ಗಾಂಧೀಜಿ ಈಗಿದ್ದರೆ ಅವರು ಸೆಲ್ಫೀ ತೆಗೆದುಕೊಂಡಿದ್ದರೆ ಹೇಗೆ ಕಂಡಿರುತ್ತಿದ್ದರು? ಅಂಬೇಡ್ಕರ್ ಅವರು ಹೇಗೆ ಸೆಲ್ಫೀ ಕ್ಲಿಕ್ಕಿಸಿಕೊಂಡಿರುತ್ತಿದ್ದರು ಎಂಬ ಕುತೂಹಲ ನಿಮ್ಮನ್ನು ಕಾಡಿದರೆ ಅದಕ್ಕೆ ಉತ್ತರ ಇಲ್ಲಿದೆ. ಇದೀಗ ಗಾಂಧೀಜಿಯವರ ಸೆಲ್ಫೀ ಅಂತರ್‌ಜಾಲದ ತುಂಬಾ ಓಡಾಡಿ ಸುದ್ದಿ ಮಾಡುತ್ತಿದೆ!
ಇಂದಿನ ಸೆಲ್ಫೀಯುಗದಲ್ಲಿ ನಾವೆಲ್ಲೇ ಹೋದರೂ ಏನೇ ಮಾಡಿದರೂ ಸೆಲ್ಫೀ ತೆಗೆದುಕೊಳ್ಳುತ್ತೇವೆ. ಉಂಡರೆ, ತಿಂದರೆ, ನಡೆದರೆ ಕುಣಿದರೆ ಮಲಗಿದರೆ ಎದ್ದರೆ ಎಲ್ಲೆಲ್ಲೂ ಸೆಲ್ಫೀ ಹಾಗೂ ಸ್ಟೇಟಸ್ ರೀಲ್ಸ್‌ಗಳು ಸಾಮಾನ್ಯ. ಸೆಲ್ಫೀ ತೆಗೆದುಕೊಳ್ಳದೆ ಇರುವವರು ಈ ಭೂಮಿ ಮೇಲೆ ಇಂದು ಬದುಕಿದ್ದಾರಾ ಎಂಬಂಥ ಪರಿಸ್ಥಿತಿ ಇದೆ. ಈಗ ಸೆಲ್ಫಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಸೆಲ್ಫಿ ಇಲ್ಲದ ಕಾಲದ ವ್ಯಕ್ತಿಗಳ ಸೆಲ್ಫೀ ನೋಡಬೇಕೆಂದು ಆಸೆಯಾದರೆ ಅದಕ್ಕೆ ಎಐ ಇದೆ!
ಎಐ ಅಥವಾ ಆರ್ಟಿಫೀಷಿಯಲ್ ಇಂಟಲಿಜೆನ್ಸ್ ಬಳಸಿ ಮಾಡುವ ಫೋಟೋ ವರ್ಕ್‌ಗಳು ಇತ್ತೀಚೆಗೆ ಭಾರೀ ಸುದ್ದಿ ಮಾಡುತ್ತಿವೆ. ಇತ್ತೀಚೆಗೆ ಡಿಜಿಟಲ್ ಕಲಾವಿದರೊಬ್ಬರು ತಮ್ಮ ಇನ್ಸ್‌ಟಾ ಖಾತೆಯಲ್ಲಿ, ʻಸೆಲ್ಫೀಸ್ ಫ್ರಂ ದಿ ಪಾಸ್ಟ್ʼ ಎಂಬ ತಲೆಬರಹದಡಿ ಹಲವರ ಸೆಲ್ಫೀಗಳನ್ನು ಪೋಸ್ಟ್ ಮಾಡಿದ್ದಾರೆ. ʻನನ್ನ ಹಳೆಯ ಗೆಳೆಯರು ನನಗೆ ಕಳುಹಿಸಿದ್ದ ಸೆಲ್ಫೀಗಳನ್ನು ಹಾರ್ಡ್ ಡಿಸ್ಕ್‌ನಿಂದ ಮರಳಿ ಪಡೆಯಲಾಗಿದೆʼ ಎಂದು ಅವರು ತಮಾಷೆಯಾಗಿ ತಲೆಬರಹವನ್ನೂ ನೀಡಿದ್ದಾರೆ.
ಎಐ ತಂತ್ರಜ್ಞಾನ ಬಳಸಿ ಈ ಫೋಟೋಗಳನ್ನು ಮಾಡಲಾಗಿದ್ದು, ಖ್ಯಾತನಾಮರ ಕಾಲದಲ್ಲಿ ಸೆಲ್ಫೀ ತೆಗೆದುಕೊಳ್ಳುವ ವ್ಯವಸ್ಥೆ ಇದ್ದಿದ್ದರೆ ಅವರ ಸೆಲ್ಫೀಗಳು ಹೀಗಿರುತ್ತಿತ್ತು ಎಂಬ ಕಲ್ಪನೆಯ ಆಧಾರದಲ್ಲಿ ಈ ಚಿತ್ರಗಳನ್ನು ಮಾಡಲಾಗಿದೆ ಎಂದು ಈ ಡಿಜಿಟಲ್ ಕಲಾವಿದ ಜ್ಯೋ ಜಾನ್ ಮುಳ್ಳೂರ್ ಅವರು ವಿವರಣೆ ನೀಡಿದ್ದಾರೆ.
ಅವರ ಎಐ ಚಿತ್ರಗಳ ಪೈಕಿ ಮುಖ್ಯವಾಗಿ ಖ್ಯಾತನಾಮರಾದ ಮಹಾತ್ಮಾ ಗಾಂಧೀಜಿ, ಡಾ. ಬಿ.ಆರ್.ಅಂಬೇಡ್ಕರ್, ಮದರ್ ತೆರೆಸಾ, ಅಬ್ರಹಾಂ ಲಿಂಕನ್, ಚೆಗುವಾರಾ, ಬಾಬ್ ಮರ್ಲೇ, ಜೋಸೆಫ್ ಸ್ಟಾಲಿನ್, ಅಲ್ಬರ್ಟ್ ಐನ್‌ಸ್ಟೀನ್ ಮತ್ತಿತರ ಸೆಲ್ಫೀಗಳೂ ಇವೆ.
ಮುಳ್ಳೂರ್ ಅವರ ಈ ಸೆಲ್ಫೀ ವರ್ಕ್‌ಗಳಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾವಿರಾರು ಲೈಕ್ ಹಾಗೂ ಕಾಮೆಂಟ್‌ಗಳೂ ಬಂದಿದ್ದು, ಎಂದಿನಂತೆ ನಿಮ್ಮದು ಅದ್ಭುತ ವರ್ಕ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಚೆಗುವಾರಾ, ಅಂಬೇಡ್ಕರ್ ಹಾಗೂ ಬಾಬ್ ಮರ್ಲೇ ಚಿತ್ರಗಳು ಎಲ್ಲಕ್ಕಿಂತ ಅದ್ಭುತ ಎಂದು ಕೆಲವರು ಅವರವರ ಅಭಿಪ್ರಾಯ ತಿಳಿಸಿದ್ದಾರೆ.
ಈ ಹಿಂದೆಯೂ ಎಐ ಡಿಜಿಟಲ್ ವರ್ಕ್‌ಗಳು ಭಾರೀ ವೈರಲ್ ಆಗಿದ್ದವು. ಯುಎಸ್‌ನ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ವಿಶೇಷ ಡಿಜಿಟಲ್ ಆರ್ಟ್ ವರ್ಕ್ ಅವರಿಗೆ ಬಾರೀ ಪ್ರಸಿದ್ಧಿ ತಂದು ಕೊಟ್ಟಿತ್ತು. ರಾಜಕಾರಣಿಗಳು ಬೀಚ್ ಬದಿಯಲ್ಲಿ ತಮ್ಮ ಸಮಯ ಕಳೆಯುವ ಸಂತೋಷದಾಯಕ ಚಿತ್ರಗಳು ಸುದ್ದಿ ಮಾಡಿದ್ದವು.
ಇದನ್ನೂ ಓದಿ: Virat Kohli: ಕೊಹ್ಲಿಯ ಲುಂಗಿ ಡ್ಯಾನ್ಸ್ ನೋಡಿ ಫಿದಾ ಆದ ಫ್ಯಾನ್ಸ್; ವಿಡಿಯೊ ವೈರಲ್