Site icon Vistara News

Viral News : ಸ್ಮಾರ್ಟ್‌ ಬೆಂಗಳೂರಿನಲ್ಲಿ ಆಟೊ ಚಾಲಕರೂ ಸ್ಮಾರ್ಟ್‌! ವಾಚ್‌ನಲ್ಲಿ ಕ್ಯೂಆರ್‌ ಕೋಡ್‌!

smart auto driver

ಬೆಂಗಳೂರು: ಬೆಂಗಳೂರು ದೇಶ ವಿದೇಶದ ಜನರಿಗೂ ನೆಲೆ ಕಲ್ಪಿಸಿಕೊಟ್ಟಿರುವ ನಗರ. ಈ ಮಹಾನಗರಿಯಲ್ಲಿ ಕೋಟ್ಯಂತರ ಮಂದಿ ತರಹೇವಾರಿ ಕೆಲಸಗಳನ್ನು ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ಅದರಲ್ಲೂ ಆಟೋ ಚಾಲಕರದ್ದಂತೂ ದೊಡ್ಡ ಬಳಗವೇ ಇದೆ. ತಾಂತ್ರಿಕವಾಗಿ ಮುನ್ನುಗ್ಗುತ್ತಿರುವ ಬೆಂಗಳೂರಿನಲ್ಲಿ ಐಟಿ ಬಿಟಿ ಕಚೇರಿಗಳ ಸಿಬ್ಬಂದಿಗಳ ಜತೆಯಲ್ಲಿ ಆಟೋ ಚಾಲಕರೂ ತಾಂತ್ರಿಕವಾಗಿ ಹೆಜ್ಜೆ ಇಡಲಾರಂಭಿಸಿದ್ದಾರೆ. ಅದಕ್ಕೆ ಸಾಕ್ಷಿ ಎನ್ನುವಂತಿದೆ ಇತ್ತೀಚೆಗೆ ನಡೆದ ವಿದ್ಯಮಾನ. ಆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ (Viral News) ಚರ್ಚೆಯಲ್ಲಿದೆ.

ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಆಪ್‌ನಲ್ಲಿ ಆಟೋ ಬುಕ್‌ ಮಾಡಿಕೊಂಡು ಪ್ರಯಾಣ ಮಾಡಿದ್ದರು. ಆಟೋದಿಂದ ಇಳಿಯುವಾಗ ಅವರು ಆಟೋ ಚಾಲಕನಿಗೆ ಹಣ ಪಾವತಿ ಮಾಡುವ ಸಲುವಾಗಿ ಕ್ಯೂಆರ್‌ ಕೋಡ್‌ ಎಲ್ಲಿದೆ ಎಂದು ಕೇಳುತ್ತಾರೆ. ಆಗ ಚಾಲಕ ಏನನ್ನೂ ಯೋಚನೆ ಮಾಡದೆ ತನ್ನ ಕೈಯನ್ನೇ ಮುಂದೆ ಚಾಚುತ್ತಾನೆ. ಒಮ್ಮೆ ಗಾಬರಿಯಾಗಿ ನೋಡಿದ ವ್ಯಕ್ತಿಗೆ, ಚಾಲಕನ ಕೈನಲ್ಲಿರುವ ಸ್ಮಾರ್ಟ್‌ವಾಚ್‌ನಲ್ಲಿ ಕ್ಯೂಆರ್‌ ಕೋಡ್‌ ಕಾಣಿಸುತ್ತದೆ. ಆಗ ಅವರು ಆಶ್ಚರ್ಯದಿಂದಲೇ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹಣ ಪಾವತಿ ಮಾಡುತ್ತಾರೆ. ಆಟೋ ಚಾಲಕ ತನ್ನ ಮುಂದಿನ ಪಯಣದತ್ತ ಸಾಗುತ್ತಾನೆ.

ಇದನ್ನೂ ಓದಿ: Viral video: ಮೋದಿಯಿಂದ ಫ್ರೀ ಸಿಲಿಂಡರ್‌ ಸಿಗ್ತು ಎಂದ ತರಕಾರಿ ಮಾರಾಟಗಾರ ರಾಮೇಶ್ವರ್;‌ ರಾಹುಲ್‌ ಗಾಂಧಿಗೆ ಫಜೀತಿ!
ಈ ವಿಚಾರವನ್ನು ಆ ವ್ಯಕ್ತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆಟೋ ಚಾಲಕ ತನ್ನ ಸ್ಮಾರ್ಟ್‌ ವಾಚ್‌ನ ಸ್ಕ್ರೀನ್‌ ಸೇವರ್‌ ಆಗಿ ಕ್ಯೂಆರ್‌ ಕೋಡ್‌ ಅನ್ನೇ ಹಾಕಿಕೊಂಡಿದ್ದ. ಸ್ಮಾರ್ಟ್‌ ಆಟೋ ಚಾಲಕನಾತ ಎಂದು ಅವರು ಬರೆದುಕೊಂಡಿದ್ದಾರೆ.

ಈ ಟ್ವೀಟ್‌ ಅನ್ನು ಆಗಸ್ಟ್‌ 15ರ ಬೆಳಗ್ಗೆ 10.46ಕ್ಕೆ ಹಂಚಿಕೊಳ್ಳಲಾಗಿದೆ. ಅಂದಿನಿಂದ ಈವರೆಗೆ ಈ ಪೋಸ್ಟ್‌ 3.5 ಲಕ್ಷಕ್ಕೂ ಅಧಿಕ ಮಂದಿಯಿಂದ ವೀಕ್ಷಣೆಯಾಗಿದೆ. ಏಳು ಸಾವಿರಕ್ಕೂ ಅಧಿಕ ಮಂದಿ ಟ್ವೀಟ್‌ ಅನ್ನು ಲೈಕ್‌ ಮಾಡಿದ್ದಾರೆ. 715 ಮಂದಿ ಟ್ವೀಟ್‌ ಅನ್ನು ತಮ್ಮ ವಾಲ್‌ನಲ್ಲಿಯೂ ಹಂಚಿಕೊಂಡಿದ್ದಾರೆ. ನೂರಾರು ಜನರು ಈ ಟ್ವೀಟ್‌ಗೆ ಕಾಮೆಂಟ್‌ಗಳನ್ನು ಮಾಡಿದ್ದು, ಸ್ಮಾರ್ಟ್‌ ಆಟೋ ಚಾಲಕನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Viral News : ಈ ಗೊಂಬೆಗಳನ್ನು ಹುಡುಕಿ ಕೊಡುವವರಿಗೆ 6 ಲಕ್ಷ ರೂ. ಬಹುಮಾನ! ನೀವೂ ಟ್ರೈ ಮಾಡಬಹುದು…
“ಬೆಂಗಳೂರಿನಲ್ಲಿ ಈ ರೀತಿಯಲ್ಲಿ ವಿಶೇಷವೆನಿಸಿದ ಹಲವಾರು ಸಣ್ಣ ಪುಟ್ಟ ಅನುಭವಗಳನ್ನು ಹಂಚಿಕೊಳ್ಳುವುದೆಂದರೆ ನನಗೆ ತುಂಬಾನೇ ಇಷ್ಟ. ಹಾಗೆಯೇ ಬೇರೆಯವರಿಗೆ ಆದ ಅನುಭವಗಳನ್ನು ಕೇಳುವುದಕ್ಕೂ ಇಷ್ಟವಾಗುತ್ತದೆ”, “ಅವರು ಆಟೋ ರಾಜ ಆಗಿ ಮಾತ್ರ ಉಳಿದುಕೊಂಡಿಲ್ಲ. ಅವರು ಸ್ವಾಗ್‌ ರಾಜ ಆಗಿಬಿಟ್ಟಿದ್ದಾರೆ”, “ಕೊನೆಗೂ ಬೆಂಗಳೂರಿನಲ್ಲಿ ಮಾತ್ರ ಎನ್ನುವಂತಹ ವಿಚಾರವೊಂದು ಕಾಣಸಿಕ್ಕಿತು”, “ಬೆಂಗಳೂರಿನ ಹುಡುಗರಿಗಿಂತ ಬೆಂಗಳೂರಿನ ಆಟೋ ಡ್ರೈವರ್‌ಗಳೇ ಹೆಚ್ಚು ಚುರುಕಾಗಿರುತ್ತಾರೆ, ಜಾಣರಾಗಿರುತ್ತಾರೆ” ಎನ್ನುವಂತಹ ಕಮೆಂಟ್‌ಗಳು ಟ್ವೀಟ್‌ಗೆ ಬಂದಿವೆ. ಹಾಗೆಯೇ ಅನೇಕ ಜನರು ಸ್ಮಾರ್ಟ್‌ ಚಾಲಕನ ಬಗ್ಗೆ ಮೆಚ್ಚುಗೆಯ ಮಾತುಗಳನ್ನೂ ಆಡಿದ್ದಾರೆ.

Exit mobile version