ನವದೆಹಲಿ: ಜಗತ್ತಿನಲ್ಲಿ ನಮ್ಮ ಕಲ್ಪನೆಯನ್ನೂ ಮೀರಿದ ಹಲವು ವಿಸ್ಮಯಗಳು ನಡೆಯುತ್ತಿರುತ್ತವೆ. ಇದಕ್ಕೆ ಒಂದು ಸಣ್ಣ ಉದಾಹರಣೆ ಲಿಪ್‌ಸ್ಟಿಕ್ ಸಸ್ಯ. ನೂರು ವರ್ಷದ ಹಿಂದೊಮ್ಮೆ ಕಾಣಿಸಿಕೊಂಡು ಬಳಿಕ ಕಣ್ಮರೆಯಾಗಿದ್ದ ಲಿಪ್‌ಸ್ಟಿಕ್ ಸಸ್ಯ (Lipstick plant) ಒಮ್ಮಿಂದೊಮ್ಮೆಗೆ ಪ್ರತ್ಯಕ್ಷವಾಗಿದೆ. ಇಲ್ಲಿವರೆಗೆ ಅದು ಎಲ್ಲಿತ್ತು, ಅದರ ಬೀಜ ಭೂಮಿಯೊಳಗೆ ಅಡಗಿತ್ತಾ? ಇಷ್ಟು ವರ್ಷಗಳ ಬಳಿಕ ಮತ್ತೆ ಹುಟ್ಟಲು ಕಾರಣವಾದ ವಿದ್ಯಮಾನ ಯಾವುದು ಎಂಬ ಹಲವು ಅಂಶಗಳು ಕುತೂಹಲ ಕೆರಳಿಸಿವೆ.
ಅಂದ ಹಾಗೆ, ಈ ಲಿಪ್‌ಸ್ಟಿಕ್ ಸಸ್ಯ ಪತ್ತೆಯಾಗಿರುವುದು ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯಲ್ಲಿ. ಬೊಟಾನಿಕಲ್ ಸರ್ವೆ ಆಫ್ ಇಂಡಿಯಾದ (ಬಿಎಸ್ಐ) ಸಂಶೋಧಕರು ಈ ಅಪರೂಪದ ಸಸ್ಯವನ್ನು ಪತ್ತೆ ಹಚ್ಚಿದ್ದಾರೆ.
ಏನಿದು ಲಿಪ್‌ಸ್ಟಿಕ್ ಸಸ್ಯ?
ಲಿಪ್‌ಸ್ಟಿಕ್ ಯಾರಿಗೆ ಗೊತ್ತಿಲ್ಲ ಹೇಳಿ.. ಹೆಣ್ಮಕ್ಕಳ ಅಂದ ಹೆಚ್ಚಿಸಲು ತುಟಿಗಳ ಮೇಲೆ ಲಿಪ್‌ಸ್ಟಿಕ್ ಇರಬೇಕು. ಅಷ್ಟೇ ಅಲ್ಲ ತುಟಿಗಳು ನಯವಾಗಿ, ಮೃದುವಾಗಿ ಕಾಣುವಂತೆ ಮಾಡುತ್ತದೆ ಈ ಲಿಪ್‌ಸ್ಟಿಕ್. ನಾನಾ ಬಣ್ಣ, ಬೆಲೆಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯವರ್ಧಕ ಪ್ರಸಾಧನ ಈ ಲಿಪ್ ಸ್ಟಿಕ್.
ಹಾಗಿದ್ದರೆ, ಈ ಲಿಪ್ ಸ್ಟಿಕ್‌ಗೂ ಸಸ್ಯಕ್ಕೂ ಏನು ಸಂಬಂಧ ಅಂತೀರಾ? ಇದರಿಂದಲೇ ಲಿಪ್‌ಸ್ಟಿಕ್ ಏನಾದರೂ ಮಾಡ್ತಾರಾ ಅಂತ ಯೋಚನೆ ಮಾಡ್ತಾ ಇದ್ದೀರಾ? ಹಾಗೇನೂ ಇಲ್ಲ.
ಈ ಸಸ್ಯ ಲಿಪ್‌ಸ್ಟಿಕ್‌ನ ಟ್ಯೂಬ್‌ನಂತೆ ಸುಂದರವಾಗಿ ಕಾಣುವುದೇ ಈ ಹೆಸರು ಬರಲು ಕಾರಣ. ಅಂದರೆ, ಒಂದು ಲಿಪ್ ಸ್ಟಿಕ್ ಟ್ಯೂಬನ್ನು ತೆರೆದರೆ ತುಟಿಗಳಿಗೆ ಹಚ್ಚಿಕೊಳ್ಳುವ ಭಾಗ ಹೊರಗೆ ಬರುತ್ತದಲ್ಲ ಅದೇ ರೀತಿ ಈ ಹೂವಿನ ಎಸಳು ಹೊರಗೆ ಚಾಚಿಕೊಂಡಿದೆ. ಹಾಗಾಗಿ ನೋಡುವುದಕ್ಕೆ ಇದು ಪಕ್ಕಾ ಹಚ್ಚಿಕೊಳ್ಳಲು ಸಿದ್ಧವಾದ ಲಿಪ್‌ಸ್ಟಿಕ್ ಟ್ಯೂಬ್‌ನಂತೆಯೇ ಕಾಣುತ್ತದೆ. ಹೀಗಾಗಿ ಇದಕ್ಕೆ ಈ ಹೆಸರು ಬಂದಿದೆ.
ಇಷ್ಟೊಂದು ಚೆಂದದ ಹೂವನ್ನು ನಾವೇನಾದರೂ ಮನೆಯಲ್ಲಿ ತೋಟದಲ್ಲಿ ಬೆಳೆಸಬಹುದಾ ಎಂಬ ಪ್ರಶ್ನೆ ನಿಮ್ಮದಾಗಿದ್ದರೆ ಸ್ವಲ್ಪ ಕಷ್ಟ. ಯಾಕೆಂದರೆ, ಇದು ಸಮುದ್ರ ಮಟ್ಟದಿಂದ 543ರಿಂದ 1134 ಮೀಟರ್ ಮೇಲ್ಮಟ್ಟದಲ್ಲಿ ನಿರ್ದಿಷ್ಟ ಹವಾಗುಣದಲ್ಲಿ ಬೆಳೆಯುತ್ತದೆ. ತೇವಾಂಶವುಳ್ಳ ನಿತ್ಯ ಹರಿದ್ವರ್ಣದ ಕಾಡಿನಲ್ಲಿ ಇದು ಈಗ ಬೆಳೆದಿದೆ.
ಲಿಪ್‌ಸ್ಟಿಕ್ ಸಸ್ಯದ ವೈಜ್ಞಾನಿಕ ಹೆಸರು ಎಸ್ಕಿನಾಂಥಸ್ ಮೊನೆಟೇರಿಯಾ ಡನ್.
ಇಂಗ್ಲಿಷ್ ಸಸ್ಯಶಾಸ್ತ್ರಜ್ಞ ಐಸಾಕ್ ಹೆನ್ರಿ ಬರ್ಕಿಲ್ ಸಂಗ್ರಹಿಸಿದ ಸಸ್ಯದ ಮಾದರಿಗಳ ಆಧಾರದ ಮೇಲೆ 1912 ರಲ್ಲಿ ಬ್ರಿಟಿಷ್ ಸಸ್ಯಶಾಸ್ತ್ರಜ್ಞ ಸ್ಟೀಫನ್ ಟ್ರಾಯ್ಟ್ ಡನ್ ಅವರು ಈ ಹೆಸರು ಇಟ್ಟಿದ್ದಾರೆ. ಇವರನ್ನು ಅರುಣಾಚಲದ ಖ್ಯಾತ ಸಸ್ಯ ಸಾಸ್ತ್ರಜ್ಞರೆಂದೇ ಗುರುತಿಸಲಾಗಿದೆ. ಈ ಸಸ್ಯವು ಅಕ್ಟೋಬರ್ ಹಾಗೂ ಜನವರಿ ನಡುವೆ ಹೂವು ಬಿಡುತ್ತದೆ ಎಂದು ಗುರುತಿಸಲಾಗಿತ್ತು. ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ನ ಮಾರ್ಗಸೂಚಿಗಳನ್ನು ಅನುಸರಿಸಿ, ಈ ಪ್ರಬೇಧ ಸಸ್ಯ ಇಲ್ಲಿ ತಾತ್ಕಾಲಿಕವಾಗಿ ಅಳಿವಿನಂಚಿನಲ್ಲಿದೆ ಎಂದು ಗುರುತಿಸಲಾಗಿದೆ.
ನೂರು ವರ್ಷದ ನಂತರ ಯಾಕೆ?
ಅರುಣಾಚಲದ ಅಂಜಾವ್ ಹೇಗೆ ಅಂದರೆ ಅಲ್ಲಿ ಭೂಕುಸಿತಗಳು ಸಾಮಾನ್ಯ. ಜತೆಗೆ ಶಾಲೆ, ರಸ್ತೆ, ಮನೆ ನಿರ್ಮಾಣ, ಮಾರುಕಟ್ಟೆ ಅಭಿವೃದ್ಧಿಯಂಥ ಕೆಲಸಗಳಿಂದ ಅರುಣಾಚಲದಲ್ಲಿ ಕಾಡು ಕಡಿಮೆಯಾಗಿದೆ. ಇದೇ ಕಾರಣಕ್ಕೆ ವಿವಿಧ ಜಾತಿಗಳ ಸಸ್ಯಗಳು ಅಳಿವಿನಂಚಿಗೆ ಬಂದಿದೆ. ಈ ಶ್ರೀಮಂತ ಜೀವವೈವಿಧ್ಯತೆಯ ಬಗ್ಗೆ ತಿಳಿಯಲು ಹೆಚ್ಚು ಸಂಶೋಧನೆಗಳು ಅಗತ್ಯವಿದೆ ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ:Motivational story: ಕಿವಿ ಕೇಳಿಸದ್ದು ಯಾರಿಗೆ? ಹೆಂಡತಿಗಾ, ಗಂಡನಿಗಾ?