ರಬ್ಬರ್ ಹಾವಿನ ಪ್ರ್ಯಾಂಕ್ ಇದು ಅಂದುಕೊಳ್ಳಬೇಡಿ. ರಬ್ಬರ್ ಹಾವನ್ನು ನಿಜ ಹಾವೆಂದು ಭ್ರಮಿಸಿದಂತ ಕಥೆಯಲ್ಲ ಇದು. ಇಲ್ಲಿ ನಿಜಕ್ಕು ಪುಟಾಣಿ ಹುಡುಗಿಗೆ ಹಾವೊಂದು ಕಚ್ಚಿದೆ. ಹುಡುಗಿ ಕಚ್ಚಿದ ಹಾವನ್ನು ಕೊಂದೇ ಬಿಟ್ಟಿದ್ದಾಳೆ. ಅಂಥ ಸಾಹಸಿ ಹುಡುಗಿಗೆ ಕೇವಲ ಎರಡೇ ವಯಸ್ಸು!
ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಟರ್ಕಿಯ ಕಂತಾರ್ ಎಂಬ ಹಳ್ಳಿಯಲ್ಲಿ ತನ್ನ ಮನೆಯ ಹೂದೋಟದಲ್ಲಿ ಒಬ್ಬಳೇ ಕುಳಿತು ಆಟವಾಡುತ್ತಿದ್ದ ಎರಡು ವರ್ಷಗಳ ಲಿಟಲ್ ಎಸ್ ಇ (ಪೂರ್ಣ ಹೆಸರನ್ನು ಹೆತ್ತವರು ಬಹಿರಂಗಗೊಳಿಸಿಲ್ಲ) ಎಂಬ ಪುಟಾಣಿ ಹುಡುಗಿಗೆ ಅಲ್ಲೇ ಹರಿದು ಬಂದ ಹಾವೊಂದು ಕಚ್ಚಿದೆಯಂತೆ. ಆಟವಾಡುತ್ತಿದ್ದ ಹುಡುಗಿಯೆಡೆಯಿಂದ ಜೋರಾಗಿ ಕಿರುಚಿದ ಶಬ್ದ ಕೇಳಿ ಓಡೋಡಿ ಸ್ಥಳಕ್ಕೆ ಬಂದ ಪಕ್ಕದ ಮನೆಯವರಿಗೆ ಕಂಡಿದ್ದು ಬೇರೆಯದೇ ದೃಶ್ಯ. ಪುಟ್ಟ ಹುಡುಗಿಯ ಬಾಯಲ್ಲಿ ಹಾವನ್ನು ಕಂಡು ವಿಷಯ ನಡೆದದ್ದೇನೆಂದು ಅರಿಯದೆ ಕಂಗಾಲಾಗಿದ್ದಾರೆ.
ಒಡನೆಯೇ, ಹುಡುಗಿಯ ಬಾಯಿಂದ ಹಾವನ್ನು ಎಸೆದು, ಹೆತ್ತವರ ಸಹಾಯದಿಂದ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಗೆ ಸದ್ಯ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ ಎಂದು ಹೇಳಿದ್ದಾರೆ. ಆದರೂ ಆಕೆಯ ಆರೋಗ್ಯ ಸ್ಥಿತಿಯನ್ನು ೨೪ ಗಂಟೆಗಳ ಕಾಲ ಗಮನಿಸಲಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಇದನ್ನೂ ಓದಿ: Healthy food | ಒಳ್ಳೆಯ ಬಾದಾಮಿಯಿಂದ ಕೆಟ್ಟ ಪರಿಣಾಮವೂ ಇದೆ ಅಂದರೆ ನಂಬ್ತೀರಾ?
ಏನೋ ಕಿರುಚಿದ ಶಬ್ದ ಕೇಳಿತೆಂದು ಪಕ್ಕದ ಮನೆಯವರು ಓಡಿ ಬಂದಿದ್ದಾರೆ. ಆಗ, ನಮ್ಮ ಮಗಳ ಬಾಯಲ್ಲಿ ಹಾವನ್ನು ಅವರು ನೋಡಿದರಂತೆ. ಬಹುಶಃ ಆಕೆ ಹಾವಿನೊಂದಿಗೆ ತಿಳಿಯದೆ ಆಟವಾಡುತ್ತಿದ್ದಿರಬಹುದು. ಅದನ್ನು ಹಿಡಿದ ಭಂಗಿಯಿಂದ ಅದು ಆಕೆಗೆ ಕಚ್ಚಿದೆ. ಕಚ್ಚಿದ ಹಾವಿನ ಮೇಲಿನ ಕೋಪದಿಂದ ಆಕೆ ಕಿರುಚಿದ್ದಲ್ಲದೆ, ತಾನೂ ಅದನ್ನು ಹಿಡಿದು ಕಚ್ಚಿದ್ದಾಳೆ. ಆಕೆ ಕಚ್ಚಿದ ರಭಸಕ್ಕೆ ಹಾವು ಸತ್ತೇ ಹೋಗಿದೆ ಎಂದು ಬಾಲಕಿಯ ತಂದೆ ಮೆಹ್‌ಮತ್ ಎರ್ಕನ್ ಹೇಳಿದ್ದಾರೆ.
ಇನ್ನೊಂದು ಇಂಥದ್ದೇ ಪ್ರಕರಣದಲ್ಲಿ ಎಂಟರ ಹರೆಯದ ಬಾಲಕನೊಬ್ಬನನ್ನು ವಿಷಪೂರಿತ ಹಾವೊಂದು ಕಚ್ಚಿದ್ದರ ಪರಿಣಾಮ ಆತನ ಕೈ ನಿಜವಾದ ಅಳತೆಗಿಂತ ಐದು ಪಟ್ಟು ದಪ್ಪವಾಗಿದ್ದು, ಆತ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ತ್ರಿವರ್ಣ ಧ್ವಜಕ್ಕೆ ಮಾರ್ಜಾಲದ ಮುತ್ತು ; ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್