ದೊಡ್ಡ ದೇಹ, ಅಗಲ ಕಿವಿ, ನಾಲ್ಕು ಕಂಬದಂಥ ಕಾಲುಗಳು, ಸಾಲದ್ದಕ್ಕೆ ಉದ್ದನೆಯ ಸೊಂಡಿಲು ಹೊತ್ತು ಗಾಂಭೀರ್ಯದಿಂದ ಓಡಾಡುವ ಆನೆಗಳ ಬಳಿ ಹೋಗಲು ಎಂಥವರಿಗಾದರೂ ಸಣ್ಣ ಅಳುಕು ಇದ್ದೇ ಇರುತ್ತದೆ. ಅವು ಮುದ್ದಿಸುವಾಗ ಎಷ್ಟು ಚೆನ್ನಾಗಿ ಮುದ್ದಿಸುತ್ತವೋ, ಕೋಪಗೊಂಡಾಗ ಒಂದೇ ಕ್ಷಣದಲ್ಲಿ ಎತ್ತಿ ಬಿಸಾಕಿ ಬಿಡುತ್ತವೆ. ಇದು ಮನುಷ್ಯರಿಗೆ ಮಾತ್ರ ಅನ್ವಯವಲ್ಲ. ಕಾಡಿನಲ್ಲಿರುವ ಕಾಡಾನೆಗಳು ಸ್ವಲ್ಪ ಆಕ್ರಮಣ ಮನೋಭಾವವನ್ನೇ ಹೊಂದಿರುತ್ತವೆ. ಚಿಕ್ಕಪುಟ್ಟ ಪ್ರಾಣಿಗಳು ಬಿಡಿ, ಹುಲಿ-ಸಿಂಹಗಳಂಥ ಕ್ರೌರ್ಯವೇ ತುಂಬಿದ, ಬೇಟೆಯಾಡಲು ಹೆಸರು ಮಾತಾಗಿರುವ ಪ್ರಾಣಿಗಳು ಅಷ್ಟು ಬೇಗ ಆನೆಗಳ ಬಳಿ ಹೋಗುವುದಿಲ್ಲ. ಕಾಡಿನಲ್ಲಿ ಆನೆಗಳು ಹಿಂಡಿನಲ್ಲಿಯೇ ಇರುವುದರಿಂದ ಹುಲಿ-ಸಿಂಹಗಳು ಕೂಡ ಸಲೀಸಾಗಿ ಅವುಗಳ ಸಹವಾಸಕ್ಕೆ ಹೋಗೋದಿಲ್ಲ. ಆನೆಗಳು ಒಂಟಿಯಾಗಿ ಸಿಕ್ಕರೆ ಈ ಕಾಡು ಪ್ರಾಣಿಗಳು ಬೇಟೆಗೆ ಮುನ್ನುಗ್ಗಿದರೂ ಬಹುಪಾಲು ಸಮಯದಲ್ಲಿ ಗೆಲುವು ಆನೆಯದ್ದೇ ಆಗಿರುತ್ತದೆ.
ಈಗ ಸೋಷಿಯಲ್ ಮೀಡಿಯಾದಲ್ಲಿ ಆನೆಗಳು ಮತ್ತು ಒಂದು ಹುಲಿಯ ವಿಡಿಯೊ ವೈರಲ್ ಆಗುತ್ತಿದೆ. ಅದೊಂದು ರಸ್ತೆಯಲ್ಲಿ ಹುಲಿಯೊಂದು ಉದ್ದನೆಯ ಬಾಲ ಅಲ್ಲಾಡಿಸುತ್ತ, ಅಂಕು-ಡೊಂಕು ಹೆಜ್ಜೆ ಇಡುತ್ತ ಬಿಂದಾಸ್ ಆಗಿ ಹೋಗುತ್ತಿರುತ್ತದೆ. ಥಟ್ಟನೇ ರಸ್ತೆ ಪಕ್ಕದ ಕಾಲುವೆಯಲ್ಲಿ, ದೊಡ್ಡದಾದ ಹುಲ್ಲುಗಳ ಮರೆಯಲ್ಲಿ ಅವಿತು, ಮುದುಡಿ ಕುಳಿತುಬಿಡುತ್ತದೆ. ಅದ್ಯಾಕೆ ಆ ಹುಲಿ ಹಾಗೆ ಮಾಡಿತು ಎಂದು ನೀವು ಯೋಚಿಸುವುದರೊಳಗೆ, ಅಲ್ಲಿ ಸಲಗವೊಂದು ಬರುತ್ತಿರುವುದು ನಿಮಗೆ ಕಾಣಿಸುತ್ತದೆ. ಹೀಗೆ ಮೂರು ಸಲಗಗಳು ರಸ್ತೆ ದಾಟಿ ಪಕ್ಕದ ಕಾಡಿಗೆ ಹೋಗುವವರೆಗೂ ಹುಲಿ ಅಲ್ಲಿಂದ ಎದ್ದು ಬರುವುದಿಲ್ಲ. ಆನೆಗಳು ಹೋದವು ಎಂದು ದೃಢಪಡಿಸಿಕೊಂಡ ಬಳಿಕ ಅಲ್ಲಿಂದ ಎದ್ದ ಹುಲಿ, ಆನೆಗಳು ಹೋದ ದಿಕ್ಕಿನತ್ತ ಹೆಜ್ಜೆ ಹಾಕಿ, ಸೆಕೆಂಡ್ಗಳ ಕಾಲ ಅಲ್ಲಿ ನಿಂತು ವಾಪಸ್ ಬರುತ್ತದೆ. ಆನೆಗಳು ಹೋಗಿರುವ ವಿರುದ್ಧ ದಿಕ್ಕಿಗೆ ನಡೆಯುತ್ತದೆ.
ಐಎಫ್ಎಸ್ ಅಧಿಕಾರಿ ಸುಸಾಂತಾ ನಂದಾ ಅವರು ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ಕಾಡೆಂಬ ಸಾಮ್ರಾಜ್ಯದಲ್ಲಿ ಪ್ರಾಣಿಗಳು ಹೇಗೆ ಸಂವಹನ ನಡೆಸುತ್ತವೆ, ಸಾಮರಸ್ಯವನ್ನು ಕಾಪಾಡಿಕೊಳ್ಳುತ್ತವೆ ಎಂಬುದಕ್ಕೆ ಈ ವಿಡಿಯೊ ಸಾಕ್ಷಿ ಎಂದು ಹೇಳಿದ್ದಾರೆ. ಈ ವಿಡಿಯೊ ಮಾಡಿದ್ದು ವಿಜೇತ್ ಸಿಂಹಾ ಎಂದೂ ಅವರು ತಿಳಿಸಿದ್ದಾರೆ. ಈ ವಿಡಿಯೊಕ್ಕೆ ಲಕ್ಷಾಂತರ ವೀವ್ಸ್ ಬಂದಿದೆ. ಅನೇಕರು ಕಮೆಂಟ್ ಮಾಡಿದ್ದಾರೆ. ಕೆಲವರು ಆ ಹುಲಿ ಆನೆಗಳಿಗೆ ಕೊಟ್ಟ ಗೌರವ ಇದು ಎಂದು ಹೇಳಿದ್ದರೆ, ಇನ್ನೂ ಅನೇಕರು, ಇಲ್ಲ ಇಲ್ಲ, ಗಜಗಳನ್ನು ನೋಡಿ ಹುಲಿ ಹೆದರಿ ಹಾಗೆ ಕುಳಿತಿತು ಎಂದಿದ್ದಾರೆ. ಹುಲಿ ಯಾಕೆ ಹಾಗೆ ಕುಳಿತಿತು ಎಂಬುದಕ್ಕೆ ಉತ್ತರವಿಲ್ಲ. ಅದೇನೇ ಇರಲಿ ಈ ವಿಡಿಯೊ ನೋಡಿದರೆ ವನ್ಯಜೀವಿಗಳಿಗೂ ಒಂದು ಭಾಷೆಯಿದೆ. ಅವರಲ್ಲೂ ಒಂದು ವಿಶೇಷ ಗ್ರಹಿಕೆ-ಸಂವಹನ ಶಕ್ತಿ ಇದೆ ಎಂದು ನಮಗೂ ಅನ್ನಿಸುತ್ತದೆ. ಆದರೆ ಅದು ಮನುಷ್ಯರಿಗೆ ಅರ್ಥವಾಗುವಂಥದ್ದಲ್ಲ ಅಷ್ಟೇ !