್ಷದ ಮಾರಿಯಾ ಬ್ರನ್ಯಾಸ್ ಮೊರೆರಾ ಅವರು ಹೊಂದಿದ್ದಾರೆ. ಇವರಿಗೂ ಮೊದಲು ಫ್ರೆಂಚ್‌ನ ಜೀನ್‌ ಕಾಲ್ಮೆಟ್‌ ಅವರು ಈ ದಾಖಲೆಯನ್ನು ಹೊಂದಿದ್ದರು. ಅವರು 1997ರಲ್ಲಿ 122ನೇ ವಯಸ್ಸಿನಲ್ಲಿದ್ದಾಗ ನಿಧನರಾದರು. ಆ ನಂತರ ಆ ದಾಖಲೆ ಮಾರಿಯಾ ಬ್ರನ್ಯಾಸ್ ಮೊರೆರಾ ಅವರದ್ದಾಯಿತು.

Exit mobile version