ನೀವು ವಿಶ್ವದ ಅತ್ಯಂತ ದೊಡ್ಡ ದೋಸೆಯ ಬಗ್ಗೆ ಕೇಳಿರಬಹುದು, ನೋಡಿರಬಹುದು ಅಥವಾ ತಿಂದೂ ಇರಬಹುದು. ಕನಿಷ್ಟ ಪಕ್ಷ, ದೊಡ್ಡದಾಗಿರುವ ಫ್ಯಾಮಿಲಿ ದೋಸೆಯ ಮುಂದೆ ಕುಂಭಕರ್ಣನ ಭಂಗಿಯಲ್ಲಿ ಕೂತು ಬಾಯಿ ದೊಡ್ಡದಾಗಿ ತೆರೆದು ಫೋಟೋ ಅಂತೂ ತೆಗೆಸಿಕೊಂಡಿರುತ್ತೀರಿ. ಈಗ ಅಂಥ ಮಂದಿಯ ಎದುರು ಇನ್ನೊಂದು ಅದೃಷ್ಟ ಬಂದಿದೆ. ಅದು ಅತ್ಯಂತ ದೊಡ್ಡ ಬರ್ಗರ್!
ಬರ್ಗರ್ ತಿಂದು ತಿಂದು ತೂಕ ಹೆಚ್ಚಾಯಿತು ಎಂದು ಗೋಳಾಡಿದರೆ ಇಲ್ಲೊಂದು ತೂಕದ ಬರ್ಗರ್ ನಿಮ್ಮ ಮುಂದಿದೆ. ಬಹಳ ಸಾರಿ ಒಂದು ಸಾಧಾರಣ ಗಾತ್ರದ ಬರ್ಗರ್ ನಮ್ಮ ಹಸಿವನ್ನು ತಣಿಸುವುದಿಲ್ಲವಾದರೆ, ನಾವು ಡಬಲ್ ಡೆಕ್ಕರ್ ಬರ್ಗರ್ ಆರ್ಡರ್ ಮಾಡಿಬಿಡುತ್ತೇವೆ. ಆದರೆ ಇದು ಮಾತ್ರ ಅಂತಿಂಥ ಬರ್ಗರ್ ಅಲ್ಲ. ಯಾಕೆಂದರೆ ಇದರ ತೂಕದ ಬಗ್ಗೆ ಕೇಳಿದರೆ ಇದು ಮನುಷ್ಯನೊಬ್ಬ ಕೂತು ತಿನ್ನಬಹುದಾದ ಬರ್ಗರ್ ಅಲ್ಲ ಎಂದು ಖಾತ್ರಿಯಾದೀತು. ಇದನ್ನು ತಿನ್ನಲು ಕಲಿಯುಗದ ಭೀಮನೋ, ಬಕಾಸುರನೋ, ಕುಂಭಕರ್ಣನೋ ಬರಬೇಕಾದೀತು!
ಪಂಜಾಬಿನ ಅಮೃತ್‌ಸರದ ಫುಡ್ ಬ್ಲಾಗರ್ ಒಬ್ಬರು ತನ್ನ ಪೇಜ್‌ನಲ್ಲಿ ಒಂದು ಅತ್ಯಂತ ದೊಡ್ಡ್ ಬರ್ಗರ್ ತಯಾರಿಸಿದ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇಂಡಿಯಾದ ಮೊದಲ ಬೃಹತ್ ಬರ್ಗರ್ ಎಂಬ ತಲೆಬರಹದಡಿ ಈ ಬರ್ಗರ್ ಸಾಮಾಜಿಕ ಜಾಲತಾಣದೆಲ್ಲೆಡೆ ಸುದ್ದಿ ಮಾಡುತ್ತಿದೆ. ಇದರ ತೂಕ ಬರೋಬ್ಬರಿ ೩೦ ಕಿಲೋಗಳಿಗಿಂತಲೂ ಹೆಚ್ಚು. ಇದು ಎಲ್ಲ ಬರ್ಗರ್‌ಗಳಿಗಿಂತ ಯಾವುದರಲ್ಲೂ ಭಿನ್ನವಾಗಿಲ್ಲ. ಇದರಲ್ಲಿ ಎಲ್ಲ ಬರ್ಗರ್‌ಗಳಲ್ಲಿರುವಂತೆ, ಬನ್ನು, ಚೀಸ್, ಕೋಸಿನೆಲೆ, ಎಲ್ಲವೂ ಇದೆ, ಆದರೆಎಲ್ಲವೂ ದೈತ್ಯ ಗಾತ್ರದ್ದು ಅಷ್ಟೇ.
ಈ ಬರ್ಗರ್ ತಯಾರಿಸಿದವರ ವಿವರಣೆಯಂತೆ, ಇದರ ತೂಕ ಖಂಡಿತವಾಗಿಯೂ ೪೦-೪೫ ಕೆಜಿ ಇರಬಹುದು. ಯಾಕೆಂದರೆ ಅಷ್ಟು ಕೆಜಿಯ ವಸ್ತಗಳನ್ನು ಒಟ್ಟು ಹಾಕಿ ಇದನ್ನು ಮಾಡಲಾಗಿದೆ. ಆದರೂ ಖಂಡಿತವಾಗಿಯೂ ೩೦ ಕೆಜಿಗಿಂತ ಹೆಚ್ಚು ತೂಕವಿರುವುದು ಖಚಿತ. ಕೇವಲ ಬನ್ ಮಾತ್ರ ೧೨ ಕೆಜಿ ತೂಕವಿದೆ. ತರಕಾರಿಗಳೇ ೧೬ ಕೆಜಿ ಇವೆ. ೫ ಕೆಜಿ ಸಾಸ್, ಒಂದು ಕೆಜಿ ಪನೀರ್, ೫-೬ ಕೆಜಿ ಟಿಕ್ಕಿಗಳನ್ನು ಇದಕ್ಕೆ ಬಳಸಲಾಗಿದೆ ಎನ್ನಲಾಗಿದೆ.
ಸುಮಾರು ೨ ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದು, ಬಹಳಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೊಂದು ಫ್ಯಾಮಿಲಿ ಪ್ಯಾಕ್ ಬರ್ಗರ್ ಎಂದು ಕೊಂಡಾಡಿದ್ದಾರೆ. ಇನ್ನೊಬ್ಬರು, ಆಹಾರದಲ್ಲಿ ಸೈಜ್ ಮುಖ್ಯವಾಗುವುದಿಲ್ಲ. ಎಷ್ಟು ರುಚಿಯಿದೆ ಎನ್ನುವುದಷ್ಟೇ ಮುಖ್ಯ ಎಂದಿದ್ದಾರೆ.
ತಿಂದು ತಿಂದು ಸಾಯಬೇಕೆನ್ನುವ ಕನಸಿದ್ದರೆ ಇದನ್ನು ತಿನ್ನಿ ಎಂದೊಬ್ಬರು ತಮಾಷೆಯ ಕಾಮೆಂಟೂ ಹಾಕಿದ್ದಾರೆ. ಇದನ್ನು ತಿನ್ನುವುದು ಹೇಗೆ ಎಂಬ ವಿಡಿಯೋವನ್ನೂ ಮಾಡಿದವರೇ ಹಾಕಿದ್ದರೆ ಒಳ್ಳೆಯದಿತ್ತು ಎಂದೂ ಒಬ್ಬರು ಹೇಳಿದ್ದಾರೆ. ಇದರ ಗಾತ್ರವನ್ನು ನೋಡಿ ಇಷ್ಟಪಡದ ಮಂದಿ ಮಾತ್ರ, ಏನಾದರೂ ತಿನ್ನಬಹುದಾದದ ರುಚಿಯ ಹಾಗೂ ಗಾತ್ರದ ಬರ್ಗರ್ ಮಾಡಿ. ಎಲ್ಲರಿಗೂ ತಿನ್ನಲು ಸಾಧ್ಯವಿರುವ ಹಾಗೂ ಶುಚಿರುಚಿಯ ಬರ್ಗರ್ ತಯಾರಿಸುವುದಷ್ಟೇ ಮುಖ್ಯ. ಇದು ಆಹಾರ ಹಾಳು ಮಾಡಿದಂತಾಯಿತು ಎಂದು ಪ್ರತಿಕ್ರಿಯೆ ನೀಡಿದ್ದಾರೆ.