ಲಖನೌ: ʼಎಂತೆಂಥಾ ಶಿಕ್ಷಕಿಯರು ಇರುತ್ತಾರಪ್ಪಾ? ಆ ಮಕ್ಕಳು ನಿಂತ ನೀರಿನಲ್ಲಿ ಈಕೆಗೆ ನಡೆದು ಬರಲು ಆಗುವುದಿಲ್ಲವಾ?ʼ-ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದನ್ನು ನೋಡಿ ಅನೇಕರು ಈ ಪ್ರಶ್ನೆ ಕೇಳುತ್ತಿದ್ದಾರೆ. ಅಷ್ಟೇ ಅಲ್ಲ, ವಿಡಿಯೋದಲ್ಲಿ ಕಾಣುವ ಶಿಕ್ಷಕಿಗೆ ಬಾಯಿಗೆ ಬಂದಂತೆ ಬಯ್ಯುತ್ತಿದ್ದಾರೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಬಾಲ್ಡಿಯೋ ಎಂಬ ಪ್ರದೇಶದಲ್ಲಿರುವ ಪ್ರಾಥಮಿಕ ಶಾಲೆ ಅದು. ಮಳೆಯ ಕಾರಣಕ್ಕೆ ಶಾಲೆಯ ಆವರಣದಲ್ಲೇ ನೀರು ನಿಂತಿದೆ. ಅದು ಸ್ವಲ್ಪ ಕೊಳಕು ನೀರು. ಮೊಣಕಾಲು ಮಟ್ಟದ ನೀರಿದೆ ಅಲ್ಲ. ಆ ಶಾಲೆಗೆ ಚೂಡಿದಾರ, ಕಾಲಿಗೆ ಶೂ ಹಾಕಿಕೊಂಡು, ಮುಖಕ್ಕೆಲ್ಲ ವಸ್ತ್ರ ಕಟ್ಟಿಕೊಂಡ ಶಿಕ್ಷಕಿ ಬರುತ್ತಾರೆ. ಅವರು ಶಾಲೆ ಆವರಣದ ಬಾಗಿಲಿಗೆ ಬಂದು ನಿಂತು ನೀರಿನಲ್ಲಿ ಇಳಿಯಲು ಒಪ್ಪಲಿಲ್ಲ. ಅದಕ್ಕಾಗಿ ಶಾಲೆಯ ಪುಟ್ಟ ಮಕ್ಕಳು ಒಳಗಿನಿಂದ ಒಂದಷ್ಟು ಕುರ್ಚಿಗಳನ್ನು ತಂದು, ಶಿಕ್ಷಕಿ ನಿಂತಿರುವ ಶಾಲೆಯ ಅಂಗಳದ ತುದಿಗೂ, ಶಾಲೆಯ ಬಾಗಿಲಿಗೂ ನಡುವೆ ಸಾಲಾಗಿ ಇಡುತ್ತಾರೆ. ಆ ಮಕ್ಕಳೆಲ್ಲ ನೀರಿನಲ್ಲಿಯೇ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಶಿಕ್ಷಕಿ ಒಂದಾದ ಮೇಲೆ ಒಂದು ಕುರ್ಚಿಯ ಮೇಲೆ ಕಾಲಿಟ್ಟು ಬರುತ್ತಿದ್ದರೆ, ಆ ಚೇರ್‌ಗಳು ಬೀಳದಂತೆ ಮಕ್ಕಳು ಅದನ್ನು ಗಟ್ಟಿಯಾಗಿ ಹಿಡಿದು ನಿಂತಿದ್ದಾರೆ. ಶಿಕ್ಷಕಿ ತಾನು ಬೀಳಬಾರದು ಎಂದು ಹುಡುಗನೊಬ್ಬನ ಭುಜ ಹಿಡಿದುಕೊಳ್ಳುವುದೂ ವಿಡಿಯೋದಲ್ಲಿ ಕಾಣುತ್ತದೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ವೈರಲ್ ಆಗುತ್ತಿರುವ ಬೆನ್ನಲ್ಲೇ ಅನೇಕರು ಶಿಕ್ಷಕಿಯನ್ನು ಟೀಕಿಸಿದಾರೆ. ಅದಕ್ಕೆ ಶಾಲೆ ಕಡೆಯಿಂದ ಸ್ಪಷ್ಟನೆಯನ್ನೂ ನೀಡಲಾಗಿದ್ದು, ಅವರು ಸಹಾಯಕ ಶಿಕ್ಷಕಿ. ಚರ್ಮದ ಅಲರ್ಜಿ ಸಮಸ್ಯೆ ಇರುವುದರಿಂದ ಅವರು ಆ ಕೊಳಕು ನೀರಿನಲ್ಲಿ ಕಾಲಿಡಲಿಲ್ಲ ಎಂದು ಹೇಳಲಾಗಿದೆ. ಹಾಗಿದ್ದಾಗ್ಯೂ ವಿಡಿಯೋ ವೈರಲ್ ಆಗ್ತಿದ್ದ ಹಾಗೆ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: Viral Video: ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಜುಟ್ಟು ಹಿಡಿದು ಎಳೆದಾಡಿದ ದೆಹಲಿ ಪೊಲೀಸ್