ಅಡುಗೆ ಎನ್ನುವುದೂ ಒಂದು ಕಲೆ. ಮನೆಯಲ್ಲಿ ಪ್ರತಿನಿತ್ಯ ಅಡುಗೆಯ ಜವಾಬ್ದಾರಿ ಹೊತ್ತುಕೊಂಡು ಮನೆಮಂದಿಗೆ ಪೋಷಕಾಂಶಯುಕ್ತ ಆಹಾರವನ್ನು ನೀಡುವುದೆಂದರೆ ಅದು ಸುಲಭದ ಮಾತಲ್ಲ. ಬೋರಾಗದಂತೆ, ವೆರೈಟಿ ಇರುವಂತೆ, ಎಲ್ಲರ ದೇಹಪ್ರಕೃತಿ ಅಭ್ಯಾಸಗಳಿಗೆ ಹೊಂದುವಂತೆ ರುಚಿಕಟ್ಟಾಗಿ ಸಮಯಕ್ಕೆ ಸರಿಯಾಗಿ ಅಡುಗೆ ಮಾಡಿ ಹಾಕುವ ಸಮಸ್ತ ತಾಯಂದಿರೂ ಸಂಸಾರದ ಕಣ್ಣುಗಳೇ. ಮನೆ ಶಿಸ್ತುಬದ್ಧವಾಗಿ ನಡೆದುಕೊಂಡು ಹೋಗಬೇಕೆಂದರೆ ಈ ವಿಭಾಗ ವರ್ಷದ ಮುನ್ನೂರರುವತ್ತೈದು ದಿನಗಳೂ ಸರಿಯಾಗಿ ಕೆಲಸ ಮಾಡಬೇಕು ಎಂಬುದೂ ಸತ್ಯವೇ. ಇಂಥದ್ದರಲ್ಲಿ ಇಲ್ಲೊಬ್ಬಳು ಅಮ್ಮ, ತನ್ನ ಕುಟುಂಬಕ್ಕಾಗಿ ಸುಮಾರು ಎಂಟು ತಿಂಗಳಿಗಾಗುವಷ್ಟು ೪೨೬ ಬಗೆಯ ತಿನಿಸುಗಳನ್ನು ಮೊದಲೇ ಮಾಡಿ ಶೇಖರಿಸಿಟ್ಟಿದ್ದಾಳೆ!
ಹೌದು. ಬೇಸಗೆ ಬಂತೆಂದರೆ ಆಯಾ ಕಾಲಕ್ಕೆ ಸಿಗುವ ವಸ್ತುಗಳಿಂದ ಮಳೆಗಾಲಕ್ಕೆಂದು ಹಪ್ಪಳ, ಸೆಂಡಿಗೆ, ವಿವಿಧ ಬಗೆಯ ಚಟ್ನಿಪುಡಿ, ಉಪ್ಪಿನಕಾಯಿ ಮತ್ತಿತರ ಪೂರಕ ಆಹಾರವಸ್ತುಗಳನ್ನು ಮಾಡಿಡುವುದು ಸಾಮಾನ್ಯ. ಇತ್ತೀಚೆಗೆ ಅವುಗಳ ಸಂಸ್ಕೃತಿಯೂ ಕ್ಷೀಣಿಸುತ್ತಿದೆ. ಎಲ್ಲವೂ ಮಾರುಕಟ್ಟೆಯಲ್ಲಿ ಲಭ್ಯವಿರುವುದರಿಂದ ಯಾರೂ ಮಾಡುವ ಕಷ್ಟ ತೆಗೆದುಕೊಳ್ಳುವುದಿಲ್ಲ. ಆದರೆ ಇಲ್ಲೊಬ್ಬಳು ೩೦ರ ಹರೆಯದ ಮೂರು ಮಕ್ಕಳ ತಾಯಿ ತನ್ನ ಕುಟುಂಬಕ್ಕೆ ಎಂಟು ತಿಂಗಳಿಗಾಗುವಷ್ಟು ತಿನಿಸನ್ನು ಮಾಡಿಟ್ಟದ್ದು ಹೇಗೆ ಎಂಬುದು ಎಲ್ಲರನ್ನೂ ಹುಬ್ಬೇರುವಂತೆ ಮಾಡಿದೆ.
ಇಂದಿನ ಬ್ಯುಸಿ ಲೈಫ್‌ಸ್ಟೈಲ್‌ನಲ್ಲಿ ಮನೆಯಲ್ಲಿ ಎಲ್ಲರೂ ವೃತ್ತಿ ಕನಸುಗಳ ಬೆನ್ನತ್ತಿ ಮುನ್ನಡೆಯುತ್ತಿರುವಾಗ, ಅಡುಗೆಗೆ ಮುಂಚಿತವಾಗಿಯೇ ಕೊಂಚ ರೆಡಿ ಮಾಡಿಕೊಂಡಿರುವುದು ಸಾಮಾನ್ಯ. ವೀಕೆಂಡಿನ ರಜಾ ದಿನಗಳಲ್ಲೇ ತರಕಾರಿ ಹೆಚ್ಚಿಟ್ಟು ಶೇಖರಿಸಿಡುವುದು, ಹೆಚ್ಚು ಕಾಲ ಕೆಡದೆ ಉಳಿವಂತ ಚಟ್ನಿ, ತಿನಿಸುಗಳನ್ನು ಮಾಡಿ ಕೂಡಿಡುವುದು ಇತ್ಯಾದಿ ಮಾಡುವ ಮೂಲಕ ಸಮಯ ಉಳಿತಾಯ ಮಾಡಿಕೊಳ್ಳುತ್ತೇವೆ. ಆದರೆ, ಯುಎಸ್‌ನ ಇಂಡಿಯಾನಾದಲ್ಲಿರುವ ಕೆಲ್ಸಿ ಶಾ ಎಂಬಾಕೆ ಮಾತ್ರ ೪೨೬ ಬಗೆಯ ತಿನಿಸುಗಳನ್ನು ಮೊದಲೇ ಮಾಡಿಟ್ಟು ಅಡುಗೆಯಲ್ಲಿ ಎಂತಹ ಗಟ್ಟಿಗಿತ್ತಿ ಅಜ್ಜಿಯರನ್ನೂ ಮೂಕವಿಸ್ಮಿತರನ್ನಾಗಿಸಿದ್ದಾಳೆ!
ಇದನ್ನೂ ಓದಿ | Viral Video | ಅಮ್ಮನ ಸಮಾಧಿಗೆ ಕಿಂಡಿ ಮಾಡಿ ಹುಡುಕಿದ ಮಗು; ಹೃದಯ ಕಿವುಚುವ ದೃಶ್ಯವಿದು
ಕೆಲ್ಸಿ ಶಾ ಸಿಕ್ಕಾಪಟ್ಟೆ ಆರೋಗ್ಯದ ಬಗ್ಗೆ ಕಾಳಜಿ ಇರುವವಳು. ಈಕೆ ಪ್ರತಿನಿತ್ಯ ಪೋಷಕಾಂಶಯುಕ್ತ ರುಚಿಕಟ್ಟಾದ ಅಡುಗೆ ಮಾಡುವುದರಲ್ಲಿ ಎತ್ತಿದ ಕೈ. ೨೦೧೭ರಲ್ಲಿ ಈಕೆ ತನ್ನ ಗಂಡನ ಜೊತೆ ಯುಎಸ್‌ನ ಹಳ್ಳಿಯೊಂದಕ್ಕೆ ವಲಸೆ ಹೋಗಿ ಅಲ್ಲಿ ನೆಮ್ಮದಿಯ ಜೀವನ ನಡೆಸಲು ಆರಂಭಿಸಿದ್ದಾರೆ. ಹೀಗಾಗಿ ನಗರ ಜೀವನದ ವೇಗದ ಬದುಕು ಇದ್ದಕ್ಕಿದ್ದಂತೆ ನಿಧಾನಗತಿಗೆ ಬದಲಾಗಿದೆ. ಅಂದಿನಿಂದ ಈಕೆಯ ಈ ಅಡುಗೆ ಪಯಣವೂ ಆರಂಭವಾಗಿದೆ. ಪ್ರತಿದಿನವೂ ಬಗೆಬಗೆಯ ಆದರೆ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶಗಳನ್ನು ವೆರೈಟಿಯಾಗಿ ಪೂರೈಕೆ ಮಾಡುವುದು ಈಕೆಯ ಉದ್ದೇಶ. ಅದಕ್ಕಾಗಿ ಈಕೆ ಬಗೆಬಗೆಯ ೪೨೬ ವೆರೈಟಿ ತಿನಿಸುಗಳನ್ನು ಮಾಡಿದ್ದಾಳೆ. ಇಷ್ಟು ಬಗೆಯ ತಿನಿಸುಗಳನ್ನು ಮಾಡಲು ಆಕೆ ಮೂರು ತಿಂಗಳ ಸಮಯ ತೆಗೆದುಕೊಂಡಿದ್ದಾಳೆ.
ಈಕೆ ಹೇಳುವಂತೆ, ಹಳ್ಳಿಯ ಬದುಕು ಬಹಳ ಚೆಂದನೆಯ ಅನುಭವಗಳನ್ನು ಕಟ್ಟಿಕೊಡುತ್ತದೆ. ಇಲ್ಲಿನ ಬದುಕು ಬಹಳ ನಿಧಾನವೂ, ತಾಳ್ಮೆಯಿಂದಲೂ, ನೆಮ್ಮದಿಯಿಂದಲೂ ಸಾಗುತ್ತದೆ. ನಮಗೆ ಬೇಕಾದಷ್ಟು ಧಾರಾಳ ಸಮಯ ಇಲ್ಲಿ ಸಿಗುತ್ತದೆ. ಪ್ರತಿ ನಿತ್ಯ ಅಡುಗೆ ಮನೆಗೆ ಕಾಲಿಡುವುದು ನನಗೆ ಹೆಮ್ಮೆಯ ವಿಚಾರ. ನನ್ನ ಮೂವರು ಮಕ್ಕಳು, ಗಂಡ ಹಾಗೂ ನನಗೆ ಬೇಕಾದ ಎಲ್ಲವನ್ನೂ ಇಲ್ಲಿ ಮಾಡುವುದೆಂದರೆ ನನಗೆ ಅತ್ಯಂತ ಖುಷಿ ಕೊಡುವ ಕೆಲಸ. ಹೀಗಾಗಿ ಬಹಳಷ್ಟು ಬಗೆಬಗೆಯ ಅಡುಗೆಗಳನ್ನು ಮಾಡುತ್ತಲೇ ಇರುತ್ತೇನೆ. ಒಣಗಿಸಿಡುವುದು, ಉಪ್ಪಿನಕಾಯಿ ಮಾದರಿಯ ತಿನಿಸುಗಳು, ಸಕ್ಕರೆ ಪಾಕದಲ್ಲಿ ಹಾಕಿಡುವುದು ಇತ್ಯಾದಿ ಇತ್ಯಾದಿ ಬಹಳ ಕಾಲ ಕೆಡದಂತೆ ಉಳಿವ ಎಲ್ಲ ಮಾದರಿಯ ಅಡುಗೆಯನ್ನೂ ನಾನೇ ಮಾಡುತ್ತೇನೆ. ಕಳೆದ ಲಾಕ್‌ಡೌನ್ ಸಂದರ್ಭ ನನ್ನ ಈ ಬಗೆಯ ಅಡುಗೆ ನಮ್ಮ ಮನೆಯ ಎಲ್ಲರನ್ನು ಆರೋಗ್ಯಯುತವಾಗಿ ಸಂತೃಪ್ತವಾಗಿ ಇಟ್ಟಿತು ಎಂದರೆ ಇದು ನನಗೆ ಅತ್ಯಂತ ಖುಷಿ ಕೊಟ್ಟಿದೆ ಎನ್ನುತ್ತಾಳೆ.
ಇದನ್ನೂ ಓದಿ | Viral Video | ಜೋರಾಗಿ ಉಯ್ಯಾಲೆ ಆಡುತ್ತ ತಿರುತಿರುಗಿ ಬಿದ್ದ ಮಹಿಳೆ; ಜೋಕಾಲಿ ಜೋಕೆ !
ಈಕೆ ತನ್ನ ಗಂಡನ ಜೊತೆ ತನ್ನದೇ ಗದ್ದೆಯಲ್ಲಿ ಬೆಳೆದ ಟೊಮೇಟೋಗಳಿಂದ ಕೆಚಪ್ ಮಾಡಿಡುತ್ತಾಳೆ, ಟೊಮೇಟೋ ಸಿಪ್ಪೆ ಒಣಗಿಸಿ ಅದರ ಪುಡಿ ಮಾಡಿಟ್ಟುಕೊಳ್ಳುತ್ತಾಳೆ. ಹಲವು ಬಗೆಯ ಕಾಳುಗಳು ಧಾನ್ಯಗಳಿಂದ ಚಟ್ನಿಪುಡಿಗಳನ್ನು ಮಾಡಿಡುತ್ತಾಳೆ. ಬೆಳೆದ ಹಣ್ಣುಗಳನ್ನು ಒಣಗಿಸಿ ವರ್ಷಪೂರ್ತಿ ಮನೆ ಮಂದಿಗೆ ಸಾಕಾಗುವಷ್ಟು ಶೇಖರಿಸಿಡುತ್ತಾಳೆ. ಬೇಸಿಗೆಯ ಕಾಲದಲ್ಲಿ ಫ್ರೆಶ್ ಆಗಿ ಆಯಾ ದಿನದ ಎಲ್ಲ ಅಡುಗೆಗಳನ್ನು ಮಾಡಿಕೊಳ್ಳುವ ಈಕೆ ಉಳಿದ ತಿಂಗಳುಗಳಿಗೆ ಹೀಗೆ ಬಗೆಬಗೆಯ ತಿನಿಸುಗಳನ್ನು ಮಾಡಿ ಕೂಡಿಡುತ್ತಾಳೆ. ಹೀಗೆ ಎಂಟು ತಿಂಗಳಿಗೆ ಮನೆಮಂದಿಯೆಲ್ಲ ಎರಡು ಹೊತ್ತು ಕೂತು ತಿನ್ನುವಷ್ಟು ತಿನಿಸುಗಳನ್ನು ಮಾಡಿಟ್ಟುಕೊಂಡು, ಕೇವಲ ತಾವು ಗದ್ದೆಯಲ್ಲಿ ಬೆಳೆಯದ ಅಕ್ಕಿ, ಗೋಧಿಗಳನ್ನು ಮಾತ್ರ ತರಲು ಅಂಗಡಿಗೆ ಹೋಗುತ್ತೇವೆ ಎನ್ನುತ್ತಾಳೆ.
ಸದ್ಯಕ್ಕೆ ಈಕೆ ಮಾಡಿದ ೪೨೬ ತಿನಿಸುಗಳ ಪಟ್ಟಿಗಾಗಿ ಎಲ್ಲರೂ ಕುತೂಹಲಿಗಳಾಗಿ ಕಾಯುತ್ತಿದ್ದಾರಂತೆ!