ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತು ಸತ್ಯವೆಂದು ಅದೆಷ್ಟೋ ಸಲ ಸಾಬೀತಾಗಿದೆ. ಮತ್ತೆ ಆ ಮಾತನ್ನು ಪುಷ್ಟೀಕರಿಸುವ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಗುಜರಾತ್ನಲ್ಲಿ ಚಿತ್ರೀಕರಿಸಲಾದ ವಿಡಿಯೊ ಇದು ಎನ್ನಲಾಗಿದ್ದು, ಇದರಲ್ಲಿ ನಾಲ್ಕು ನಾಯಿಗಳು ಸೇರಿ ಒಂದು ದೊಡ್ಡದಾದ ಸಿಂಹವನ್ನು ಹೆದರಿಸಿ, ಓಡಿಸಿದ್ದಾವೆ. ಒಂದು ನಾಯಿ ಸಿಂಹವನ್ನೆಂದೂ ಎದುರಿಸಲಾರದು. ಆ ನಾಯಿಯನ್ನು ಕೊಂದು, ಬಾಯಿಗೆ ಹಾಕಿಕೊಳ್ಳಲು ಸಿಂಹಕ್ಕೆ ಕ್ಷಣ ಸಾಕು. ಆದರೆ ಮೂರ್ನಾಲ್ಕು ನಾಯಿಗಳು ಬೆನ್ನಟ್ಟಿ ಬಂದಾಗ ಕಾಡಿನ ರಾಜ ಕೂಡ ಹೆದರಿ ಓಡಿದೆ.
ಭಾರತೀಯ ಅರಣ್ಯ ಸೇವಾಧಿಕಾರಿ (IFS) ಸುಸಾಂತಾ ನಂದಾ ಅವರು ವಿಡಿಯೊವನ್ನು ಶೇರ್ ಮಾಡಿಕೊಂಡು ‘ನಾಯಿಗಳೂ ಸಿಂಹಗಳಾಗಬಲ್ಲವು, ಅವರ ಸ್ವಂತ ನೆಲದಲ್ಲಿ. ಇದು ಗುಜರಾತ್ ರಸ್ತೆಯೊಂದರಲ್ಲಿ ಚಿತ್ರೀಕರಿಸಿದ್ದು’ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಕಾಡುಪ್ರಾಣಿಗಳು ನಾಡಿಗೆ ಬಂದರೆ ಅವು ಸಹಜವಾಗಿಯೇ ಸ್ವಲ್ಪ ಕಂಗಾಲಾಗುತ್ತವೆ. ಹಾಗೇ, ಈ ಸಿಂಹವೂ ಕೂಡ ರಾತ್ರಿ ವೇಳೆ ಹಳ್ಳಿಗೆ ಬಂದುಬಿಟ್ಟಿದೆ. ಅದೂ ಕೂಡ ತನ್ನ ಆಹಾರವನ್ನು ಹುಡುಕಿಕೊಂಡೇ ಬಂದಿದೆ. ಹಸು-ಕುರಿ-ನಾಯಿ, ಕೋಳಿ ಏನಾದರೂ ಸಿಗಬಹುದು ಎಂಬ ಆಸೆ ಅದರದ್ದು. ಆದರೆ ಹಳ್ಳಿಗೆ ಕಾಲಿಟ್ಟ ಬಳಿಕ ಆಗಿದ್ದೇ ಬೇರೆ.
ಇದನ್ನೂ ಓದಿ: Viral Video: ಭೂಕಂಪನದ ಮಧ್ಯೆಯೇ ಗರ್ಭಿಣಿಗೆ ಸಿಸೇರಿಯನ್ ಮಾಡಿದ ಕಾಶ್ಮೀರಿ ವೈದ್ಯರು; ವೃತ್ತಿ ಬದ್ಧತೆಗೆ ನಮನ ಎಂದ ಜನರು
ಸಿಂಹ ಮುಂದೆ ಹೋಗುತ್ತಿದ್ದರೆ, ನಾಲ್ಕು ನಾಯಿಗಳು ಅದರ ಹಿಂದೆಯೇ ಹೋಗಿವೆ. ಸಿಂಹ ಹೋಗುವ ದಾರಿಯಲ್ಲಿ ಒಂದಷ್ಟು ಹಸುಗಳ ಹಿಂಡೂ ಕೂಡ ಇತ್ತು. ಓಡುತ್ತಿದ್ದ ಸಿಂಹ ಆ ಹಸುಗಳನ್ನು ನೋಡಿ ಗಲಿಬಿಲಿಗೊಂಡರೆ, ಹಸುಗಳೂ ಕಂಗಾಲಾಗಿ ಅತ್ತಿತ್ತ ಓಡಿವೆ. ಒಟ್ಟಿನಲ್ಲಿ ನಾಡಪ್ರಾಣಿಗಳನ್ನು ನೋಡಿ, ಕಾಡುಪ್ರಾಣಿ ಅದರಲ್ಲೂ ಕಾಡಿನ ರಾಜ ಎನ್ನಿಸಿಕೊಂಡ ಸಿಂಹವೇ ಹೆದರಿ ಓಡಿದೆ. ಈ ವಿಡಿಯೊಕ್ಕೆ ನೆಟ್ಟಿಗರು ತಮಾಷೆಯುಕ್ತ ಕಮೆಂಟ್ ಹಾಕುತ್ತಿದ್ದಾರೆ.
ಈಗಾಗಲೇ 20 ಸಾವಿರಕ್ಕೂ ಅಧಿಕ ವೀವ್ಸ್ ಕಂಡಿದೆ ಈ ವಿಡಿಯೊ. ‘ಅಯ್ಯೋ, ಗುಜರಾತ್ನಲ್ಲಿ ಹೀಗೆ ರಸ್ತೆ ಮೇಲೆಲ್ಲ ಸಿಂಹ ಓಡಾಡುತ್ತದೆಯಾ. ನಾವು ಪುಣ್ಯ ಮಾಡಿದ್ದೇವೆ, ನಮ್ಮಲ್ಲಿ ರಸ್ತೆಗಳ ಮೇಲೆ ಕೇವಲ ಬೆಕ್ಕು-ನಾಯಿಗಳು ಮಾತ್ರ ಓಡಾಡುತ್ತವೆ’ ಎಂದು ಒಬ್ಬರು ಹೇಳಿದ್ದಾರೆ. ಹಾಗೇ, ಇನ್ನೊಬ್ಬರು ಕಮೆಂಟ್ ಮಾಡಿ ‘ಈ ಸಿಂಹಕ್ಕೆ ಧೈರ್ಯ ಇಲ್ಲ ಎನ್ನಿಸುತ್ತದೆ. ಹಾಗೊಮ್ಮೆ ಇದ್ದಿದ್ದರೆ, ಒಂದು ಸಲ ತಿರುಗಿ ಒಂದು ನಾಯಿ ಮೇಲೆ ಅದು ನೆಗೆದಿದ್ದರೆ ಸಾಕಿತ್ತು, ಎಲ್ಲ ನಾಯಿಗಳೂ ಬಾಲ ಮುದುರಿಕೊಂಡು ಓಡುತ್ತಿದ್ದವು’ ಎಂದು ಹೇಳಿದ್ದಾರೆ.