ಲಂಡನ್: ಯಾರದ್ದೋ ಕೈಗೆ ಸಿಲುಕಿಕೊಂಡು ಒದ್ದಾಡುತ್ತಿರುವವರಿಗೆ ಸಹಾಯ ಮಾಡುವುದು ಪೊಲೀಸರ ಕೆಲಸ. ಅದೇ ರೀತಿಯಲ್ಲಿ ಒದ್ದಾಡುತ್ತಾ ಕೂಗುತ್ತಿದ್ದ ಮಹಿಳೆಯ ಧ್ವನಿಯನ್ನು ಹುಡುಕಿಕೊಂಡು ಆಕೆಗೆ ಸಹಾಯ ಮಾಡಲೆಂದು ಬಂದ ಪೊಲೀಸರು ಅಘಾತಕ್ಕೆ ಒಳಗಾದ ಘಟನೆ ಬ್ರಿಟನ್‌ನಲ್ಲಿ ನಡೆದಿದೆ. ಅಲ್ಲಿ ಮಹಿಳೆಯೇ ಇಲ್ಲದೆ ಮಹಿಳೆಯ ಸದ್ದು ಬಂದಿದ್ದು ಕಂಡು ಪೊಲೀಸರು ಸುಮ್ಮನೆ ವಾಪಸು ಹೋಗುವಂತಾಗಿದೆ. ಈ ವಿಚಾರ ಎಲ್ಲೆಡೆ ವೈರಲ್ (Viral News) ಆಗಿದೆ.
ಬ್ರಿಟನ್ ನಿವಾಸಿಯೊಬ್ಬರು ಇತ್ತೀಚೆಗೆ ಪೊಲೀಸರಿಗೆ ಕರೆ ಮಾಡಿ ತಮ್ಮ ಪಕ್ಕದ ಮನೆಯಲ್ಲಿ ಯಾರೋ ಒಬ್ಬ ಹೆಂಗಸು ಸಹಾಯಕ್ಕಾಗಿ ಕೂಗುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನು ಕೇಳಿದ ಪೊಲೀಸರು ಅವರ ಬಳಿ ವಿಳಾಸವನ್ನು ಪಡೆದುಕೊಂಡು ಆ ಮಹಿಳೆಗೆ ಸಹಾಯ ಮಾಡಲೆಂದು ಬಂದಿದ್ದಾರೆ. ಹಾಗೆ ಮನೆಗೆ ಬಂದ ಪೊಲೀಸರನ್ನು ಆ ಮನೆಯ ಮಾಲೀಕ ಮನೆಯೊಳಗೆ ಕರೆದುಕೊಂಡು ಹೋಗಿದ್ದಾನೆ. ಆಗ ನೋಡಿದರೆ ಅಲ್ಲಿ ಯಾವುದೇ ಮಹಿಳೆ ಇರಲೇ ಇಲ್ಲ. ಅಲ್ಲಿ ಆ ರೀತಿಯಲ್ಲಿ ಮಹಿಳೆಯ ಧ್ವನಿಯಲ್ಲಿ ಕೂಗಿದ್ದು ಒಂದು ಗಿಳಿ ಎನ್ನುವುದು ತಿಳಿದುಬಂದಿದೆ.
ಇದನ್ನೂ ಓದಿ: Viral Video: ಈಗೇಕೆ ಬಂದಿದ್ದೀರಿ? ನೆರೆ ಬಂದಾಗ ಕ್ಷೇತ್ರ ನೆನಪಾದ ಶಾಸಕನ ಕಪಾಳಕ್ಕೆ ಏಟು ಕೊಟ್ಟ ಮಹಿಳೆ!
ಕ್ಯಾನ್ವೆ ದ್ವೀಪದ ನಿವಾಸಿಯಾಗಿರುವ ಸ್ಟೀವ್ ವುಡ್ಸ್ ಮನೆಗೆ ಈ ರೀತಿ ಪೊಲೀಸರು ಹೋಗಿರುವುದು. ಸ್ಟೀವ್ ವುಸ್ಟ್ ಕಳೆದ 21 ವರ್ಷಗಳಿಂದ ಪಕ್ಷಿಗಳನ್ನು ಸಾಕುತ್ತಿದ್ದಾರಂತೆ. ಅವರ ಬಳಿ ಸದ್ಯ ಎರಡು ಬಡ್ಜಿಗಳು, ಹಾನ್ಸ್ ಮಕಾವ್, ಎರಡು ಅಮೆಜಾನ್ ಗಿಳಿ, ಎಂಟು ಭಾರತೀಯ ರಿಂಗ್‌ನೆಕ್‌ಗಳು ಸೇರಿ ವಿವಿಧ ರೀತಿಯ ಪಕ್ಷಿಗಳು ಇವೆಯಂತೆ. ಅವುಗಳಲ್ಲಿ ಹಲವಕ್ಕೆ ಮನುಷ್ಯರ ರೀತಿಯಲ್ಲಿ ಸದ್ದು ಮಾಡುವುದೂ ತಿಳಿದಿದೆಯಂತೆ. ಅದೇ ರೀತಿಯಲ್ಲಿ ಆ ಮುಂಜಾನೆ ಗಿಳಿಯೊಂದು ಜೋರಾಗಿ ಮಹಿಳೆಯ ಧ್ವನಿಯಲ್ಲಿ ಕೂಗಿಕೊಂಡಿದೆಯಂತೆ.
ಆ ಧ್ವನಿಯನ್ನೇ ಕೇಳಿಕೊಂಡು ಅವರ ಪಕ್ಕದ ಮನೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಅದನ್ನೇ ಹುಡುಕಿಕೊಂಡು ಪೊಲೀಸರು ಸ್ಟೀವ್ ಮನೆಯವರೆಗೆ ಬಂದಿದ್ದಾರೆ. ಈ ವಿಚಾರದಲ್ಲಿ ಪಕ್ಕದ ಮನೆಯವರದ್ದಾಗಲೀ ಅಥವಾ ಪೊಲೀಸರದ್ದಾಗಲೀ ಯಾವುದೇ ತಪ್ಪಿಲ್ಲ ಎಂದು ಸ್ಟೀವ್ ಹೇಳಿದ್ದಾರೆ. ಅವರು ಸರಿಯಾಗಿಯೇ ಮಾಡಿದ್ದಾರೆ. ಆದರೆ ನಮ್ಮ ಗಿಳಿಯೇ ನಮ್ಮೊಂದಿಗೆ ಆಟವಾಡಿದೆ ಎಂದು ಅವರು ಮಾಧ್ಯಮದವರೆದುರು ಹೇಳಿಕೊಂಡಿದ್ದಾರೆ. ಈ ಗಿಳಿಯ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಭಾರೀ ಸದ್ದು ಮಾಡುತ್ತಿದೆ. ಒಂದು ಗಿಳಿ ಹಲವರಿಗೆ ಕೆಲಸ ಕೊಟ್ಟ ಬಗೆಯನ್ನು ಜನರು ಚರ್ಚಿಸಲಾರಂಭಿಸಿದ್ದಾರೆ.