ಪೈಲಟ್ಗಳು ಎಚ್ಚರ ತಪ್ಪಿದರೆ, ಚೂರೇಚೂರು ಮೈಮರೆತರೂ ವಿಮಾನ ಅಪಘಾತಕ್ಕೀಡಾಗುತ್ತದೆ. ಅಂಥದ್ದರಲ್ಲಿ ಒಂದು ವಿಮಾನದಲ್ಲಿದ್ದ ಇಬ್ಬರೂ ಪೈಲಟ್ಗಳು ನಿದ್ದೆಯನ್ನೇ ಮಾಡಿಬಿಟ್ಟರೆ..! -ಇದು ಊಹೆಯಲ್ಲ, ನಿಜಕ್ಕೂ ನಡೆದ ಘಟನೆ. ಉತ್ತರ ಆಫ್ರಿಕಾದ ಸೂಡಾನ್ನಿಂದ ಪೂರ್ವ ಆಫ್ರಿಕಾದ ಇಥಿಯೋಪಿಯಾಕ್ಕೆ ವಿಮಾನವೊಂದು ಹೊರಟಿತ್ತು. ಅದರಲ್ಲಿ ಇಬ್ಬರು ಪೈಲಟ್ಗಳು ಇದ್ದರು. ಆದರೆ ಇವರಿಬ್ಬರೂ ಏಕಕಾಲದಲ್ಲಿ ನಿದ್ದೆಗೆ ಜಾರಿದ್ದಾರೆ. ಅದೂ ಸಮುದ್ರಮಟ್ಟದಿಂದ 37 ಸಾವಿರ ಅಡಿಗಳಷ್ಟು ಎತ್ತರದಲ್ಲಿ ವಿಮಾನ ಹಾರುತ್ತಿದ್ದಾಗ. ಆದರೆ ಅದೃಷ್ಟಕ್ಕೆ ಏನೂ ಅಪಾಯ ಆಗಲಿಲ್ಲ ಮತ್ತು ಅವರು ಸಕಾಲದಲ್ಲಿ ಎಚ್ಚರಗೊಂಡು ವಿಮಾನವನ್ನು ಸುರಕ್ಷಿತವಾಗಿ, ಯಾರಿಗೂ ಏನೂ ಅಪಾಯವಾಗದಂತೆ ಲ್ಯಾಂಡ್ ಕೂಡ ಮಾಡಿಸಿದ್ದಾರೆ. ದೊಡ್ಡ ಅವಘಡವೊಂದು ತಪ್ಪಿದೆ ಎಂದು ಏವಿಯೇಷನ್ ಹೆರಾಲ್ಡ್ ವೆಬ್ಸೈಟ್ ವರದಿ ಮಾಡಿದೆ.
ಬೋಯಿಂಗ್ 737 ವಿಮಾನ ET-343 ಸೂಡಾನ್ನಿಂದ ಹೊರಟು ಇಥಿಯೋಪಿಯಾದ ಅಡಿಸ್ ಅಬಾಬಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿತ್ತು. ಟೇಕ್ ಆಫ್ ಆದ ಬಳಿಕ ಫ್ಲೈಟ್ ಮ್ಯಾನೇಜ್ಮೆಂಟ್ ಕಂಪ್ಯೂಟರ್ನಿಂದ ಯೋಜಿತವಾದ ಮಾರ್ಗದಲ್ಲೇ ಸಂಚರಿಸುತ್ತಿತ್ತು. ಸಾಮಾನ್ಯವಾಗಿ ವಿಮಾನಗಳು ಇಳಿಯುವ ಸ್ಥಳ ಹತ್ತಿರ ಬಂದಾಗ ಕೆಳಕ್ಕೆ ಇಳಿಯುತ್ತ ಬರುತ್ತವೆ. ಆದರೆ ಈ ವಿಮಾನ ಮಾರ್ಗ ಮಧ್ಯೆಯೇ ಕೆಳಗೆ ಬರುತ್ತಿತ್ತು. ಅದನ್ನು ಗಮನಿಸಿದ ಏರ್ ಟ್ರಾಫಿಕ್ ಕಂಟ್ರೋಲರ್ (ATC)ಗಳು ಪೈಲಟ್ಗಳನ್ನು ಸಂಪರ್ಕಿಸಲು ತುಂಬ ಪ್ರಯತ್ನ ಪಟ್ಟರು. ಆದರೆ ನಿದ್ದೆಗೆ ಜಾರಿದ್ದ ಪೈಲಟ್ಗಳು ಪ್ರತಿಕ್ರಿಯೆ ನೀಡಲೇ ಇಲ್ಲ, ಎಟಿಎಸ್ನಿಂದ ಕಾಲ್ ಬರುತ್ತಿರುವುದು ಅವರಿಗೆ ಗೊತ್ತೂ ಆಗಲಿಲ್ಲ ಬಿಡಿ.
ಇಷ್ಟೆಲ್ಲ ಆದ ಮೇಲೆ ವಿಮಾನ ರನ್ ವೇ ತಲುಪಬೇಕಾದ ಮಾರ್ಗವನ್ನೂ ಮೀರಿ ಹಾರಾಟ ನಡೆಸಿದೆ. ಫ್ಲೈಟ್ ದಾರಿ ತಪ್ಪುತ್ತಿದ್ದಂತೆ ಅಟೋಪೈಲಟ್ ಸಂಪರ್ಕ ಕಡಿತಗೊಂಡು, ಎಚ್ಚರಿಕೆ ಅಲಾರಾಂ ಬಾರಿಸಿದೆ. ಹೀಗೆ ಅಲರ್ಟ್ ದೊಡ್ಡದಾಗಿ ಶಬ್ದ ಮಾಡುತ್ತಿದ್ದಂತೆ ಇಬ್ಬರೂ ಪೈಲಟ್ಗಳೂ ಎಚ್ಚೆತ್ತು, ವಿಮಾನ ಹಾರಾಟವನ್ನು ಸುಸ್ಥಿತಿಗೊಳಿಸಿದ್ದಾರೆ. ಅದಾಗಿ 25 ನಿಮಿಷಗಳ ಕಾಲ ಮತ್ತೆ ವಿಮಾನ ಹಾರಾಟ ನಡೆಸಿ, ಸುರಕ್ಷಿತವಾಗಿ ಲ್ಯಾಂಡ್ ಮಾಡಿಸಿದ್ದಾರೆ. ಇದೊಂದು 154 ಸೀಟ್ಗಳುಳ್ಳ ವಿಮಾನವಾಗಿದ್ದು, ಪ್ರಯಾಣಿಕರು ಎಷ್ಟು ಮಂದಿ ಇದ್ದರು ಎಂಬುದು ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: ಶ್ರೀಲಂಕಾ ಬಂದರು ತಲುಪಿದ ಚೀನಾ ಬೇಹುಗಾರಿಕೆ ನೌಕೆ; ಅದಕ್ಕೂ ಮೊದಲೇ ವಿಮಾನ ಕಳಿಸಿದ ಭಾರತ