ಕಚೇರಿಗೆ ತಡವಾಗಿ ಹೋಗುವುದು, ಮ್ಯಾನೇಜರ್/ಚೀಫ್ ಬಳಿ ಬೈಸಿಕೊಳ್ಳುವುದು ತೀರ ಸಾಮಾನ್ಯ. ಲೇಟ್ ಆಗಿ ಬಂದಿದ್ದಕ್ಕೆ ಮ್ಯಾನೇಜರ್ ಬೈದಾಗ, ಅದೆಷ್ಟೋ ಉದ್ಯೋಗಿಗಳು ನಿರುತ್ತರರಾಗುತ್ತಾರೆ. ಏನಾದರೂ ತಿರುಗಿ ಉತ್ತರ ಕೊಡಲು ಹಿಂಜರಿಯುತ್ತಾರೆ. ಇನ್ನು ಕೆಲವು ಬಾಸ್ಗಳು ಬಿಡಿ, ಫ್ರೆಂಡ್ಲಿಯಾಗಿ ಇರುತ್ತಾರೆ. ನೀವು ಲೇಟ್ ಆಗಿ ಬಂದಿದ್ದಕ್ಕೆ ನಿಮ್ಮನ್ನು ಕ್ಷಮಿಸಿಬಿಡುತ್ತಾರೆ.
ಆದರೆ ರಾಜಸ್ಥಾನದಲ್ಲಿ ಒಬ್ಬ ಸರ್ಕಾರಿ ಉದ್ಯೋಗಿ ತಡವಾಗಿ ಬಂದಿದ್ದಲ್ಲದೆ, ಅದನ್ನು ಪ್ರಶ್ನಿಸಿದ ತನ್ನ ಮೇಲಧಿಕಾರಿಗೆ ತುಂಬ ಕಟುವಾಗಿ ಉತ್ತರ ಕೊಟ್ಟಿದ್ದಾರೆ. ಉದ್ಯೋಗಿ ಇಂಥದ್ದೊಂದು ಉತ್ತರ ಕೊಡಬಹುದು ಎಂದು ಮೇಲಧಿಕಾರಿ ನಿರೀಕ್ಷೆಯನ್ನೂ ಮಾಡಿರದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಜೈಫುರದ ವಿದ್ಯುತ್ ವಿತರಣ ನಿಗಮ ಲಿಮಿಟೆಡ್ನಲ್ಲಿ ಕಮರ್ಷಿಯಲ್ ಅಸಿಸ್ಟೆಂಟ್ ಆಗಿರುವ ಅಜಿತ್ ಸಿಂಗ್ಗೆ ಅವರ ಬಾಸ್ ಅಂದರೆ ಮೇಲಧಿಕಾರಿ ಜಿ.ಎಸ್.ಬೈರ್ವಾ ಎಂಬುವರು ನೋಟಿಸ್ ಕೊಟ್ಟಿದ್ದರು. ಕೋಟಾ ಝೋನ್ನ ಮುಖ್ಯ ಇಂಜಿನಿಯರ್ ಆಗಿರುವ ಜಿ.ಎಸ್.ಬೈರ್ವಾ ಅವರು ಜಲೈ 14ರಂದು ಜೈಪುರ ವಿದ್ಯುತ್ ವಿತರಣ ನಿಗಮಕ್ಕೆ ಅಚಾನಕ್ ಆಗಿ ಇನ್ಸ್ಪೆಕ್ಷನ್ಗಾಗಿ ಬಂದಿದ್ದರು.
ಇದನ್ನೂ ಓದಿ: Viral Video: ಮಹಾಕಾಲನ ಮೆರವಣಿಗೆ ಮೇಲೆ ನೀರು ಉಗುಳಿದ್ದವರ ಮನೆ ಧ್ವಂಸ; ಜತೆಗೆ ತಮಟೆ, ಡ್ರಮ್ ವಾದನ
ಜಿ.ಎಸ್.ಬೈರ್ವಾ ಬಂದಾಗ ಅಜಿತ್ ಸಿಂಗ್ ಇರಲಿಲ್ಲ. ಹೀಗಾಗಿ ಅವರ ಬಳಿ ಸ್ಪಷ್ಟನೆ ಕೇಳಿ ನೋಟಿಸ್ ಕೊಟ್ಟಿದ್ದರು. ಬೆಳಗ್ಗೆ ಬೈರ್ವಾ ಅವರು ತಪಾಸಣೆಗೆ ಬಂದಾಗ ಅಜಿತ್ ಸಿಂಗ್ ಅಲ್ಲಿರಲಿಲ್ಲ. ಹಾಜರಿ ಪುಸ್ತಕದಲ್ಲಿ ಅವರ ಸಹಿಯೂ ಇರಲಿಲ್ಲ. ಹೀಗಾಗಿ ಸಿಟ್ಟಾದ ಜಿ.ಎಸ್.ಬೈರ್ವಾ ಗೈರಾದ ಬಗ್ಗೆ ಸ್ಪಷ್ಟನೆ ಕೊಡಿ ಎಂದು ಅಜಿತ್ ಸಿಂಗ್ಗೆ ನೋಟಿಸ್ ಕೊಟ್ಟಿದ್ದರು. ಆದರೆ ಅಜಿತ್ ಸಿಂಗ್ ತುಂಬ ರಫ್ ಆಗಿ ಉತ್ತರ ಕೊಟ್ಟಿದ್ದಾರೆ. ’ನೀವೆಂದೂ ಸರಿಯಾದ ಸಮಯಕ್ಕೆ ಬಂದಿಲ್ಲ, ಹಾಗಾಗಿ ನಾನೂ ಸಮಯಕ್ಕೆ ಸರಿಯಾಗಿ ಬರುವುದಿಲ್ಲ’ ಎಂದು ಹೇಳಿದ್ದಾರೆ. ಅಜಿತ್ ಸಿಂಗ್ ಅವರು ನೋಟಿಸ್ಗೆ ಕೊಟ್ಟ ಉತ್ತರದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ.