ನವದೆಹಲಿ: ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳೇ ಆಗುತ್ತಾರೆ, ಸಿನಿಮಾದವರ ಮಕ್ಕಳು ಸಿನಿಮಾ ಕ್ಷೇತ್ರಕ್ಕೇ ಹೋಗುತ್ತಾರೆ ಎನ್ನುವ ಕಲ್ಪನೆಯೊಂದು ನಮ್ಮಲ್ಲಿದೆ. ಆದರೆ ಅದನ್ನು ಮೀರಿ ರಾಜಕಾರಣಿ ಹಾಗೂ ಸಿನಿಮಾ ನಟನ ಮಗಳೊಬ್ಬಳು ಇದೀಗ ಸೇನೆಗೆ ಸೇರಲು (Viral News)ಸಿದ್ಧಳಾಗಿದ್ದಾಳೆ.
ಹೌದು. ಗೋರಖ್ಪುರದ ಬಿಜೆಪಿ ಸಂಸದ ಹಾಗೂ ಭೋಜ್ಪುರಿ ಭಾಷೆಯ ಖ್ಯಾತ ನಟರಾಗಿರುವ ರವಿ ಕಿಶನ್ ಅವರ 21 ವರ್ಷದ ಮಗಳು ಇಶಿತಾ ಶುಕ್ಲಾ ಸೇನೆಯನ್ನು ಸೇರುವುದಕ್ಕೆ ಸಿದ್ಧರಾಗಿದ್ದಾರೆ. ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿರುವ ಅಗ್ನಿಪಥದ ಮೂಲಕ ಇಶಿತಾ ಸೇನೆಗೆ ಸೇರ್ಪಡೆಯಾಗುತ್ತಿದ್ದಾರೆ. ಇಶಿತಾ ದೆಹಲಿ ನಿರ್ದೇಶನಾಲಯದ ‘7 ಗರ್ಲ್ ಬೆಟಾಲಿಯನ್’ನ ಕೆಡೆಟ್ ಕೂಡ ಆಗಿದ್ದಾರೆ ಎಂದು ರವಿ ಕಿಶನ್ ತಿಳಿಸಿದ್ದಾರೆ.
ಇದನ್ನೂ ಓದಿ: Viral Video : ಕತ್ತಲೆ ತುಂಬಿದ ಮನೆಗೆ ಬೆಳಕು ತಂದ ಐಪಿಎಸ್ ಅಧಿಕಾರಿ!
ಅಗ್ನಿಪಥ ಯೋಜನೆಯ ಮೂಲಕ ಯುವಜನರಿಗೆ ಸೇನೆಯಲ್ಲಿ ಸೇವೆ ಸಲ್ಲಿಸಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡುತ್ತಿದೆ. ಈ ಯೋಜನೆಯಲ್ಲಿ ಯುವಕರು ಭೂಸೇನೆ, ವಾಯು ಸೇನೆ, ನೌಕಾಪಡೆಯಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಬಹುದಾಗಿದೆ.
— Ravi Kishan (@ravikishann) June 28, 2023
ಈ ರೀತಿಯಲ್ಲಿ ರಾಜಕಾರಣಿ ಮತ್ತು ಸಿನಿಮಾ ಸ್ಟಾರ್ ಒಬ್ಬರ ಮಗಳು ಸೇನೆ ಸೇರುತ್ತಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗುತ್ತಿದೆ. “ಇದೇ ಮೊದಲನೇ ಬಾರಿಗೆ ದೇಶದ ರಾಜಕಾರಣಿಯೊಬ್ಬರು ಮಗಳು ದೇಶಸೇವೆಗೆ ನಿಲ್ಲುತ್ತಿದ್ದಾರೆ. ನಮ್ಮ ಭಾರತ ಬದಲಾಗುತ್ತಿದೆ” ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ, “ರವಿ ಕಿಶನ್ ಅವರ ಮಗಳಿಗೆ ಬದುಕು ಏನೆನ್ನುವುದು ಗೊತ್ತಾಗಿದೆ. ಸಿನಿಮಾದವರ ಮಕ್ಕಳು ಸಿನಿಮಾ ರಂಗಕ್ಕೇ ಹೋಗಿ ಮಿಂಚಬೇಕೆನ್ನುವ ಕಟ್ಟುಪಾಡಿನಿಂದ ಅವರು ಹೊರಬಿದ್ದಿರುವುದು ಒಳ್ಳೆಯ ವಿಚಾರ” ಎಂದೂ ಕಮೆಂಟ್ಗಳು ಬರುತ್ತಿವೆ.