Site icon Vistara News

‘ನಿನ್ನ ಬಿಟ್ಟಿರಲಾರೆನು, ಕಾಲ್​ ಮಾಡು’; 13 ವರ್ಷದ ವಿದ್ಯಾರ್ಥಿನಿಗೆ ಲವ್​ ಲೆಟರ್​ ಬರೆದ 47ರ ಶಿಕ್ಷಕ!

Teacher Writes Love Letter To Student in Uttar Pradesh

ಶಿಕ್ಷಕನೊಬ್ಬ ತನ್ನ ವಿದ್ಯಾರ್ಥಿನಿಗೆ ಬರೆದಿರುವ ಪ್ರೇಮ ಪತ್ರ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಶಿಕ್ಷಕ-ವಿದ್ಯಾರ್ಥಿನಿಯ ಪ್ರೇಮಕಥೆಗಳು ಹೊಸದಲ್ಲ. ಯುವ ವಯಸ್ಸಿನ ಕಾಲೇಜು ಶಿಕ್ಷಕರು, ತಮ್ಮ ವಿದ್ಯಾರ್ಥಿನಿಯರನ್ನು ಪ್ರೀತಿಸುವುದು, ಮದುವೆಯಾಗುವುದು ಸಾಮಾನ್ಯ. ಇಂಥ ಸಾಕಷ್ಟು ಕೇಸ್​​ಗಳನ್ನು ನಾವು ನೋಡಿದ್ದೇವೆ. ಆದರೆ ಈಗ ನಾವಿಲ್ಲಿ ಹೇಳ್ತಿರೋದು ವಿಭಿನ್ನ ಸ್ಟೋರಿ. ಇಲ್ಲಿ ಪ್ರೇಮ ಪತ್ರ ಬರೆದ ಶಿಕ್ಷಕನಿಗೆ 47 ವರ್ಷ ವಯಸ್ಸಾದರೆ, ಅವನು ಬರೆದಿದ್ದು ತನ್ನ 13 ವರ್ಷ ವಯಸ್ಸಿನ ವಿದ್ಯಾರ್ಥಿನಿಗೆ.

ಉತ್ತರ ಪ್ರದೇಶದ ಕನೌಜ್​ ಜಿಲ್ಲೆಯ ಸರ್ಕಾರಿ ಶಾಲೆ ಶಿಕ್ಷಕ 8ನೇ ತರಗತಿ ವಿದ್ಯಾರ್ಥಿನಿಗೆ ಲವ್ ಲೆಟರ್ ಬರೆದಿದ್ದಾನೆ. ಆ ಪತ್ರ ಹಿಡಿದು ಕೊಂಡು ಅಪ್ಪ-ಅಮ್ಮನ ಬಳಿ ಹೋದ ಹುಡುಗಿ, ಅದರಲ್ಲೇನಿದೆ ಎಂದು ಓದಿ ಹೇಳಿದ್ದಾಳೆ. ಆಕೆಯ ಪಾಲಕರೂ ಪತ್ರವನ್ನು ಚೆಕ್ ಮಾಡಿದ್ದಾರೆ. ಅಷ್ಟೇ ಅಲ್ಲ, ಸೀದಾ ಪೊಲೀಸರ ಬಳಿ ಹೋಗಿ ದೂರು ಕೊಟ್ಟು, ಪತ್ರವನ್ನೂ ಕೂಡ ಅವರಿಗೆ ನೀಡಿದ್ದಾರೆ. ಶಿಕ್ಷಕನ ವಿರುದ್ಧ ಪೊಲೀಸರು ದೌರ್ಜನ್ಯದ ಕೇಸ್​ ದಾಖಲಿಸಿದ್ದಾರೆ.

ಶಿಕ್ಷಕನ ಹೆಸರು ಹರಿಓಂ ಸಿಂಗ್​ ಎಂದಾಗಿದ್ದು, ತಾನು ವಿದ್ಯಾರ್ಥಿನಿಯನ್ನು ಮದುವೆಯಾಗುವ ಬಯಕೆಯನ್ನು ಪತ್ರದಲ್ಲಿ ಪ್ರಕಟಪಡಿಸಿದ್ದಾನೆ. ಪತ್ರದ ಪ್ರಾರಂಭದಲ್ಲಿ ಆ 13 ವರ್ಷದ ಬಾಲಕಿಯ ಹೆಸರನ್ನು ಉಲ್ಲೇಖಿಸಿದ ಶಿಕ್ಷಕ ‘ಈಗ ವಿಪರೀತ ಚಳಿಯ ನಿಮಿತ್ತ ಶಾಲೆಗೆ ರಜೆ ಕೊಟ್ಟಿದ್ದರಿಂದ ನಾನು ನಿನ್ನನ್ನು ತುಂಬ ಮಿಸ್​ ಮಾಡಿಕೊಳ್ತಿದ್ದೇನೆ. ನಿನ್ನನ್ನು ಬಿಟ್ಟಿರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಿನಗೆ ಯಾವಾಗೆಲ್ಲ ಸಾಧ್ಯವಾಗುತ್ತೋ, ಆಗೆಲ್ಲ ನನಗೆ ಕರೆ ಮಾಡು, ಮಾತನಾಡೋಣ’ ಎಂದೂ ಹೇಳಿದ್ದಾನೆ. ‘ರಜೆಯಿದ್ದರೂ ಒಮ್ಮೆ ಬಂದು ನನ್ನನ್ನು ಭೇಟಿಯಾಗು. ನಿನಗೆ ನಿಜಕ್ಕೂ ನನ್ನ ಮೇಲೆ ಪ್ರೀತಿಯಿದ್ದರೆ ನೀನು ಖಂಡಿತವಾಗಿಯೂ ಬರುತ್ತೀಯಾ. ನಾನಂತೂ ಸದಾ ನಿನ್ನನ್ನು ಪ್ರೀತಿಸುತ್ತೇನೆ’ ಎಂದು ಪತ್ರದಲ್ಲಿ ಬರೆದಿರುವ ಶಿಕ್ಷಕ ‘ಈ ಪತ್ರವನ್ನು ಯಾರಿಗೂ ತೋರಿಸಬೇಡ. ಓದಿ ಮುಗಿಸಿ, ಹರಿದುಬಿಡು’ ಎಂದು ಬರೆಯುವುದನ್ನು ಮರೆತಿಲ್ಲ!

ಬಾಲಕಿಯ ಪಾಲಕರು ಸಾದರ್​ ಕೋಟ್ವಾಲಿ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ‘ನಾವು ಪತ್ರ ಹಿಡಿದು ಶಿಕ್ಷಕ ಇದ್ದಲ್ಲಿಗೆ ಹೋದೆವು. ಕ್ಷಮೆ ಕೇಳುವಂತೆ ಹೇಳಿದಾಗ ಆತ ಉದ್ಧಟತನದಿಂದ ವರ್ತಿಸಿದ. ನಾನು ಖಂಡಿತ ಕ್ಷಮೆ ಕೇಳುವುದಿಲ್ಲ. ನೀವು ಹೀಗೆ ಬಂದು ತೊಂದರೆ ಕೊಟ್ಟರೆ, ಆ ಹುಡುಗಿಯನ್ನೇ ನಾಪತ್ತೆ ಮಾಡುತ್ತೇನೆ’ ಎಂದು ಬೆದರಿಕೆಯನ್ನೂ ಹಾಕಿದ ಎಂದು ಬಾಲಕಿಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ. ಇನ್ನು ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪ ಸಾಬೀತಾದರೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Sexual Harrassment | ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕ ಅಮಾನತು

Exit mobile version