ಭಾರತೀಯ ಅಡುಗೆಯೆಂದರೆ ವಿಶ್ವದಾದ್ಯಂತ ಆಹಾರ ಪ್ರಿಯರಲ್ಲಿ ಒಂದು ಕುತೂಹಲ, ಆಸಕ್ತಿ ಇದ್ದೇ ಇದೆ. ಇತ್ತೀಚೆಗಿನ ವರ್ಷಗಳಲ್ಲಿ ವಿಶ್ವದಾದ್ಯಂತ ಹಲವರು ಭಾರತೀಯ ಅಡುಗೆಯನ್ನು ಕೇವಲ ತಿನ್ನುವುದಷ್ಟೇ ಅಲ್ಲ, ಮಾಡಲೂ ಪ್ರಯತ್ನ ಪಡುತ್ತಿರುವುದು ಹೆಚ್ಚುತ್ತಿದೆ. ಬಹುಶಃ ಹೆಚ್ಚುತ್ತಿರುವ ಯುಟ್ಯೂಬರ್‌ಗಳಿಂದಾಗಿಯೋ, ಬ್ಲಾಗರ್‌ಗಳಿಂದಾಗಿಯೋ ಏನೋ ಸಾಮಾಜಿಕ ಜಾಲತಾಣದಲ್ಲಿ ಇಂದು ಭಾರತೀಯ ತಿನಿಸುಗಳ ವಿದೇಶೀಯರ ವಿಮರ್ಶೆಗಳು ಹೆಚ್ಚಾಗುತ್ತಿದೆ. ಯಾವ ಜಾಗಕ್ಕೆ ಹೋದರೆ, ಎಲ್ಲಿ ಏನು ತಿನ್ನಬೇಕು ಎಂಬ ವಿಡಿಯೋಗಳ ಸಂಖ್ಯೆಯೂ ಬೇಕಾದಷ್ಟು ಸಿಗುತ್ತವೆ. ವಿದೇಶೀಯರೂ ಕೂಡಾ, ಭಾರತೀಯ ಬೀದಿಬದಿಯ ತಿಂಡಿಗಳನ್ನು ಸವಿದು ಪ್ರತಿಕ್ರಿಯೆಗಳ ವಿಡಿಯೋಗಳನ್ನು ರೀಲ್ಸ್ ಮುಖಾಂತರವೋ, ಯುಟ್ಯೂಬ್ ಮೂಲಕವೋ ಪೋಸ್ಟ್ ಮಾಡುತ್ತಿದ್ದಾರೆ. ಕೊರಿಯನ್ ಬ್ಲಾಗರ್ ಒಬ್ಬರು ಇತ್ತೀಚೆಗೆ ದೆಹಲಿಯ ಮೋಮೋಸ್ ಟ್ರೈ ಮಾಡಿ ತನ್ನ ಪ್ರಾಮಾಣಿಕ ಪ್ರತಿಕ್ರಿಯೆ ನೀಡಿದ್ದರು. ಇನ್ನು ಆಸ್ಟ್ರೇಲಿಯಾ ಮೂಲದ ತಮ್ಮ ದೇಶದಲ್ಲಿ ಪಾಲಕ್ ಪನೀರ್ ತಯಾರಿಸುವ ಮೂಲಕ ಸುದ್ದಿಯಾಗಿದ್ದರು. ಈಗ ಮತ್ತೊಬ್ಬ ಫುಡ್ ಬ್ಲಾಗರ್ ಸರದಿ. ಇಂಗ್ಲೆಂಡ್ ಮೂಲದ ಈತ ತನ್ನ ದೇಶದಲ್ಲಿ ನಮ್ಮ ನಿತ್ಯಾಹಾರ ರವಾ ಇಡ್ಲಿಯನ್ನೂ ಜೊತೆಗೆ ನುಗ್ಗೆಕಾಯಿ ಸಾಂಬಾರನ್ನೂ ಮಾಡುವ ಮೂಲಕ ಜಾಲತಾಣದಲ್ಲಿ ಎಲ್ಲರ ಮನಗೆದ್ದಿದ್ದಾರೆ.
ಲಂಡನ್‌ನಲ್ಲಿರುವ ಜೇಕ್ ಡ್ರಯಾನ್ ಎಂಬ ಫುಡ್ ಬ್ಲಾಗರ್ ಈ ಇಡ್ಲಿ ಮಾಡಿದವರು. ಈತ ಸಸ್ಯಾಧಾರಿತ ಅಡುಗೆಗಳಲ್ಲೇ ಹೆಚ್ಚು ಪರಿಣತಿ ಪಡೆದಿರುವ ಇವರು ಆಗಾಗ, ತನ್ನ ಪುಟದಲ್ಲಿ ಸಸ್ಯಾಹಾರಿ ಅಡುಗೆಗಳನ್ನು ತಯಾರಿಸುತ್ತಲೇ ಇರುತ್ತಾರೆ. ಈಗ ಸದ್ಯ ಭಾರತದ ಒಂದೊಂದೇ ರಾಜ್ಯಗಳ ವಿಶೇಷ ಒಂದು ಅಡುಗೆಯನ್ನು ತಯಾರಿಸುವ ಸರಣಿಯನ್ನು ಮಾಡುತ್ತಿದ್ದಾರೆ. ಪ್ರತಿ ರಾಜ್ಯದ ಒಂದು ವಿಶಿಷ್ಟ ಹಾಗೂ ನಿತ್ಯ ಮಾಡುವ ಅಡುಗೆ ಈತನ ಫೋಕಸ್. ಈ ನಿಟ್ಟಿನಲ್ಲಿ ಈ ಬಾರಿ ಸದ್ಯಕ್ಕೆ ತಮಿಳುನಾಡನ್ನು ಕೈಗೆತ್ತಿಕೊಂಡಿದ್ದು, ರವಾ ಇಡ್ಲಿಯನ್ನು ಮಾಡಿದ್ದಾರೆ. ಇದಕ್ಕೆ ತಮಿಳುನಾಡಿನ ಪ್ರಖ್ಯಾತ ನುಗ್ಗೆಕಾಯಿ ಸಾಂಬಾರನ್ನೂ ತಯಾರಿಸಿದ್ದಾರೆ.
ಈತ ಹೇಳಿಕೊಳ್ಳುವಂತೆ, ನಾನು ಈಗಾಗಲೇ, ಸಾಮಾನ್ಯ ಇಡ್ಲಿಯನ್ನು ಮಾಡಿದ್ದರಿಂದ ಬೇರೆ ಇಡ್ಲಿಯನ್ನು ಮಾಡುವ ಬಯಕೆಯಿತ್ತು. ಅದಕ್ಕಾಗಿ ರವಾ ಇಡ್ಲಿ ಮಾಡಿದ್ದೇನೆ. ರವಾ ಇಡ್ಲಿ ಸಾಮಾನ್ಯ ಇಡ್ಲಿಗಿಂತ ಮಾಡಲು ಸರಳ ಹಾಗೂ ಸುಲಭವಾಗಿದೆ. ರುಚಿಯಂತೂ ಅದ್ಭುತ ಎಂದು ಈತ ಬರೆದುಕೊಂಡಿದ್ದಾನೆ.
ಇದನ್ನೂ ಓದಿ | National nutrition week | ಕಣ್ಣಿನ ಆರೋಗ್ಯಕ್ಕಾಗಿ ಈ ಆಹಾರ ನಿಮ್ಮ ಕಣ್ಣಿಗೆ ಬೀಳಲಿ!
ಈ ಇಡ್ಲಿ ಮಾಡುವುದು ಎಷ್ಟು ಸರಳ ಎಂದರೆ, ಇದಕ್ಕೆ ಬಹಳ ಕಡಿಮೆ ಸಾಮಗ್ರಿಗಳನ್ನು ಬಳಸಿದ್ದೇನೆ ಎಂದೂ ಆತ ಹೇಳಿದ್ದು, ಇದರ ಒಂದು ವಿಡಿಯೋವನ್ನೇ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ರವೆ ಹಾಗೂ ಮೊಸರನ್ನು ಬಳಸಿ ಇಡ್ಲಿ ಹಿಟ್ಟನ್ನು ಮಾಡಿಕೊಂಡಿದ್ದು ಅದನ್ನು ಹಬೆಯಲ್ಲಿ ಬೇಯಿಸಲಾಗಿದೆ. ನಂತರ ತೊಗರಿ ಬೇಳೆ ಹಾಗೂ ನುಗ್ಗೆಕಾಯಿ ಸೇರಿದಂತ ವಿವಿಧ ತರಕಾರಿಗಳನ್ನು ಸೇರಿಸಿ ಒಗ್ಗರಣೆ ಹಾಕಿ ಸಾಂಬಾರು ಮಾಡಲಾಗಿದೆ. ಸಾಂಬಾರಿಗೆ ಮಸಾಲೆಯನ್ನೂ ಈತ ಸ್ವತಃ ತಯಾರು ಮಾಡಿರುವುದು ವಿಶೇಷ!
ಲಂಡನ್ ವ್ಯಕ್ತಿಯ ಈ ರವಾ ಇಡ್ಲಿ ಸಾಮಾಜಿಕ ಜಾಲತಾಣದಲ್ಲೀಗ ವೈರಲ್ ಆಗಿದ್ದು, ಮಿಲಿಯಗಟ್ಟಲೆ ಜನ ವೀಕ್ಷಣೆ ಮಾಡಿದ್ದಾರೆ. ಮುಖ್ಯವಾಗಿ ಭಾರತೀಯರ ಹೃದಯ ಗೆದ್ದಿರುವ ಈತ, ತನ್ನ ಶ್ರಮಕ್ಕೆ ಸಾವಿರಾರು ಮೆಚ್ಚುಗೆಯ ಪ್ರತಿಕ್ರಿಯೆಯನ್ನೂ ಪಡೆದಿದ್ದಾನೆ. ತಮಿಳು ಮೂಲದ ಕೆಲವು ಮಂದಿ ಈತನ ಇಡ್ಲಿಗೆ 1೦ಕ್ಕೆ ೧೦ ಅಂಕ ನೀಡಿದ್ದು, ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು, ನೀವು ಬಿಳಿಯರು ನಾವೂ ನಾಚುವಂತೆ ಭಾರತೀಯ ಅಡುಗೆಯನ್ನು ಮಾಡುತ್ತೀರಿ ಎಂಬರ್ಥದಲ್ಲಿ ಕಮೆಂಟು ಮಾಡಿದ್ದಾರೆ. ಇನ್ನೊಬ್ಬರು, ʻರವಾ ಇಡ್ಲಿ ಮಾಡಿದ ಮೇಲೆ ಒಂದು ವಾರ ಕರ್ನಾಟಕದ ಅಡುಗೆಯನ್ನೂ ಮಾಡದಿದ್ದರೆ ಹೇಗೆ!ʼ ಎಂದೂ ಕರ್ನಾಟಕದ ಪ್ರೀತಿ ಮೆರೆದಿದ್ದಾರೆ.
ಇದನ್ನೂ ಓದಿ | Video Viral | ಮಕ್ಕಳಿಗೆ ಬಿಸಿಯೂಟ ಬಡಿಸುವಾಗ ಬಂದ ಮಂಗ; ತುತ್ತು ನೀಡಿದ ಶಿಕ್ಷಕ, ಖುಷಿಯಲ್ಲಿ ತಿಂದ ವಾನರ