ಪ್ರೀತಿಸಿದವರನ್ನು ಮದುವೆಯಾಗಲು ಎಂತೆಂಥಾ ರಿಸ್ಕ್ ತೆಗೆದುಕೊಳ್ಳುವವರನ್ನು ನಾವು ನೋಡಿದ್ದೇವೆ. ಎಂಥದ್ದೇ ಸವಾಲು ಎದುರಾದರೂ, ಪಾಲಕರೇ ತಿರುಗಿಬಿದ್ದರೂ, ಜೀವ ತೆಗೆಯುತ್ತೇವೆ ಎಂದು ಬೆದರಿಕೆ ಹಾಕಿದರೂ ಅದಕ್ಕೆಲ್ಲ ಹೆದರದೆ ತಮ್ಮ ಪ್ರೀತಿಯನ್ನು ಗೆಲ್ಲಿಸಿಕೊಂಡವರು ಅದೆಷ್ಟೋ ಜನರಿದ್ದಾರೆ. ಹೀಗೆಲ್ಲ ಇರುವಾಗ ಇಲ್ಲೊಬ್ಬರು ಶಿಕ್ಷಕಿ ಇನ್ನೂ ಒಂದು ಹೆಜ್ಜೆ ಮುಂದಡಿ ಇಟ್ಟು, ತಾನು ಪ್ರೀತಿಸಿದ ತನ್ನ ವಿದ್ಯಾರ್ಥಿನಿಯನ್ನು ಮದುವೆಯಾಗಲು ಲಿಂಗವನ್ನೇ ಬದಲಿಸಿಕೊಂಡಿದ್ದಾರೆ…!
ರಾಜಸ್ಥಾನದ ಭರತ್ಪುರ್ ಎಂಬಲ್ಲಿನ ನಿವಾಸಿ ಮೀರಾ ಕುಂತಾಲ್ ಅಲ್ಲಿನ ನಾಗ್ಲಾ ತುಲಾ ಎಂಬ ಗ್ರಾಮದಲ್ಲಿನ ಸರ್ಕಾರಿ ಸೆಕೆಂಡರಿ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿದ್ದರು. ಅದೇ ಶಾಲೆಯಲ್ಲಿ ಓದುತ್ತಿದ್ದ ಕಲ್ಪನಾ ಫೌಜ್ದಾರ್ ಎಂಬ ವಿದ್ಯಾರ್ಥಿನಿಯ ಮೇಲೆ ಅವರಿಗೆ ಪ್ರೀತಿಯಾಯಿತು. ಸಲಿಂಗಿ ಮದುವೆ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಮೀರಾ ಕುಂತಾಲ್ ಪುರುಷನಾಗಿ ಬದಲಾಗಿದ್ದಾರೆ. ಆರವ್ ಕುಂತಾಲ್ ಎಂದು ಹೆಸರನ್ನೂ ಬದಲಿಸಿಕೊಂಡಿದ್ದಾರೆ ಮತ್ತು ಈಗ ಆರವ್ ಕುಂತಾಲ್ ಮತ್ತು ಕಲ್ಪನಾ ಫೌಜ್ದಾರ್ ವಿವಾಹವೂ ನೆರವೇರಿದೆ.
ಕಲ್ಪನಾ ರಾಜ್ಯಮಟ್ಟದ ಕಬಡ್ಡಿ ಆಟಗಾರ್ತಿಯಾಗಿದ್ದಳು. ದೈಹಿಕ ಶಿಕ್ಷಣ ಶಿಕ್ಷಕಿಯಾಗಿದ್ದ ಮೀರಾ ಮೇಲೆ ಕಲ್ಪನಾಗೂ ಪ್ರೀತಿ ಬೆಳೆದಿತ್ತು. ಇವರಿಬ್ಬರ ಪ್ರೀತಿ ವಿಚಾರ ಮನೆಯವರಿಗೂ ಗೊತ್ತಿತ್ತು. ಆದರೆ ಸಲಿಂಗ ವಿವಾಹವನ್ನು ಸಮಾಜ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಮನೆಯವರೂ ಒಪ್ಪಿರಲಿಲ್ಲ. ಆದರೆ ಮೀರಾ ಮೊದಲಿನಿಂದಲೂ ಸ್ವಲ್ಪ ಹುಡುಗರಂತೆಯೇ ಇದ್ದರು. ಹೀಗಾಗಿ ಲಿಂಗ ಬದಲಾವಣೆ ಮಾಡಿಕೊಂಡು, ಶಾಶ್ವತವಾಗಿ ಪುರುಷನೇ ಆಗಲು ನಿರ್ಧರಿಸಿದರು. ಅದಕ್ಕೆ ಆಕೆಯ ಮನೆಯವರೂ ಒಪ್ಪಿದ್ದರು. ಅದರಂತೆ ಲಿಂಗ ಬದಲಾವಣೆಗೆ ಅಗತ್ಯವಿರುವ ಮೊದಲ ಸರ್ಜರಿಯನ್ನು 2019ರಲ್ಲಿ ಅವರು ಮಾಡಿಸಿಕೊಂಡರು. ಅಲ್ಲಿಂದ 2021ರವರೆಗೆ ವಿವಿಧ ಹಂತದಲ್ಲಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು, ಪುರುಷನಾಗಿ ಬದಲಾದರು.
ಇನ್ನು ಕಲ್ಪನಾ ಕೂಡ ಆರವ್ (ಮೀರಾ)ರನ್ನು ಪ್ರೀತಿ ಮಾಡುತ್ತಿದ್ದಳು. ‘ಮೀರಾ ಲಿಂಗ ಬದಲಾವಣೆ ಮಾಡಿಕೊಳ್ಳದೆ ಇದ್ದರೂ, ನಾನು ಅವರನ್ನೇ ಮದುವೆಯಾಗುತ್ತಿದ್ದೆ’ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮೀರಾ ಲಿಂಗ ಪರಿವರ್ತನೆ ಸರ್ಜರಿಯ ಹೊತ್ತಲ್ಲಿ, ಅವರನ್ನು ಆರೈಕೆ ಮಾಡಿದ್ದೂ ಕಲ್ಪನಾನೇ. ಸದ್ಯ ಇವರ ಜೋಡಿಯೀಗ ಸಖತ್ ಸುದ್ದಿಯಲ್ಲಿದೆ.
ಇದನ್ನೂ ಓದಿ: Bigg Boss Kannada | ʼಬದಲಾಗಲು ಸಾಧ್ಯವೇ ಇಲ್ಲ ರೂಪಿ’: ಸಾನ್ಯ ಅಯ್ಯರ್ ಭಾವುಕ ಪೋಸ್ಟ್ ವೈರಲ್!