ಲಖನೌ: ಉತ್ತರ ಪ್ರದೇಶ ಪೊಲೀಸರು (Uttar Pradesh Police) ಮಹಿಳೆಯರನ್ನು ಲಾಠಿಯಿಂದ ಬಲವಾಗಿ ಥಳಿಸುತ್ತಿರುವ ಮತ್ತು ಅಸಭ್ಯ ಶಬ್ದಗಳಿಂದ ಅವರನ್ನು ನಿಂದಿಸುತ್ತಿರುವ ವಿಡಿಯೊ ವೈರಲ್ ಆಗಿದ್ದು, ಪೊಲೀಸರ ವರ್ತನೆಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ. ಇದು ಪೊಲೀಸರ ದೌರ್ಜನ್ಯ ಎಂದು ಅನೇಕರು ಆರೋಪ ಮಾಡುತ್ತಿದ್ದಾರೆ.
ಈ ಘಟನೆ ನಡೆದದ್ದು ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯ ಜಲಾಲ್ಪುರದಲ್ಲಿರುವ ಅಂಬೇಡ್ಕರ ನಗರ ಜಿಲ್ಲೆಯ ಜಲಾಲ್ಪುರದಲ್ಲಿ. ಇಲ್ಲಿರುವ ಡಾ. ಅಂಬೇಡ್ಕರ್ ಪ್ರತಿಮೆಯನ್ನು ಇತ್ತೀಚೆಗೆ ಧ್ವಂಸಗೊಳಿಸಲಾಗಿದೆ. ಜಮೀನು ವಿವಾದವೇ ಈ ಅಂಬೇಡ್ಕರ್ ಪ್ರತಿಮೆ ನಾಶಕ್ಕೆ ಕಾರಣ. ಅಂಬೇಡ್ಕರ್ ಪ್ರತಿಮೆ ಧ್ವಂಸಗೊಳಿಸಿದ್ದನ್ನು ವಿರೋಧಿಸಿ ಒಂದಷ್ಟು ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದರು. ಅವರನ್ನು ಅಲ್ಲಿಂದ ಚದುರಿಸಲು ಪೊಲೀಸರು ಬಂದಾಗ ಈ ಘಟನೆ ನಡೆದಿದೆ.
ಪೊಲೀಸರು ಹೇಳೋದೇನು?
ಇನ್ನು ವಿಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರು ಸ್ಪಷ್ಟನೆ ಕೊಟ್ಟಿದ್ದಾರೆ. ಪ್ರತಿಭಟನೆ ಮಿತಿಮೀರುತ್ತಿತ್ತು. ಅವರನ್ನು ಅಲ್ಲಿಂದ ಚದುರಿಸಲು ಸ್ಥಳಕ್ಕೆ ಹೋದರೆ ಮಹಿಳೆಯರು ನಮ್ಮ ಮೇಲೆ, ನಮ್ಮ ವಾಹನದ ಮೇಲೆಲ್ಲ ಕಲ್ಲು ಎಸೆದರು. ನಮ್ಮ ಮಹಿಳಾ ಸಿಬ್ಬಂದಿಯ ತಲೆ ಕೂದಲು ಹಿಡಿದು ಎಳೆದಾಡಿದರು. ಅವರನ್ನು ನಿಯಂತ್ರಿಸಲು ಸಾಧ್ಯವಾಗದೆ ಲಾಠಿ ಚಾರ್ಜ್ ನಡೆಸಬೇಕಾಯಿತು ಎಂದು ಹೇಳಿದ್ದಾರೆ. ಆದರೆ ನೆಟ್ಟಿಗರು ವಿಡಿಯೊ ನೋಡಿ ಕಿಡಿಕಾರುತ್ತಿದ್ದಾರೆ. ಮಹಿಳೆಯರ ಮೇಲೆ ಲಾಠಿ ಬಲಪ್ರಯೋಗವಾಗಿದೆ ಎಂದು ಆರೋಪಿಸುತ್ತಿದ್ದಾರೆ.