Site icon Vistara News

Viral Video | ‘ಇರಿ ಅಜ್ಜಿ, ಮಾತಾಡ್ಬೇಕು’-ಪುಟ್ಟ ಹೆಜ್ಜೆಗಳನ್ನಿಡುತ್ತ ಬಂದು ನಿಂತ ಪೆಂಗ್ವಿನ್​; ಕೊಕ್ಕು ಕುಣಿಸುವ ವಯ್ಯಾರ ನೋಡಿ!

Penguin Follow Elderly Woman Viral Video

ಹಾರಲಾಗದ ಪಕ್ಷಿ ಪೆಂಗ್ವಿನ್ ಸಖತ್​ ಕ್ಯೂಟ್​. ಎರಡೇ ಕಾಲುಗಳಲ್ಲಿ ಪುಟ್ಟಪುಟ್ಟ ಹೆಜ್ಜೆಯಿಡುತ್ತ ನಡೆಯುತ್ತವೆ. ಮುದ್ದುಕ್ಕಿಸುವಂತೆ ಓಡುತ್ತವೆ. ನಾವು ಮನುಷ್ಯರು ನಡೆದಾಡುವಂತೆ, ಇವೂ ನಡೆಯುತ್ತವೆ. ಪೆಂಗ್ವಿನ್​​ಗಳು ಮನುಷ್ಯ ಸ್ನೇಹಿ.. ಮನುಷ್ಯರ ಸಮೀಪಕ್ಕೆ ಬರಬಲ್ಲವು. ಇಲ್ನೋಡಿ, Gabriele Corno ಎಂಬ ಟ್ವಿಟರ್​ ಅಕೌಂಟ್​​ನಲ್ಲಿ ಪೋಸ್ಟ್ ಆಗಿ, ಸಿಕ್ಕಾಪಟೆ ವೈರಲ್ ಆಗುತ್ತಿರುವ ಈ ವಿಡಿಯೊವನ್ನು..-ಪೆಂಗ್ವಿನ್​ ಮತ್ತು ಅಜ್ಜಿಯೊಬ್ಬರ ನಡುವಿನ ‘ಕುಶಲೋಪರಿ’ ಮಾತುಕತೆಯನ್ನು!

ಆಗಷ್ಟೇ ಮಳೆಬಂದು ನಿಂತಿದೆ. ನೆಲವೆಲ್ಲ ನೀರಿನಿಂದ ಹಸಿಯಾಗಿದೆ. ಅಜ್ಜಿಯೊಬ್ಬರು ತಲೆಗೆಲ್ಲ ಸ್ಕಾರ್ಫ್​ ಕಟ್ಟಿಕೊಂಡು, ಹೆಗಲಿಗೊಂದು ಬ್ಯಾಗ್​ ಹಾಕಿಕೊಂಡು, ಎಡಗೈಯಲ್ಲಿ ಚೀಲ ಹಿಡಿದು, ಮಡಚಿದ ಕೊಡೆಯನ್ನು ಬಲಗೈಯಲ್ಲಿ ಹಿಡಿದು, ಅದನ್ನು ಊರುತ್ತ ರಸ್ತೆಯಲ್ಲಿ ಹೋಗುತ್ತಿದ್ದಾರೆ. ಆಗ ಪೆಂಗ್ವಿನ್​​ವೊಂದು ಅವರನ್ನು ಅಡ್ಡಗಟ್ಟಿದೆ. ‘ಇರಿ ಅಜ್ಜಿ, ಮಾತಾಡ್ಬೇಕು’ ಎನ್ನುವ ಭಾವ ಹುಟ್ಟಿಸುವ ರೀತಿಯಲ್ಲಿ, ತನ್ನೆರಡೂ ರೆಕ್ಕೆಯನ್ನು ಅಗಲ ಮಾಡಿಕೊಂಡು ಪುಟಾಣಿ ಹೆಜ್ಜೆಯನ್ನಿಡುತ್ತ ಅಜ್ಜಿ ಬಳಿ ಹೋಗಿ ನಿಂತಿದೆ. ಆ ಪೆಂಗ್ವಿನ್​​ ಎದುರು ಅರೆಬಾಗಿ ನಿಂತ ಹಿರಿಯ ಮಹಿಳೆ ಆ ಪಕ್ಷಿಗೆ ಫ್ರೆಂಚ್​ ಭಾಷೆಯಲ್ಲಿ ಅದೇನೇನೋ ಹೇಳುತ್ತಾರೆ. ಸ್ವಲ್ಪ ಜೋರಾಗಿಯೇ ಮಾತಾಡುತ್ತಾರೆ. ಅದಕ್ಕೆ ಪ್ರತಿಯಾಗಿ ಪೆಂಗ್ವಿನ್​ ಕೂಡ ತನ್ನ ಮುಖ, ಕೊಕ್ಕುಗಳನ್ನು ತಿರುಗಿಸುತ್ತದೆ. ಅಜ್ಜಿಯ ಮಾತುಗಳಿಗೆ ಅದು ಪ್ರತಿಸ್ಪಂದಿಸುತ್ತದೆ. ಅದೂ ಏನೋ ಹೇಳುತ್ತಿದೆಯೇನೋ ಎಂದು ನೋಡುಗರಾದ ನಮಗೆ ಅನ್ನಿಸುತ್ತಿರುತ್ತದೆ. ಹೀಗೆ ಕೆಲ ಹೊತ್ತು ಏನೋ ಹೇಳಿದ ಅಜ್ಜಿ ಅಲ್ಲಿಂದ ಹೊರಟರೆ, ಆಗಲೂ ಬಿಡದ ಪೆಂಗ್ವಿನ ಅಜ್ಜಿಯ ಹಿಂದೇ ಹೆಜ್ಜೆ ಹಾಕಿದೆ. ಅಜ್ಜಿ ಮತ್ತೆ ನಿಂತಿದ್ದಾರೆ. ಆಗ ಪೆಂಗ್ವಿನ್ ಆ ಮಹಿಳೆಗೆ ಇನ್ನಷ್ಟು ಸಮೀಪ ನಿಂತು, ಅವರು ಹಿಡಿದಿದ್ದ ಛತ್ರಿಯನ್ನೆಲ್ಲ ಮುಟ್ಟುತ್ತದೆ. ವಿವರಣೆಗೆ ನಿಲುಕದ ಉಭಯ ಕುಶಲೋಪರಿಯನ್ನು ನೀವು ಈ ವಿಡಿಯೊದಲ್ಲಿ ನೋಡಬಹುದು!

ನೆಟ್ಟಿಗರಂತೂ ಈ ವಿಡಿಯೊ ನೋಡಿ ಸಿಕ್ಕಾಪಟೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆ ರಸ್ತೆಯಲ್ಲಿ ಪೆಂಗ್ವಿನ್​ ಏನು ಮಾಡುತ್ತಿದೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇನ್ನೂ ಹಲವರು ಆ ಅಜ್ಜಿ ಏನು ಹೇಳಿರಬಹುದು, ಪೆಂಗ್ವಿನ್​ಗೆ ಏನು ಅರ್ಥ ಆಗಿರಬಹುದು ಎಂದೂ ಕಮೆಂಟ್ ಮಾಡಿದ್ದಾರೆ. ಒಟ್ಟಾರೆ ಮುದ್ದು ಪೆಂಗ್ವಿನ್​ ಮತ್ತು ಕ್ಯೂಟ್​ ಅಜ್ಜಿಯ ವಿಡಿಯೊ ಅನೇಕರಿಗೆ ಸಖತ್​ ಇಷ್ಟವಾಗುತ್ತಿದೆ.

ಇದನ್ನೂ ಓದಿ: Viral Video | ಕಳ್ಳ ತಪ್ಪಿಸಿಕೊಳ್ಳಲು ತಡೆಯಾಯ್ತು ಗಾಜಿನ ಬಾಗಿಲು; ಶಾಂತವಾಗಿಯೇ ನಿಂತು ನೋಡ್ತಿದ್ದ ಅಂಗಡಿ ಮಾಲೀಕ!

Exit mobile version