ಇಲ್ಲೊಂದು ಜೋಡಿ ಹೊಸತೊಂದು ವಿಚಾರ ಕಂಡುಕೊಂಡಿದ್ದಾರೆ. ನಿಮಗೆ ದಾಂಪತ್ಯದಲ್ಲಿ ಜಗಳವಾಡದೆ, ಒಬ್ಬರನ್ನೊಬ್ಬರು ಪ್ರೀತಿಸುತ್ತಾ, ಸುಖವಾಗಿ ಕನಸಿನಂತೆ ಕಳೆಯಬೇಕೆಂದು ಆಸೆಯಿದೆ ಎಂದಾದಲ್ಲಿ ದಯವಿಟ್ಟು ಬೇರೆ ಬೇರೆ ಬೆಡ್‌ರೂಂ ಮಾಡಿಕೊಳ್ಳಿ ಎಂದು ಹೇಳಿದೆ!
ಇದೇನಪ್ಪಾ ಹೊಸತೊಂದು ಆಲೋಚನೆ! ಬೆಡ್‌ರೂಂ ಪ್ರತ್ಯೇಕ ಇಟ್ಟರೆ ಜೀವನ ಹೇಗಪ್ಪಾ? ದಾಂಪತ್ಯ ಹೇಗೆ ಎಂದೆಲ್ಲ ಕನ್‌ಫ್ಯೂಸ್ ಆಗಬೇಡಿ! ಈ ಜೋಡಿ, ಸ್ವತಃ ಈ ಪ್ರಯೋಗವನ್ನು ಮಾಡಿ ಸತ್ಯ ಕಂಡುಕೊಂಡಿದ್ದನ್ನು, ತಮ್ಮ ೧೪ ವರ್ಷದ ಇನ್ನೂ ಕಳೆಗುಂದದ ರೊಮ್ಯಾಂಟಿಕ್ ಜೀವನದ ರಹಸ್ಯವನ್ನು ಲೋಕಕ್ಕೇ ಹೇಳಲು ಮುಂದೆ ಬಂದಿದ್ದಾರೆ. ಇವರು ಹೇಳಿದ ದಾಂಪತ್ಯದ ಸೀಕ್ರೆಟ್‌ಗಳು ವರ್ಕ್‌ಔಟ್ ಆಗಬಹುದು ಎನಿಸಿದರೆ ನೀವು ಪ್ರಯೋಗ ಮಾಡಬಹುದು. ಆದರೆ ನಮ್ಮ ಅದ್ಭುತ ಸುಖೀ ದಾಂಪತ್ಯದ ರಹಸ್ಯ ಮಾತ್ರ ಇದುವೇ ಎಂದು ಈ ಜೋಡಿ ಶತಾಯಗತಾಯ ಹೇಳುತ್ತಾರೆ.
೬೯ ವರ್ಷದ ಡಯಾನ ಲ್ಯೂಕ್ ಹಾಗೂ ೬೮ರ ಹರೆಯದ ಟಿಮ್ ಹಾಲಿಂಗ್‌ವರ್ಥ್ ಎಂಬ ಇಬ್ಬರು ಜೋಡಿಗಳು ೧೪ ವರ್ಷಗಳಿಂದ ಪ್ರತ್ಯೇಕವಾಗಿ ಬೇರೆ ಬೇರೆ ಮನೆಗಳಲ್ಲಿದ್ದುಕೊಂಡೇ ಜೊತೆಯಾಗಿದ್ದಾರೆ. ಹೆಚ್ಚುತ್ತಿರುವ ಖರ್ಚುವೆಚ್ಚಗಳಿಂದಾಗಿ ಹಾಗೂ ಎರಡು ಪ್ರತ್ಯೇಕ ಮನೆಗಳಿಗೆ ನೀಡಬೇಕಾದ ಬಾಡಿಗೆ ಎಲ್ಲವನ್ನು ಲೆಕ್ಕ ಹಾಕಿಕೊಂಡು ಸದ್ಯಕ್ಕೀಗ ಇಬ್ಬರೂ ಒಂದೇ ಮನೆಗೆ ಶಿಫ್ಟ್ ಆಗಲು ಯೋಚಿಸಿದ್ದೇವೆ. ಆದರೆ ಖಂಡಿತವಾಗಿಯೂ ಈ ಹೊಸ ಮನೆಯಲ್ಲಿ ಇಬ್ಬರೂ ಬೇರೆ ಬೇರೆ ಬೆಡ್‌ರೂಂ ಹೊಂದಿರಲಿದ್ದೇವೆ ಎಂದು ಹೇಳಿದ್ದಾಳೆ.
ಡಯಾನಾ ಯುಕೆಯ ರೇಡಿಯೋ ಚಾನಲ್ ಒಂದರಲ್ಲಿ ಆರ್‌ಜೆ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ತಡರಾತ್ರಿಯ ಕಾರ್ಯಕ್ರಮವೊಂದನ್ನು ನಡೆಸಿಕೊಡುತ್ತಾರೆ. ಟಿಮ್ ಕ್ಯಾಮರಾಮ್ಯಾನ್ ಆಗಿದ್ದಾರೆ. ಇಬ್ಬರಿಗೂ ಮೊದಲೊಂದು ಮದುವೆಯಾಗಿದ್ದು ಆ ದಾಂಪತ್ಯದಲ್ಲಿ ಮಕ್ಕಳಿದ್ದಾರೆ. ಅವರೆಲ್ಲರೂ ಈಗ ದೊಡ್ಡವರಾಗಿದ್ದು ತಮ್ಮ ಜೀವನ ಕಂಡುಕೊಂಡಿದ್ದಾರೆ. ಆದರೆ ಟಿಮ್ ಹಾಗೂ ಡಯಾನಾ ಇಬ್ಬರೂ ತಮ್ಮ ತಮ್ಮ ಹಳೆಯ ಸಂಗಾತಿಯಿಂದ ಬೇರೆಯಾಗಿದ್ದು ಪ್ರತ್ಯೇಕವಾಗಿ ಒಬ್ಬರೇ ವಾಸಿಸುತ್ತಿದ್ದರು. ಕಳೆದ ೧೪ ವರ್ಷದ ಹಿಂದೆ ಡೇಟಿಂಗ್ ಸೈಟ್ ಒಂದರಲ್ಲಿ ಪರಿಚಯವಾಗಿ, ಪ್ರೀತಿಗೆ ತಿರುಗಿ ಇಬ್ಬರೂ ಜೋಡಿಯಾಗಿದ್ದಾರೆ. ೧೪ ವರ್ಷವಾದರೂ, ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿದ್ದರೂ ಇಬ್ಬರಿಗೂ ಇಂದಿಗೂ ಬತ್ತದ ಆಕರ್ಷಣೆಯಿದೆಯಂತೆ.
ಡಯಾನಾ ಹೇಳುವ ಪ್ರಕಾರ, ನಾನು ೨೦ ವರ್ಷಗಳಿಂದ ಒಂಟಿಯಾಗಿಯೇ ಮನೆಯಲ್ಲಿ ವಾಸಿಸುತ್ತಿದ್ದೆ. ನಾನು ತುಂಬ ಸ್ವತಂತ್ರ ಮನಸ್ಥಿತಿಯವಳು. ನಾನು, ನನ್ನ ಕೆಲಸ, ವೀಕೆಂಡ್‌ಗಳಲ್ಲಿ ಮಕ್ಕಳ ಜೊತೆ ಕಾಲಕ್ಷೇಪ ಹೀಗೆ ಖುಷಿಯಾಗಿದ್ದೆ. ಟಿಮ್ ಕೂಡಾ ಅವರದೇ ಆದ ವೃತ್ತಿ, ಖಾಸಗಿ ಬದುಕು ಹೊಂದಿರುವವರು. ಆದರೂ ಇಬ್ಬರೂ ದಿನವೂ ಜೊತೆಯಾಗಿ ಕಾಲ ಕಳೆಯುತ್ತಿದ್ದೆವು. ಇದೀಗ ಬೇರೆ ಬೇರೆ ಮನೆಯಲ್ಲಿದ್ದರೆ ಖರ್ಚು ಹೆಚ್ಚು ಎಂದು ಒಂದೇ ಮನೆಯಲ್ಲಿರಲು ಹೊರಟಿದ್ದೇವೆ. ಆದರೆ, ನಾವಿಬ್ಬರೂ ಬೇರೆ ಬೇರೆ ಬೆಡ್‌ರೂಂನಲ್ಲಿಯೇ ಇರಲು ಇಚ್ಛಿಸುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಏನೂ ಮಜಾ ಅನಿಸ್ತಿಲ್ಲ ಸರ್, ಕೆಲಸ ಬಿಡ್ತೀನಿ! ಹೀಗೂ ಒಬ್ಬ ರಿಸೈನ್ ಲೆಟರ್ ಬರ್ದಿದ್ದಾನೆ ನೋಡಿ!
ಬೇರೆ ಬೇರೆ ಬೆಡ್‌ರೂಂನ ಲಾಭ ಏನೆಂದರೆ, ಇಬ್ಬರಿಗೂ ಬೇರೆ ಬೇರೆಯ ವೃತ್ತಿ ಜೀವನ ಇರುವಾಗ, ಒಬ್ಬೊಬ್ಬರ ಸಮಯ ಒಂದೊಂದಾಗಿರುತ್ತದೆ. ಒಬ್ಬರು ತಡವಾಗಿ ಮನೆಗೆ ಬಂದು, ಲೇಟ್ ಏಳುವುದು, ಇನ್ನೊಬ್ಬರ ದಿನಚರಿ ಬೇರೆಯೇ ಇರುವಾಗ ರಾತ್ರಿಯ ನಿದ್ದೆಗೆ ಕಷ್ಟವಾಗುತ್ತದೆ. ವೃಥಾ ಇನ್ನೊಬ್ಬರಿಗೆ ತೊಂದರೆ ಕೊಡಬೇಕಾಗುತ್ತದೆ. ಜೊತೆಗೆ ಒಬ್ಬರಿಗೆ ಗೊರಕೆಯ ಪ್ರಾಬ್ಲಂ, ಇನ್ನೊಬ್ಬರಿಗೆ ನಿದ್ದೆಯ ಪ್ರಾಬ್ಲಂ ಇದ್ದರೆ ತೊಂದರೆ ತಪ್ಪಿದ್ದಲ್ಲ. ಅವರವರ ಕಂಫರ್ಟ್ ಅವರವರಿಗೆ ಬೇಕಾಗುತ್ತದೆ. ಬೇರೆ ಬೇರೆ ಬೆಡ್‌ರೂಂ ಇದ್ದರೆ, ಆರಾಮವಾಗಿರಬಹುದು. ಜೊತೆಗೆ ಇಲ್ಲಿ ಸಿಗುವ ಇನ್ನೊಂದು ಲಾಭವೆಂದರೆ, ಇಬ್ಬರೂ ಮತ್ತೊಬ್ಬರ ಬೆಡ್ ರೂಂಗೆ ಹೋಗಬಹುದು. ಒಬ್ಬರಿಗೊಬ್ಬರು ಬೋರ್ ಹುಟ್ಟಿಸುವುದಿಲ್ಲ. ಇಬ್ಬರಿಗೂ ಅವರವರ ಖಾಸಗಿ ಸಮಯವೂ ಧಾರಾಳವಾಗಿ ಸಿಗುತ್ತದೆ. ಇಬ್ಬರ ನಡುವಿನ ಆಕರ್ಷಣೆ ಸದಾ ಜಾರಿಯಲ್ಲಿರುತ್ತದೆ. ನಾವಿಬ್ಬರೂ ಈ ವಯಸ್ಸಿನಲ್ಲೂ, ಈ ೧೪ ವರ್ಷಗಳಿಂದಲೂ ಅದೇ ರೊಂಮ್ಯಾಂಟಿಕ್ ಸಂಬಂಧದಲ್ಲಿದ್ದೇವೆ ಎನ್ನುತ್ತಾರೆ ಡಯಾನಾ.
ಡಯಾನಾ ಅವರು, ಸೈಕೋಥೆರಪಿಸ್ಟ್ ಆಗಿಯೂ ಕೆಲಸ ಮಾಡಿರುವುದರಿಂದ ಹಲವರ ದಾಂಪತ್ಯ ಸಮಸ್ಯೆಯನ್ನೂ ಕೇಳಿ ಅಭ್ಯಾಸವಿರುವುದರಿಂದ, ಹಲವರ ಸಮಸ್ಯೆಯ ಮೂಲ ಕಾರಣ ಎಲ್ಲಿರುವುದು ಎಂಬುದನ್ನೂ ಈಕೆ ಹೇಳುತ್ತಾರೆ. ಕೋವಿಡ್ ಸಂದರ್ಭದಲ್ಲಿ, ಎಲ್ಲರ ಮನೆಯೂ ಕಚೇರಿಗಳಾಗಿ ವರ್ಷವಿಡೀ, ಮನೆಯಲ್ಲಿಯೇ ಇಬ್ಬರೂ, ಜೊತೆಗೆ ಮಕ್ಕಳೂ ಇದ್ದುದರಿಂದ ದಾಂಪತ್ಯ ಸಮಸ್ಯೆ ಬಹಳ ಹೆಚ್ಚಾಗಿದ್ದವು. ಪ್ರತಿಯೊಬ್ಬರಿಗೂ ಅವರವರ ಸ್ಪೇಸ್ ಬೇಕಾಗುತ್ತದೆ. ಅದನ್ನು ಗೌರವಿಸಿದರೆ, ಬಂಧ ಮಧುರವಾಗಿಯೇ ಉಳಿಯುತ್ತದೆ ಎನ್ನುತ್ತಾರೆ ಈಕೆ.
ಈಕೆ ತನ್ನ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಹೇಳುತ್ತಾ ನಡೆಸಿದ ಸಮೀಕ್ಷೆಯಲ್ಲಿ ೬೫ ವರ್ಷದ ಆಸುಪಾಸಿನ ಮಂದಿಯಲ್ಲಿ ಸುಮಾರು ಶೇಕಡಾ ೪೬ ಮಂದಿ, ದಂಪತಿಗಳು ಬೇರೆ ಬೇರೆ ಬೆಡ್‌ರೂಂನಲ್ಲಿ ಮಲಗುವುದರಿಂದ ದಾಂಪತ್ಯ ಮಧುರವಾಗಿರುತ್ತದೆ ಎಂದು ಉತ್ತರಿಸಿದ್ದರೆ, ಶೇ.೨೪ ಮಂದಿ ಒಂದೇ ಬೆಡ್‌ರೂಂ ಇದ್ದರೂ ಇನ್ನಂದು ಕೋಣೆಯನ್ನೂ ಇರಿಸಿಕೊಂಡಿದ್ದೇವೆ ಎಂದಿದ್ದೇವೆ.
ಈಕೆ ಹೇಳಿದ್ದಾರೆಂದು ಮದುವೆಯಾದ ಕೂಡಲೇ ಇಂಥ ಪ್ರಯೋಗಗಳನ್ನು ಮಾಡುವುದಿದ್ದರೆ ಅದು ನಿಮ್ಮದೇ ರಿಸ್ಕು! ಈಕೆ ಹೇಳಿದ್ದು ವಯಸ್ಸಾದ ದಂಪತಿಗಳ ದೃಷ್ಟಿಕೋನದಿಂದ ಎಂಬುದು ನೆನಪಿರಲಿ!
ಇದನ್ನೂ ಓದಿ: Viral Video | ಚೀನಾದಲ್ಲೀಗ ಮನುಷ್ಯರಿಗೆ ಮಾತ್ರವಲ್ಲ, ಮೀನು, ಕಪ್ಪೆಗಳಿಗೂ ಕೋವಿಡ್ ಟೆಸ್ಟ್