ವಿಮಾನಗಳಲ್ಲಿ ಪ್ರಯಾಣಿಕರ ಅಶಿಸ್ತು, ಹೊಲಸು ವರ್ತನೆಗೆ ಸಂಬಂಧಪಟ್ಟ ಹಲವು ಪ್ರಕರಣಗಳು ಇತ್ತೀಚೆಗೆ ವರದಿಯಾಗುತ್ತಿವೆ. ಸಹಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದು, ಗಗನಸಖಿಯೊಂದಿಗೆ ಜಗಳಕ್ಕೆ ಇಳಿದಿದ್ದು, ಪ್ರಯಾಣಿಕರೇ ಪರಸ್ಪರ ಹೊಡೆದಾಡಿದ್ದು- ಹೀಗೆ..ವಿಮಾನದಲ್ಲಿ ಪ್ರಯಾಣ ಮಾಡುವವರು ಮೇಲ್ಪಂಕ್ತಿಯವರು, ಅವರಲ್ಲಿ ಶಿಸ್ತು ಇರುತ್ತದೆ ಎಂಬ ನಂಬಿಕೆಯನ್ನೇ ಸುಳ್ಳಾಗಿಸುವ ಹಲವು ಘಟನೆಗಳು ನಡೆದ ಬಗ್ಗೆ ನಾವು ಕೇಳಿದ್ದೇವೆ. ಈ ಮಧ್ಯೆ ವಿಮಾನದಲ್ಲಿ ಒಂದು ಫನ್ನಿ (ತಮಾಷೆಯುಕ್ತ)ಸನ್ನಿವೇಶ ನಡೆದಿದ್ದು ವಿಡಿಯೊ ವೈರಲ್ ಆಗಿದೆ.
ಒಬ್ಬ ಯುವಕ ಇಂಡಿಗೋ ವಿಮಾನದ ಸೀಟ್ನಲ್ಲಿ ಕುಳಿತಿದ್ದಾನೆ. ಆತ ಅಂಗೈಯಲ್ಲಿ ಗುಟ್ಕಾವನ್ನು ಹಾಕಿಕೊಂಡು ಉಜ್ಜುತ್ತಿದ್ದಾನೆ. ಅಲ್ಲಿಯೇ ಹೋಗುತ್ತಿದ್ದ ಗಗನಸಖಿಯನ್ನು ಎಕ್ಸ್ಕ್ಯೂಸ್ ಮಿ ಎಂದು ಹತ್ತಿರ ಕರೆದ. ಆಕೆ ಸಮೀಪ ಬಂದಾಗ, ‘ವಿಮಾನ ಹೊರಟಮೇಲೆ ಮಾರ್ಗಮಧ್ಯೆಯಲ್ಲಿ ಒಮ್ಮೆ ವಿಮಾನದ ಕಿಟಕಿ ತೆರೆಯಬಹುದಾ, ನಾನು ಈಗ ಗುಟ್ಕಾ ಹಾಕುತ್ತಿದ್ದೇನೆ, ನೀವು ಕಿಟಕಿ ತೆರೆದರೆ ನನಗೆ ಅದನ್ನು ಉಗುಳಲು ಸಹಾಯವಾಗುತ್ತದೆ’ ಎಂದು ಹೇಳಿದ್ದಾನೆ. ಆಗ ಏರ್ಹೋಸ್ಟೆಸ್ ನಕ್ಕುಬಿಟ್ಟಿದ್ದಾಳೆ. ಆಗ ಅವನಿಗೂ ನಗು ಬಂದಿದೆ. ಅಷ್ಟೇ ಅಲ್ಲ, ಅಕ್ಕಪಕ್ಕ ಕುಳಿತಿದ್ದ ಪ್ರಯಾಣಿಕರೂ ಜೋರಾಗಿ ನಕ್ಕಿದ್ದಾರೆ. ಈ ವಿಡಿಯೋ ನೋಡಿದರೆ ನೀವೂ ನಗುತ್ತೀರಿ..ಪಕ್ಕಾ!