20 ವರ್ಷಗಳಿಂದ ಅಮ್ಮ ಯಾಕೆ ಒಂದು ಚಿಕ್ಕ ಸ್ಟೀಲ್ ಪ್ಲೇಟ್ನಲ್ಲೇ ಊಟ ಮಾಡುತ್ತಿದ್ದಳು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡ ಮಗ ಆ ವಿಷಯವನ್ನೀಗ ತಮ್ಮ ಟ್ವಿಟರ್ (Twitter)ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಿಂಡಿ ತಿನ್ನಲು, ಊಟ ಮಾಡಲು ಅಮ್ಮ ಪ್ರತಿದಿನವೂ ಸಣ್ಣ ಪ್ಲೇಟ್ನ್ನೇ ತೆಗೆದುಕೊಂಡರೂ, ಆಕೆ ಆ ಬಟ್ಟಲನ್ನು ಬೇರೆ ಯಾರಿಗೂ ಬಳಸಲು ಬಿಡದೆ ಇದ್ದರೂ ಒಂದಿನನೂ ಆತ ಪ್ರಶ್ನೆ ಮಾಡಿರಲಿಲ್ಲ. ಅದೇನೂ ದೊಡ್ಡ ವಿಷಯ ಎಂದು ಅವನಿಗೆ ಅನ್ನಿಸಿರಲೂ ಇಲ್ಲ. ಆದರೆ ಅಮ್ಮ ತೀರಿಕೊಂಡ ಮೇಲೆ ಆ ಪ್ಲೇಟ್ನ ಗುಟ್ಟು ರಟ್ಟಾಗಿದೆ. ವಿಷಯ ತಿಳಿದ ಮಗ ಅತ್ಯಂತ ಭಾವನಾತ್ಮಕವಾಗಿ ಟ್ವೀಟ್ ಮಾಡಿಕೊಂಡಿದ್ದಾರೆ.
ಅಪ್ಪ-ಅಮ್ಮನ ಪಾಲಿಗೆ ಮಕ್ಕಳ ಸಣ್ಣಸಣ್ಣ ಗೆಲುವೂ ದೊಡ್ಡ ಸಂಭ್ರಮ. ಮಕ್ಕಳು ಗೆಲ್ಲುವ ಪ್ರತಿ ಬಹುಮಾನ, ಪ್ರಶಸ್ತಿಗಳೂ ತಂದೆ-ತಾಯಿಯ ಪಾಲಿಗೆ ಕಾಪಿಟ್ಟುಕೊಳ್ಳುವ ಸಂಗತಿಗಳೇ ಆಗಿರುತ್ತವೆ. ಮಕ್ಕಳು ದೊಡ್ಡವರಾಗುತ್ತ ತಾವು ಬಾಲ್ಯದಲ್ಲಿ ಪಡೆದಿದ್ದ ಪ್ರಶಸ್ತಿ-ಬಹುಮಾನಗಳನ್ನು ಮರೆತೇ ಬಿಡಬಹುದು, ಆದರೆ ಅಮ್ಮನನ್ನು ಕೇಳಿನೋಡಿ ‘ನನ್ನ ಮಗ ಇಷ್ಟನೇ ವಯಸ್ಸಿನಲ್ಲಿ, ಇಂಥದ್ದೇ ಸ್ಪರ್ಧೆಗೆ, ಇದೇ ಬಹುಮಾನವನ್ನು/ಪ್ರಶಸ್ತಿಯನ್ನು ಪಡೆದಿದ್ದ’ ಎಂದು ಎಷ್ಟೇ ವರ್ಷಗಳು ಕಳೆದರೂ ನಿಖರವಾಗಿ ಹೇಳುತ್ತಾಳೆ. ಇಲ್ಲಿ ಕೂಡ ಆಗಿದ್ದು ಅದೇ, ಆ ತಾಯಿ ತನ್ನ ಮಗ 7ನೇ ಕ್ಲಾಸಿನಲ್ಲಿ ಬಹುಮಾನವಾಗಿ ಗೆದ್ದಿದ್ದ ಈ ಸ್ಟೀಲ್ ಪ್ಲೇಟ್ನ್ನು ಅಷ್ಟು ಜೋಪಾನವಾಗಿ ಕಾದಿಟ್ಟುಕೊಂಡಿದ್ದರು. ಅಂದಿನಿಂದ ಇಲ್ಲಿಯವರೆಗೆ ಅದೇ ಪ್ಲೇಟ್ನಲ್ಲಿಯೇ ಊಟ ಮಾಡುತ್ತಿದ್ದರು.
ಆ ಪುತ್ರನ ಹೆಸರು ವಿಕ್ರಮ್ ಎಸ್. ಬುದ್ಧನೇಸನ್. ಇವರೀಗ ಟ್ವಿಟರ್ನಲ್ಲಿ ಪ್ಲೇಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ‘ಇದು ನನ್ನ ಅಮ್ಮನ ಬಟ್ಟಲು. ಕಳೆದ 24 ವರ್ಷಗಳಿಂದಲೂ ಏನೇ ತಿನ್ನುವುದಾದರೂ ಆಕೆ ಈ ಪ್ಲೇಟ್ನ್ನೇ ಬಳಸುತ್ತಿದ್ದರು. ಆ ಬಟ್ಟಲನ್ನು ಅವಳು ಬಿಟ್ಟರೆ ನಾನು ಮತ್ತು ನನ್ನ ಸಹೋದರಿಯ ಮಗಳು ಶ್ರುತಿ ಇಬ್ಬರು ಮಾತ್ರ ಬಳಸಬಹುದಿತ್ತು. ಉಳಿದ ಇನ್ಯಾರಿಗೂ ಅದನ್ನು ಉಪಯೋಗಿಸಲು ಬಿಡುತ್ತಿರಲಿಲ್ಲ. ಅಮ್ಮ ಇತ್ತೀಚೆಗೆ ತೀರಿಕೊಂಡರು. ಅವರು ಮೃತಪಟ್ಟ ಬಳಿಕವಷ್ಟೇ ನನ್ನ ಸಹೋದರಿ ಈ ಪ್ಲೇಟ್ನ ಬಗ್ಗೆ ತಿಳಿಸಿದಳು. 1999ರಲ್ಲಿ ನಾನು 7ನೇ ಕ್ಲಾಸಿನಲ್ಲಿದ್ದಾಗ ಯಾವುದೋ ಸ್ಪರ್ಧೆಯಲ್ಲಿ ಗೆದ್ದಾಗ ಬಹುಮಾನವಾಗಿ ಸಿಕ್ಕ ಪ್ಲೇಟ್ ಇದು. ಅಂದಿನಿಂದಲೂ ಅಮ್ಮ ಇದನ್ನು ಜೋಪಾನ ಮಾಡಿದ್ದಾರೆ. ಆದರೆ ಒಂದಿನನೂ ಅಮ್ಮ ನನಗಿದನ್ನು ಹೇಳಿರಲಿಲ್ಲ. ಅವರ ಪ್ರೀತಿಗೆ ಸಾಟಿಯೇ ಇಲ್ಲ. ನಾನು ನನ್ನ ಅಮ್ಮನನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಅಂದಹಾಗೇ, ಈ ವಿಕ್ರಮ್ ಅವರು ಒಬ್ಬರು ಡೆಂಟಿಸ್ಟ್ ಎಂಬುದು ಅವರ ಟ್ವಿಟರ್ ಪ್ರೊಫೈಲ್ನಿಂದ ಗೊತ್ತಾಗುತ್ತದೆ.
ವಿಕ್ರಮ್ ಅವರ ಟ್ವಿಟರ್ ಪೋಸ್ಟ್ಗೆ ಅನೇಕರು ಅತ್ಯಂತ ಭಾವನಾತ್ಮಕವಾಗಿ ಕಮೆಂಟ್ ಮಾಡಿದ್ದಾರೆ. ಅಮ್ಮನ ಪ್ರೀತಿ ಅನಂತ, ನೀವು ಹೇಳಿದ ವಿಷಯ ಅತ್ಯಂತ ಹೃದಯಸ್ಪರ್ಶಿಯಾಗಿದೆ, ಈ ಜಗತ್ತಿನಲ್ಲಿ ಅಮ್ಮನ ಪ್ರೀತಿಗೆ ಹೋಲಿಕೆಯೇ ಇಲ್ಲ ಎಂಬಿತ್ಯಾದಿ ಕಮೆಂಟ್ಗಳನ್ನು ಬರೆದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ