ಹಾವುಗಳೆಂದರೇ ಒಂದು ರೀತಿಯ ಭಯ ಹುಟ್ಟಿಸುವ ಸರೀಸೃಪಗಳು. ಕಚ್ಚುವ ಚಿಕ್ಕ ಹಾವುಗಳಿಂದ ಹಿಡಿದು, ಮನುಷ್ಯರನ್ನು, ಪ್ರಾಣಿಗಳನ್ನೇ ನುಂಗಬಹುದಾದಷ್ಟು ದೊಡ್ಡದಾಗಿರುವ ಹೆಬ್ಬಾವುಗಳವರೆಗೆ, ಯಾವುದೇ ಹಾವಿರಲಿ ಬಹುತೇಕರಿಗೆ ಅವುಗಳನ್ನು ನೋಡಿದ ತಕ್ಷಣ ಇಡೀ ಮೈಯಲ್ಲೆಲ್ಲ ಹೆದರಿಕೆ ಆವರಿಸುತ್ತದೆ. ಅದರಲ್ಲೂ ಹೆಬ್ಬಾವುಗಳಲ್ಲಿ ವಿವಿಧ ಪ್ರಬೇಧಗಳಿದ್ದು, ಅವೆಲ್ಲವೂ ಮನುಷ್ಯರನ್ನೇ ಜೀವಂತವಾಗಿ ನುಂಗಬಹುದಾದಷ್ಟು ದೊಡ್ಡದಾಗಿರುತ್ತವೆ. ಕಾಡಿನಲ್ಲಿರುವ ಅದೆಷ್ಟೋ ಪ್ರಾಣಿಗಳು ಹೀಗೆ ಹೆಬ್ಬಾವುಗಳ ಹೊಟ್ಟೆ ಸೇರಿ, ಜೀವ ಬಿಡುತ್ತವೆ. ಈಗ ಒಂದು ವಿಡಿಯೊ ವೈರಲ್ ಆಗಿವೆ. ಒಂದು ದೊಡ್ಡದಾದ ಹಸುವನ್ನು ಹೆಬ್ಬಾವು ನುಂಗಿರುವ ವಿಡಿಯೊ ಇದು. ಧೈರ್ಯವಿದ್ದರೆ ಮಾತ್ರ ನೀವೂ ಈ ವಿಡಿಯೊ ನೋಡಿ!
ಅದು ಮಾರುದ್ದವಾದ, ದೊಡ್ಡದಾದ ಹೆಬ್ಬಾವು. ಯಾವ ಸ್ಥಳ ಎಂದು ಗೊತ್ತಾಗಿಲ್ಲ. ಆದರೆ ನೋಡಿದರೆ ಅದ್ಯಾವುದೋ ಮನೆ ಸಮೀಪದ ಕಾಡು ಎಂದು ಅನ್ನಿಸುತ್ತದೆ. ಆ ಹಾವು ಕೆಂಪು ಬಣ್ಣದ ಹಸುವನ್ನು ನುಂಗಿದೆ. ಹಸುವಿನ ಬಾಯಿಯಿಂದ ಹೊಟ್ಟಯವರೆಗೆ ಹಾವಿನ ಬಾಯಿಯಲ್ಲಿ ಇದ್ದರೆ, ಬಾಲದ ಭಾಗ ಚೂರೇಚೂರು ಹೊರಗೆ ಕಾಣುತ್ತಿದೆ. ಅದನ್ನೂ ಕೂಡ ಹೆಬ್ಬಾವು ತನ್ನ ಬಾಲದಲ್ಲಿ ಸುತ್ತಿ ಹಿಡಿದಿದೆ. ಅಲ್ಲೇ ಪಕ್ಕದಲ್ಲಿ ಪುಟ್ಟದಾದ ಹೆಬ್ಬಾವಿನ ಮರಿಯೊಂದು ಮತ್ತು ಹಲವು ಮೊಟ್ಟೆಗಳು ಇರುವುದನ್ನು ವಿಡಿಯೊದಲ್ಲಿ ನೋಡಬಹುದು. ನೆಟ್ಟಿಗರಂತೂ ವಿಡಿಯೊ ನೋಡಿ ಹೌಹಾರಿದ್ದಾರೆ. ಭಯಪಡಿಸುವ ವಿಡಿಯೊ ಎಂದು ಹೇಳಿದ್ದಾರೆ.
ಕಳೆದ ವರ್ಷ ಅಕ್ಟೋಬರ್ನಲ್ಲಿ ಇಂಡೋನೇಷ್ಯಾದಲ್ಲಿ 22 ಅಡಿ ಉದ್ದದ ಹೆಬ್ಬಾವೊಂದು 54ವರ್ಷದ ಮಹಿಳೆಯೊಬ್ಬರನ್ನು ನುಂಗಿತ್ತು. ಅದರ ಭಯಾನಕ ದೃಶ್ಯ ಕೂಡ ವೈರಲ್ ಆಗಿತ್ತು. ಜಹ್ರಾಹ್ ಎಂಬ ಮಹಿಳೆ ರಬ್ಬರ್ ಸಂಗ್ರಹಕ್ಕೆಂದು ದಟ್ಟಾರಣ್ಯಕ್ಕೆ ಹೋಗಿದ್ದರು. ಆಗ ಹೆಬ್ಬಾವಿನ ಬಾಯಿ ಸೇರಿದ್ದರು. ಹೋದವರು ಎಷ್ಟು ಹೊತ್ತಾದರೂ ಬಾರದೆ ಇದ್ದಾಗ ಅವರ ಕುಟುಂಬದವರು ಹುಡುಕಿ ಹೋಗಿದ್ದರು. ಆಕೆಯ ಚಪ್ಪಲಿ, ಜಾಕೆಟ್ಗಳು ಸಿಕ್ಕಿದ್ದವು. ಆದರೆ ಅವರು ಪತ್ತೆಯಾಗಿರಲಿಲ್ಲ. ಎಲ್ಲಿಯೂ ಅವರು ಸಿಗದಾಗ ಪೊಲೀಸರಿಗೆ ದೂರು ನೀಡಿದ್ದರು. ಹೀಗೆ ಕಾಡಿನಲ್ಲಿ ಹುಡುಕುತ್ತಿದ್ದಾಗ ದೊಡ್ಡದೊಂದು ಹೆಬ್ಬಾವು ಕಂಡಿತ್ತು. ಮತ್ತು ಅದರ ಹೊಟ್ಟೆ ಊದಿಕೊಂಡಿತ್ತು. ಅನುಮಾನ ಬಂದು, ಸ್ಥಳೀಯರಲ್ಲೆ ಸೇರಿ, ಸಂಪೂರ್ಣ ಮುನ್ನೆಚ್ಚರಿಕೆ ತೆಗೆದುಕೊಂಡು ಹಾವಿನ ಹೊಟ್ಟೆಯನ್ನು ಕೊಯ್ದಿದ್ದರು. ಆಗ ಮಹಿಳೆಯ ಜೀರ್ಣವಾಗದ ದೇಹ ಪತ್ತೆಯಾಗಿತ್ತು.
ಇದನ್ನೂ ಓದಿ: ಕುಮಟಾದಲ್ಲಿ ಅಪರೂಪದ ಬಿಳಿ ಹೆಬ್ಬಾವು ಪ್ರತ್ಯಕ್ಷ: ಸುರಕ್ಷಿತ ಜಾಗಕ್ಕೆ ಸ್ಥಳಾಂತರ