ಕಳ್ಳತನ ಕೆಟ್ಟದ್ದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅನೇಕರು ಬದುಕಿಗಾಗಿ ಕಳ್ಳತನವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕ್ಷಣಮಾತ್ರದಲ್ಲಿ ದುಡ್ಡು, ಬೆಲೆಬಾಳುವ ವಸ್ತುಗಳನ್ನು ಎಗರಿಸಿ ಓಡುತ್ತಾರೆ. ಹಾಗೇ ಒಂದಲ್ಲ ಒಂದು ದಿನ ಯಾರ ಕೈಯಲ್ಲಾದರೂ ಸಿಕ್ಕಿಬೀಳುತ್ತಾರೆ.
ಹಾಗೆ ಇಂಗ್ಲೆಂಡ್ ನಲ್ಲಿ ಕಳ್ಳನೊಬ್ಬ ವಿಚಿತ್ರ ಮಾದರಿಯಲ್ಲಿ ಸಿಕ್ಕಿಬಿದ್ದಿದ್ದಾನೆ. ಅವನು ಸಿಕ್ಕಿಬಿದ್ದ ರೀತಿ ನಗುಹುಟ್ಟಿಸುತ್ತದೆ. ಆದರೆ ಅಂಗಡಿ ಮಾಲೀಕನ ಒಳ್ಳೇತನ ಅವನು ಜೈಲುಪಾಲಾಗುವುದನ್ನು ತಪ್ಪಿಸಿದೆ. ಇಂಗ್ಲೆಂಡ್ ನ ಪಶ್ಚಿಮ ಯೋರ್ಕ್ ಶೈರ್ ನಲ್ಲಿರುವ ಡೀವ್ಸ್ ಬರಿ ಎಂಬಲ್ಲಿರುವ ಮೊಬೈಲ್ ಫೋನ್ ಅಂಗಡಿಯೊಂದಕ್ಕೆ ಯುವಕನೊಬ್ಬ ಬಂದಿದ್ದ. ಅವನು ಸ್ವೆಟರ್ ಹಾಕಿಕೊಂಡು, ತಲೆಗೆ ಕ್ಯಾಪ್ ನಿಂದ ಮುಚ್ಚಿಕೊಂಡಿದ್ದ. ಸಾಮಾನ್ಯ ಗ್ರಾಹಕನಂತೆ ಬಂದು ಅಂಗಡಿ ಮಾಲೀಕನ ಜತೆ ವ್ಯವಹರಿಸುತ್ತಿದ್ದ. ಒಂದೊಂದೇ ಫೋನ್ ಕೈಯಲ್ಲಿ ಹಿಡಿದು ಚೆಕ್ ಮಾಡುತ್ತಿದ್ದ.
ಹಾಗೇ, ಸುಮಾರು 1600 ಪೌಂಡ್ಸ್ (ಒಂದೂವರೆ ಲಕ್ಷ ರೂಪಾಯಿಗೂ ಹೆಚ್ಚು) ಬೆಲೆಯ ಮೊಬೈಲ್ವೊಂದನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಆತ, ಒಮ್ಮೆಲೇ ತಿರುಗಿ ಓಡಿದ. ಅಂದರೆ ಅದನ್ನು ಕದ್ದೊಯ್ಯುವ ಪ್ಲ್ಯಾನ್ ಅವನದಾಗಿತ್ತು. ಆದರೆ ಅದೆಷ್ಟು ವೇಗವಾಗಿ ಅವನು ಓಡಿ ಹೊರಟನೋ, ಅಷ್ಟೇ ಥಟ್ಟನೆ ಬಾಗಿಲ ಬಳಿ ನಿಂತ. ಯಾಕೆಂದರೆ ಬಾಗಿಲು ಲಾಕ್ ಆಗಿತ್ತು. ಆ ಬಾಗಿಲು ತೆರೆದುಕೊಳ್ಳಲಿಲ್ಲ. ಕಳ್ಳ ಆ ಗಾಜಿನ ಬಾಗಿಲನ್ನು ಎಳೆಯಲು ಯತ್ನಿಸಿ ಸೋತ. ಇತ್ತ ಅಂಗಡಿ ಮಾಲೀಕ ಕೂಲ್ ಆಗಿ ನಿಂತು ಎಲ್ಲವನ್ನೂ ನೋಡುತ್ತಿದ್ದ. ಇನ್ನೇನೂ ಮಾಡಲು ತೋಚದ ಕಳ್ಳ ವಾಪಸ್ ಬಂದು, ಮಾಲೀಕನಿಗೆ ಫೋನ್ ವಾಪಸ್ ಕೊಟ್ಟು, ತನ್ನನ್ನು ಬಿಟ್ಟುಬಿಡುವಂತೆ ಮನವಿ ಮಾಡಿಕೊಂಡು, ಅಲ್ಲಿಂದ ಪಾರಾಗಿದ್ದಾನೆ. ಅಂಗಡಿಯಲ್ಲಿ ಹಾಕಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯಗಳು ಸೆರೆಯಾಗಿವೆ.
ಅಂದಹಾಗೇ, ಈ ಅಂಗಡಿ ಮಾಲೀಕನ ಹೆಸರು ಅಫ್ಜಲ್ ಆದಮ್ ಎಂದಾಗಿದ್ದು, 2020ರಲ್ಲಿ ಅಂಗಡಿ ಬಾಗಿಲಿಗೆ ಲಾಕಿಂಗ್ ಸಿಸ್ಟಂ ಅಳವಡಿಸಿದ್ದಾಗಿ ತಿಳಿಸಿದ್ದಾರೆ. ಹಾಗೇ, ಅಂದು 250 ಪೌಂಡ್ಸ್ ಖರ್ಚು ಮಾಡಿ, ಬಾಗಿಲಿಗೆ ಲಾಕ್ ವ್ಯವಸ್ಥೆ ಮಾಡಿಸಿದ್ದೆ. ಅದೀಗ 1600 ಪೌಂಡ್ಸ್ ಬೆಲೆಯ ಮೊಬೈಲ್ ಉಳಿಸಿಕೊಟ್ಟಿತು ಎಂದೂ ಹೇಳಿದ್ದಾರೆ. ಇನ್ನು ವಿಡಿಯೊ ನೋಡಿದ ನೆಟ್ಟಿಗರು ಕಳ್ಳನ ನೋಡಿದರೆ ನಗು ಬರುತ್ತದೆ ಎಂದಿದ್ದಾರೆ. ಅದೆಷ್ಟು ಉತ್ಸಾಹದಲ್ಲಿ ಹೊರಟಿದ್ದ ಪಾಪ ! ಎಂದು ವ್ಯಂಗ್ಯವಾಗಿಯೂ ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Viral Video | ಚಲಿಸುವ ಜೀಪ್ ಮೇಲೆ ʼಫೂಲ್ ಔರ್ ಕಾಂಟೆʼ ರೀತಿ ರೌಡಿ ಸ್ಟಂಟ್, ಪೊಲೀಸರಿಗೇ ಚಾಲೆಂಜ್, ಇಲ್ಲಿದೆ ವಿಡಿಯೊ