Site icon Vistara News

Viral Photo | Pleased ಎಂಬ ಶಬ್ದದಿಂದ ತೀವ್ರ ಟೀಕೆಗೆ ಗುರಿಯಾದ ರಾಜಸ್ಥಾನ ಕಂಪನಿ; ಮಹಾ ಪ್ರಮಾದ ಇದು

Rajasthan Company

ರಾಜಸ್ಥಾನ ಮೂಲದ ಕಂಪನಿಯೊಂದು ಮಾಡಿದ ಎಡವಟ್ಟು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ಸುದ್ದಿ ಮಾಡುತ್ತಿದೆ. ಅಲ್ಲಿನ ಎ.ಕೆ. ಸ್ಪಿಂಟೆಕ್ಸ್​ ಲಿಮಿಟೆಡ್​ ಎಂಬ ಕಂಪನಿ, ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​ಗೆ ಬರೆದ ಪತ್ರದಲ್ಲಿ ಆದ ಒಂದು ಬಹುದೊಡ್ಡ ಪ್ರಮಾದ ನಗೆಪಾಟಲಿಗೀಡಾಗಿದೆ. D – Dukhi Aatma ಎಂಬುವರು ತಮ್ಮ ಟ್ವಿಟರ್​ ಅಕೌಂಟ್​​ನಲ್ಲಿ ಈ ಪತ್ರವನ್ನು ಶೇರ್​ ಮಾಡಿಕೊಂಡಿದ್ದು, ಹಳೇ ಟೆಂಪ್ಲೇಟ್​ ಇಟ್ಟುಕೊಂಡು, ಹಿಂದೆ-ಮುಂದೆ ನೋಡದೆ ಪತ್ರ ಬರೆದರೆ, ಇಂಥ ಎಡವಟ್ಟುಗಳಾಗದೆ, ಇನ್ನೇನು ಆದೀತು? ಎಂದು ಪ್ರಶ್ನಿಸಿದ್ದಾರೆ.

ಎ.ಕೆ. ಸ್ಪಿಂಟೆಕ್ಸ್​ ಲಿಮಿಟೆಡ್ ಕಂಪನಿಯ ಪ್ರವರ್ತಕರೊಬ್ಬರು ತೀರಿಕೊಂಡಿದ್ದರು. ಆ ವಿಷಯವನ್ನು ಉಲ್ಲೇಖಿಸಿ ಸಂಸ್ಥೆ ಬಾಂಬೆ ಸ್ಟಾಕ್​ ಎಕ್ಸ್​ಚೇಂಜ್​​ಗೆ ಬರೆದ ಪತ್ರವಿದು. ಪತ್ರದಲ್ಲಿ We are pleased to inform that promoter of our company Smt. Saroj Devi Chhabra holding 4,41,000 Shares (8.76%) is no more in this world ಎಂಬ ಸಾಲುಗಳನ್ನು ಬರೆಯಲಾಗಿದೆ. ಅಂದರೆ ನಮ್ಮ ಕಂಪನಿಯಲ್ಲಿ 4,41,000 ಷೇರುಗಳನ್ನು (ಶೇ.8.76) ಹೊಂದಿದ್ದ ಸರೋಜಾ ದೇವಿ ಛಾಬ್ರಾ ಇಹಲೋಕ ತ್ಯಜಿಸಿದ್ದಾರೆ ಎಂದು ಹೇಳಲು ಸಂತೋಷವಾಗುತ್ತಿದೆ ಎಂದು ಅರ್ಥ. ಸಾವಿನ ಸುದ್ದಿ ಬರೆಯುವಾಗ pleased ಎಂಬ ಶಬ್ದ ಬಳಕೆ ಯಾರೂ ಮಾಡುವುದಿಲ್ಲ. ಇಲ್ಲಿ saddened ಎಂಬ ಪದ ಪ್ರಯೋಗ ಮಾಡಬೇಕಿತ್ತು. ಕಂಪನಿಯ ಕಾರ್ಯದರ್ಶಿ, ಅನುಸರಣಾ ಅಧಿಕಾರಿಗಳ ಸಹಿಯನ್ನೊಳಗೊಂಡ ಈ ಪತ್ರದ ಫೋಟೋ ವೈರಲ್ ಆಗುತ್ತಿರುವ ಜತೆಗೆ ಟೀಕೆಗೂ ಗುರಿಯಾಗುತ್ತಿದೆ. ನೆಟ್ಟಿಗರು ಕಂಪನಿಯ ನಿರ್ಲಕ್ಷ್ಯವನ್ನು ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ: ವೈರಲ್‌ ನ್ಯೂಸ್ | ಅಧ್ಯಾಪಕರ ಮನೆಗೆ ಕನ್ನ ಹಾಕಿದ ಕಳ್ಳನ ಗುರುಭಕ್ತಿ ಹೀಗಿತ್ತು!

Exit mobile version