ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಅವರು ಕಿಚಡಿಗೆ ಒಗ್ಗರಣೆ ಹಾಕುವುದು ಹೇಗೆಂದು ಕಲಿಸಿಕೊಟ್ಟಿದ್ದಾರೆ. ಜಗತ್ತಿನ ಶ್ರೀಮಂತರಲ್ಲಿ ಒಬ್ಬರಾದ ಬಿಲ್ ಗೇಟ್ಸ್ (Bill Gates) ಭಾರತ ಪ್ರವಾಸದಲ್ಲಿದ್ದಾರೆ. ಶುಕ್ರವಾರ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನೂ ಭೇಟಿಯಾಗಿದ್ದಾರೆ. ಆರೋಗ್ಯ, ಹವಾಮಾನ ಕ್ಷೇತ್ರಗಳಲ್ಲಿ ಭಾರತ ಅತಿ ವೇಗವಾಗಿ ಬೆಳವಣಿಗೆಯಾಗುತ್ತಿರುವುದನ್ನು ಅವರು ಶ್ಲಾಘಿಸಿದ್ದಾರೆ. ಅದರಲ್ಲೂ ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಅತ್ಯಂತ ಸುರಕ್ಷಿತವಾದ ಕೊರೊನಾ ಲಸಿಕೆಗಳನ್ನು ತಂದಿದ್ದನ್ನೂ ಅವರು ಹೊಗಳಿದ್ದಾರೆ.
ಈ ಮಧ್ಯೆ ಅವರು ಸಚಿವೆ ಸ್ಮೃತಿ ಇರಾನಿಯವರ ಜತೆ ಕಿಚಡಿ ಮಾಡಿದ ವಿಡಿಯೊ ವೈರಲ್ ಆಗಿದೆ. ವಿಡಿಯೊ ಶೇರ್ ಮಾಡಿಕೊಂಡಿದ್ದು ಸ್ಮೃತಿ ಇರಾನಿಯವರೇ. ಅದಾಗಲೇ ಸಿದ್ಧವಾಗಿರುವ ಕಿಚಡಿಗೆ ಒಗ್ಗರಣೆ ಮಾಡುವುದು ಹೇಗೆ ಎಂದು ಸ್ಮೃತಿ ಇರಾನಿಯವರು, ಬಿಲ್ಗೇಟ್ಸ್ಗೆ ಹೇಳಿಕೊಟ್ಟಿದ್ದನ್ನು ಅದರಲ್ಲಿ ನೋಡಬಹುದು. ಸ್ಮೃತಿ ಇರಾನಿಯವರು ಹೇಳಿದಂತೆ, ಬಿಲ್ಗೇಟ್ಸ್ ಅವರೇ ಒಗ್ಗರಣೆ ಹಾಕಿದ್ದಾರೆ. ಬಳಿಕ, ಕಿಚಡಿಗೆ ಆ ಒಗ್ಗರಣೆಯನ್ನು ಸ್ಮೃತಿ ಇರಾನಿ ಸೇರಿಸಿದ್ದಾರೆ.
ಈ ವಿಡಿಯೊವನ್ನು ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಕೆಲವರು ಜೋಕ್ ಮಾಡಿದ್ದಾರೆ. ‘ಕಿಚಡಿಗೆ ಸರಿಯಾದ ಒಗ್ಗರಣೆ ಬೀಳುವುದು ತುಂಬ ಮುಖ್ಯ ಎಂದು ಒಬ್ಬರು ಹೇಳಿದ್ದಾರೆ. ಹಾಗೇ, ಇನ್ನೊಬ್ಬರು ಕಮೆಂಟ್ ಮಾಡಿ ‘ಈ ಕಿಚಡಿಯನ್ನು ಈಗ ಮೈಕ್ರೋಸಾಫ್ಟ್ ಕಿಚಡಿ ಎಂದು ಕರೆಯೋಣವೇ’ ಎಂದು ತಮಾಷೆ ಮಾಡಿದ್ದಾರೆ. ವಿಡಿಯೊ ಈಗಾಗಲೇ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.
ಸ್ಮೃತಿ ಇರಾನಿ ಮತ್ತು ಬಿಲ್ ಗೇಟ್ಸ್ ಅವರು ಕಿಚಡಿಗೆ ಒಗ್ಗರಣೆ ಹಾಕಿರುವ ವಿಡಿಯೊ: