ಮುಂಬಯಿ: ಮುಂಬಯಿಯಲ್ಲಿ ಅದಾನಿ ಕಂಪನಿಗೆ (Adani group) ಸೇರಿದ ಒಂದು ಸೇತುವೆಯನ್ನೇ ಕದಿಯಲಾಗಿದೆ! ನಿಜ, ಸುಮಾರು 6,000 ಕಿಲೋ ತೂಕದ ಸ್ಟೀಲ್ ಬ್ರಿಜ್ (Steel Bridge) ಅನ್ನು ಕಳ್ಳರು ಪತ್ತೆಯಾಗದಂತೆ ಕದ್ದೊಯಿದ್ದಾರೆ. ನಂತರ ಪೊಲೀಸರ ಅತಿಥಿಗಳಾಗಿದ್ದಾರೆ.
ಇದು ನಡೆದಿರುವುದು ಮುಂಬಯಿ ಹೊರವಲಯದ ಮಲಾಡ್ ಬ್ಯಾಕ್ ರೋಡ್ ಎಂಬಲ್ಲಿ. ಕಳೆದ ಜೂನ್‌ನಲ್ಲಿ ಈ ತಾತ್ಕಾಲಿಕ ಸ್ಟೀಲ್ ಸೇತುವೆಯನ್ನು ಸಣ್ಣದೊಂದು ಹಳ್ಳಕ್ಕೆ ಅಡ್ಡವಾಗಿ ನಿರ್ಮಿಸಲಾಗಿತ್ತು. ಹಳ್ಳದಿಂದ ಆಚೆಗೆ ನಿರ್ಮಾಣ ಸಾಮಗ್ರಗಳನ್ನು ಒಯ್ಯಲು ಇದನ್ನು ಬಳಸಲಾಗುತ್ತಿತ್ತು. ಇಲ್ಲಿ ಶಾಶ್ವತ ಸೇತುವೆಯ ನಿರ್ಮಾಣದ ಬಳಿಕ ಈ ಬ್ರಿಡ್ಜ್ ಅನ್ನು ಕಳಚಲಾಯಿತು. ಬಿಚ್ಚಿದ ಸೇತುವೆ ಸ್ಟೀಲ್ ಭಾಗಗಳನ್ನು ಅಲ್ಲೇ ಪಕ್ಕದಲ್ಲಿ ರಾಶಿ ಹಾಕಿ, ಟಾರ್ಪಾಲ್ ಮುಚ್ಚಿ, ಸಾಗಿಸುವ ವಾಹನ ಬರುವವರೆಗೂ ಇರಲಿ ಎಂದು ಇಡಲಾಗಿತ್ತು.
ಇದನ್ನೇ ಕಳ್ಳರು ಕದ್ದು ಸಾಗಿಸಿದ್ದಾರೆ. ಸ್ಥಳದಲ್ಲಿ ಯಾವುದೇ ಜನರ ಓಡಾಟ, ಸಿಸಿ ಟಿವಿ ಕ್ಯಾಮೆರಾ ಇಲ್ಲದುದರಿಂದ ಮಾಡಿದವರು ಯಾರೆಂದು ಸುಲಭವಾಗಿ ಪತ್ತೆಯಾಗಲಿಲ್ಲ. ಅದಾನಿ ಕಂಪನಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿತು. ಪೊಲೀಸರು ಪ್ರಕರಣದ ಬೆನ್ನು ಬಿದ್ದು, ಆ ಸ್ಥಳಕ್ಕೆ ಬಂದುಹೋದ ಭಾರಿ ವಾಹನವೊಂದರ ನೋಂದಣಿ ಸಂಖ್ಯೆಯನ್ನು ಅಲ್ಲಿಂದ ದೂರದಲ್ಲಿದ್ದ ಕಟ್ಟಡಗಳ ಸಿಸಿ ಕ್ಯಾಮೆರಾಗಳ ಮೂಲಕ ಪತ್ತೆ ಹಚ್ಚಿ, ಕಡೆಗೂ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ. ಸದ್ಯ ನಾಲ್ವರು ಕಳ್ಳರನ್ನು ಹಿಡಿಯಲಾಗಿದೆ.
ಇದನ್ನೂ ಓದಿ: Viral Video: ಶಿಕ್ಷಕಿಯ ನಿವೃತ್ತಿ, ಬಿಕ್ಕಿ ಬಿಕ್ಕಿ ಅತ್ತು ಬೀಳ್ಕೊಟ್ಟ ಮಕ್ಕಳು; ಶಾಲಾ ದಿನಗಳ ನೆನಪಿಸುವ ವಿಡಿಯೊ ಇದು