Site icon Vistara News

Viral News : ಇವರ ಬಳಿ ಇದೆ 38 ವಿಮಾನ, 300 ಕಾರು, 52 ಬೋಟ್‌!

this man owns 38 airplanes, 300 cars, 52 boats

ಥೈಲ್ಯಾಂಡ್‌: ಒಬ್ಬರ ಬಳಿ ಎಷ್ಟು ಕಾರಿರಬಹುದು? ಸಾಮಾನ್ಯರಾದರೆ ಒಂದು ಅಥವಾ ಹೆಚ್ಚೆಂದರೆ ಎರಡು, ಮೂರು. ಇನ್ನು ಕೆಲವು ಸೆಲೆಬ್ರಿಟಿಗಳು ಹತ್ತಾರು ಕಾರುಗಳನ್ನು ಇಟ್ಟುಕೊಂಡಿರುತ್ತಾರೆ. ಅದರಲ್ಲೂ ಕಾರ್‌ ಕ್ರೇಜ್‌ ಹೆಚ್ಚಿರುವವರು ಮಾತ್ರ ಈ ರೀತಿ ಕಾರಿನ ಸಂಗ್ರಹ ಮಾಡಿಟ್ಟುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಬಳಿ ಒಂದಲ್ಲ, ಎರಡಲ್ಲ, ಬರೋಬ್ಬರಿ 300 ಕಾರುಗಳಿವೆ. ಕಾರುಗಳು ಮಾತ್ರವಲ್ಲದೆ 38 ವಿಮಾನಗಳು ಹಾಗೂ 52 ಬೋಟ್‌ಗಳು ಕೂಡ ಇವರ ಮಾಲೀಕತ್ವದಲ್ಲಿದೆ. ಇಷ್ಟೊಂದು ಆಸ್ತಿ ಹೊಂದಿರುವ ವ್ಯಕ್ತಿಯ ವಿಚಾರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ (Viral News) ಆಗುತ್ತಿದೆ.

ಹೌದು. ಇಷ್ಟೊಂದು ವಾಹನಗಳ ಸಂಗ್ರಹ ಒಬ್ಬ ವ್ಯಕ್ತಿ ಬಳಿ ನಿಜವಾಗಿಯೂ ಇದೆ. ಆತ ಬೇರೆ ಯಾರೂ ಅಲ್ಲ, ಥೈಲ್ಯಾಂಡ್‌ನ ರಾಜ ಮಹಾ ವಜಿರಾಲಾಂಗ್‌ಕಾರ್ನ್. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಇವರನ್ನು ಥೈಲ್ಯಾಂಡ್‌ನ ಕಿಂಗ್‌ ರಾಮ X ಎಂದೂ ಕರೆಯಲಾಗುತ್ತದೆ.

ಇದನ್ನೂ ಓದಿ: Viral Video: ‘ಬಾಯಿ ಮುಚ್ಚೆ ಸಾಕು’, ಮೆಟ್ರೊದಲ್ಲಿ ಇಬ್ಬರು ನಾರಿಯರ ಜಗಳ; ವಾಗ್ವಾದದಲ್ಲಿ ಗೆದ್ದಿದ್ದು ಯಾರು?
ಈ ರಾಜ ಥೈಲ್ಯಾಂಡ್‌ನಾದ್ಯಂತ ತಮ್ಮ ಸಾಮ್ರಾಜ್ಯವನ್ನು ಇಟ್ಟುಕೊಂಡಿದ್ದಾರೆ. ಥೈಲ್ಯಾಂಡ್‌ನಲ್ಲೇ ಬರೋಬ್ಬರಿ 6,500 ಹೆಕ್ಟೇರ್‌ ಭೂಮಿಯನ್ನು ಹೊಂದಿದ್ದಾರೆ. ಅದಲ್ಲದೆ ರಾಜಧಾನಿ ಬ್ಯಾಂಕಾಕ್‌ ಸೇರಿ ದೇಶದಾದ್ಯಂತ ವ್ಯವಹಾರಗಳಿಗೆ ಸಂಬಂಧಪಟ್ಟಂತೆ 40 ಸಾವಿರಕ್ಕೂ ಅಧಿಕ ಒಪ್ಪಂದಗಳನ್ನು ಮಾಡಿಟ್ಟುಕೊಂಡಿದ್ದಾರೆ. ಹಾಗೆಯೇ ಇವರ ಅರಮನೆಯಲ್ಲಿ ವಜ್ರ ಮತ್ತು ರತ್ನಗಳ ದೊಡ್ಡ ಸಂಗ್ರಹವೇ ಇದೆಯಂತೆ. ಫೈನಾನ್ಶಿಯಲ್‌ ಟೈಮ್ಸ್‌ನ ವರದಿಯ ಪ್ರಕಾರ ಈ ರಾಜಮನೆತನದ ಒಟ್ಟಾರೆ ಸಂಪತ್ತು 3.2 ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚು!

ಕೇವಲ ರಾಜನಾಗಿ ಮಾತ್ರ ಇರದೆ ಕಿಂಗ್‌ ರಾಮ X ಉದ್ಯಮ ಮತ್ತು ರಿಯಲ್‌ ಎಸ್ಟೇಟ್‌ಗಳಲ್ಲೂ ಹೆಸರು ಮಾಡಿದ್ದಾರೆ. ದೇಶದಾದ್ಯಂತ ಅವರ ಹೆಸರಿನಲ್ಲಿ ಹಲವಾರು ಮಾಲ್‌ಗಳು ಮತ್ತು ಹೋಟೆಲ್‌ಗಳನ್ನು ನಿರ್ಮಿಸಲಾಗಿದೆ. ದೇಶದ ಎರಡನೇ ಅತಿದೊಡ್ಡ ಬ್ಯಾಂಕ್‌ ಆದ ಸಿಯಾಮ್‌ ಕಮರ್ಷಿಯಲ್‌ ಬ್ಯಾಂಕ್‌ನಲ್ಲಿ ಅವರ ಪಾಲು ಶೇ. 23. ಹಾಗೆಯೇ ದೇಶದ ಅತಿದೊಡ್ಡ ಕೈಗಾರಿಕೆ ಸಂಸ್ಥೆಯಾದ ಸಿಯಾಮ್‌ ಸಿಮೆಂಟ್‌ ಗ್ರೂಪ್‌ನಲ್ಲಿ ಅವರು ಶೇ. 33.3 ಪಾಲನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ಧೈರ್ಯ ಇದ್ರೆ ಮಾತ್ರ ಈ ವಿಡಿಯೋ ನೋಡಿ! ಎನ್‌ಸಿಸಿ ಕೆಡೆಟ್‌ನ ಅಮಾನವೀಯ ಕೃತ್ಯ
ಇನ್ನು ವಜ್ರ ವೈಢೂರ್ಯದ ಸಾಲಿಗೆ ಬಂದರೆ, ಆ ಸಾಲಿನಲ್ಲೂ ಇವರು ಮೊದಲನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರ ಬಳಿ ವಂಶ ಪರಂಪರೆಯಾಗಿ ಬಂದಿರುವ ದೊಡ್ಡದೊಂದು ಕಿರೀಟವಿದೆ. ಅದರಲ್ಲಿ 545.67 ಕ್ಯಾರೆಟ್‌ ಗೋಲ್ಡನ್‌ ಜುಬಿಲಿ ವಜ್ರವಿದೆ. ಇದು ವಿಶ್ವದ ಅತ್ಯಂತ ದೊಡ್ಡ ಮತ್ತು ದುಬಾರಿ ವಜ್ರ ಎನ್ನುವ ಖ್ಯಾತಿ ಪಡೆದಿದೆ. ಈ ಒಂದು ವಜ್ರದ ಬೆಲೆಯೇ 98 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇನ್ನು ಇವರ ಬಳಿ ಹಲವಾರು ವಜ್ರಗಳು ಮತ್ತು ಅತ್ಯಮೂಲ್ಯ ರತ್ನಗಳಿವೆ. ಅವುಗಳ ಒಟ್ಟಾರೆ ಮೌಲ್ಯ ಲೆಕ್ಕ ಹಾಕಲು ಹೋದರೆ ಸಂಖ್ಯೆಗಳು ಸಾಲದೇ ಹೋಗಬಹುದು.
ವಾಹನಗಳ ವಿಚಾರಕ್ಕೆ ಬಂದರೆ ಇವರದ್ದೇ ಒಂದು ಶೋರೂಂ ತೆರೆಯುವಷ್ಟು ವಾಹನಗಳಿವೆ ಎಂದೇ ಹೇಳಬಹುದು. 21 ಹೆಲಿಕಾಪ್ಟರ್‌ಗಳು ಸೇರಿ ಒಟ್ಟು 38 ವಿಮಾನಗಳಿವೆ. ಅದರಲ್ಲಿ ಬೋಯಿಂಗ್‌, ಸುಖೋಯ್‌ ಸೂಪರ್‌ಜೆಟ್‌ಗಳೂ ಸೇರಿವೆ. ಪ್ರತಿ ವರ್ಷ ವಿಮಾನಗಳ ನಿರ್ವಹಣೆ ಮಾಡುವುದಕ್ಕೆಂದೇ ಅವರು ಬರೋಬ್ಬರಿ 524 ಕೋಟಿ ರೂ. ಖರ್ಚು ಮಾಡುತ್ತಾರಂತೆ. ಹಾಗೆಯೇ ಇವರು ಬಳಿ ಐಷಾರಾಮಿ ಕಾರುಗಳಾದ ಲಿಮೋಸಿನ್‌, ಮರ್ಸಿಡಿಸ್‌ ಬೆಂಜ್‌ಗಳ ಸಾಲು ಸಾಲೇ ಇವೆ. ದೊಡ್ಡ ಐಷಾರಾಮಿ ಹಡಗು ಸೇರಿದಂತೆ ಒಟ್ಟು 52 ಬೋಟ್‌ಗಳಿವೆ. ವಿಶೇಷವೆಂದರೆ ಈ ಎಲ್ಲ ಬೋಟ್‌ಗಳ ಮೇಲೆ ಚಿನ್ನದ ಕೆತ್ತನೆಗಳಿವೆಯಂತೆ.

Exit mobile version