ಪಾನಿಪುರಿಯನ್ನು ಇಷ್ಟಪಡದವರು ಬಹಳ ಕಡಿಮೆ ಜನ ಇದ್ದಾರೆ. ರಸ್ತೆ ಬದಿಯಲ್ಲಿ ಇರುವ ಪಾನಿಪುರಿ ಶಾಪ್ಗಳ ಮುಂದೆ ಪ್ರತಿದಿನ ಜನಜಂಗುಳಿ ಇದ್ದೇ ಇರುತ್ತದೆ. ಪುಟ್ಟಪುಟ್ಟ ರೌಂಡ್ ಶೇಪ್ನ ಪುರಿಯೊಳಗೆ ಹಸಿರು ಬಟಾಣಿ, ಆಲೂಗಡ್ಡೆ ಸ್ಮ್ಯಾಶ್ ಮಾಡಿದ ಮಸಾಲಾವನ್ನು ಹಾಕಿಕೊಂಡು, ಸ್ಪೈಸಿಯಾದ ಪಾನಿಯಲ್ಲಿ ಹಾಕಿಕೊಂಡು ತಿನ್ನುತ್ತಿದ್ದರೆ, ಹೊಟ್ಟೆ ಅನಾಯಾಸವಾಗಿ ಅದನ್ನು ಸ್ವೀಕರಿಸುತ್ತಲೇ ಇರುತ್ತದೆ. ಪಾನಿಪುರಿಯನ್ನು ದೇಶದ ವಿವಿಧ ಪ್ರದೇಶಗಳಲ್ಲಿ, ಬೇರೆಬೇರೆ ಹೆಸರುಗಳಿಂದ ಕರೆಯುತ್ತಾರೆ. ಪುಚ್ಕಾ, ಗೋಲ್ಗಪ್ಪಾ, ಗಪ್ಚುಪ್ ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಆದರೆ ನೀವೆಂದಾದರೂ ‘ಜ್ವಾಲಾಮುಖಿ ಪಾನಿಪುರಿ (Volcano Pani Puri)’ ಬಗ್ಗೆ ಕೇಳಿದ್ದೀರಾ? ನೋಡಿದ್ದೀರಾ?
ಸೂರತ್ನಲ್ಲಿ ವ್ಯಾಪಾರಿಯೊಬ್ಬರು ಜ್ವಾಲಾಮುಖಿ ಪಾನಿಪುರಿ ಮಾರಾಟ ಮಾಡಿ ಸಖತ್ ಫೇಮಸ್ ಆಗಿದ್ದಾರೆ. ಫುಡ್ ಬ್ಲಾಗರ್ ಒಬ್ಬರು ಈ ವ್ಯಾಪಾರಿ ಪಾನಿಪುರಿ ಮಾರಾಟ ಮಾಡುವ ವಿಡಿಯೊವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಜ್ವಾಲಾಮುಖಿ ಏಳುವ ಪರ್ವತದಂತೆ ಪಾನಿಪುರಿ ಪಲ್ಯವನ್ನು ಇಟ್ಟುಕೊಂಡಿರುವ ಅವರು ವೇಗವಾಗಿ ಗ್ರಾಹಕರಿಗೆ ಪಾನಿಪುರಿ ಕೊಡುವುದನ್ನು ನೋಡಬಹುದು. ಗರಿಗರಿ ಪುರಿಯನ್ನು, ಜತೆಗೆ ಆಲೂಗಡ್ಡೆ, ಕಡಲೆಯ ಪಲ್ಯವನ್ನು ಹದವಾಗಿ ಹಾಕಿ, ಜತೆಗೊಂದಷ್ಟು ಪಾನಿಯನ್ನು ಹೊಯ್ದು ಕೊಡುವುದನ್ನು ನೋಡಿದರೆ, ಬಾಯಲ್ಲಿ ನೀರೂರುತ್ತದೆ. ನೀವೂ ಒಮ್ಮೆ ವಿಡಿಯೊ ನೋಡಬಹುದು.
ಈ ವಿಡಿಯೊ ಕ್ಲಿಪ್ ಮೂರು ಲಕ್ಷ ವೀವ್ಸ್ ಕಂಡಿದೆ. ಆದರೆ ಅನೇಕರು ಇದು ಸೂರತ್ನ ವಿಡಿಯೊ ಅಲ್ಲ ಎನ್ನುತ್ತಿದ್ದಾರೆ. ಆದರೆ ಎಲ್ಲಿಯದಾದರೂ ಆಗಿರಲಿ. ವಿಡಿಯೊ ಸಖತ್ ಆಗಿದೆ ಎಂದು ಹಲವರು ಹೇಳಿದ್ದಾರೆ. ಆಲೂಗಡ್ಡೆ ಮಸಾಲಾ ನೋಡಿದರೇ ಖುಷಿಯಾಗುತ್ತದೆ ಎಂದು ಒಬ್ಬರು, ಇನ್ನೂ ಕೆಲವರು ಆ ಆಲೂಗಡ್ಡೆ ಮಸಾಲಾದ ಜತೆಗೆ ಮಾವಿನ ಹಣ್ಣಿನ ಫಲ್ಪ್ ಇದೆ ಎಂದು ಗಮನಿಸಿ ಹೇಳಿದ್ದಾರೆ. ಒಟ್ನಲ್ಲಿ ಈ ಜ್ವಾಲಾಮುಖಿ ಪಾನಿಪುರಿ ವಿಡಿಯೊ ನೆಟ್ಟಿಗರ ಗಮನ ಸೆಳೆಯುತ್ತಿರುವುದಂತೂ ಸತ್ಯ.