ಹುಲಿ ನೋಡೋಕೆ ಚೆಂದವಾದ ಪ್ರಾಣಿ. ಆದರೆ ಅಷ್ಟೇ ಕ್ರೂರಿ..ತನಗಿಂತ ಚಿಕ್ಕ ಪ್ರಾಣಿಗಳಷ್ಟೇ ಅಲ್ಲ, ಆನೆ, ಕಾಡೆಮ್ಮೆಗಳಂಥ ಬೃಹದಾಕಾರದ ಪ್ರಾಣಿಯನ್ನೂ ಬೇಟೆಯಾಡುವ ಸಾಮರ್ಥ್ಯ ಇರುವ ಹುಲಿ, ನರಭಕ್ಷಕ. ಹುಲಿಯನ್ನು ನೋಡಿದರೆ ಸಾಕು, ನಮ್ಮಲ್ಲಿ ಅನೇಕರಿಗೆ ಜಂಘಾಬಲವೇ ಉಡುಗಿಹೋಗುತ್ತದೆ. ಅದರಲ್ಲೂ ಈ ವಿಡಿಯೊ ನೋಡಿದ ಮೇಲೆ ಹುಲಿ ಬಗ್ಗೆ ಇನ್ನಷ್ಟು ಭಯ ಮನಸಲ್ಲಿ ಮೂಡುತ್ತದೆ. ಅಬ್ಬಾ..ಅದೆಷ್ಟು ಭಯಂಕರ ಪ್ರಾಣಿ ಇದು ಎನ್ನಿಸಿಬಿಡುತ್ತದೆ. ಇಲ್ಲೊಬ್ಬಳು ಮಹಿಳೆ, ಕ್ಷಣಮಾತ್ರದಲ್ಲಿ ಹುಲಿ ಕೈಯಲ್ಲಿ ಗೊಂಬೆಯಂತಾಗಿ ಹೋಗಿದ್ದಾಳೆ.
ಇದು ಯಾವ ದೇಶದಲ್ಲಿ ಚಿತ್ರೀಕರಣವಾದ ವಿಡಿಯೊ ಎಂಬುದು ಗೊತ್ತಾಗಿಲ್ಲ. ಅದೊಂದು ಕಾಡಿನ ಮಧ್ಯೆ ಇರುವ, ವಾಹನ ಸಂಚಾರ ಯೋಗ್ಯವಾದ ರಸ್ತೆ. ಮೂರು ಕಾರುಗಳು ಅಲ್ಲಿ ನಿಂತಿವೆ. ಅದರಲ್ಲಿ ಒಂದು ಕಾರಿನಿಂದ ಒಬ್ಬಳು ಮಹಿಳೆ ಕೆಳಗೆ ಇಳಿದು, ಇನ್ನೊಂದು ಪಕ್ಕಕ್ಕೆ ಬಂದು, ಬಾಗಿಲು ತೆಗೆದು ನಿಂತಿರುತ್ತಾಳೆ. ಆ ಸೀಟ್ನಲ್ಲಿದ್ದವನನ್ನು ಡ್ರೈವಿಂಗ್ ಸೀಟ್ಗೆ ಕಳಿಸಿ, ತಾನು ಪಕ್ಕದಲ್ಲಿ ಕೂರುವ ಸಲುವಾಗಿ ಹಾಗೆ ಇಳಿದು ಬಂದಿರುತ್ತಾಳೆ. ಅಷ್ಟರಲ್ಲಿ ಕಾಡಿನ ಕಡೆಯಿಂದ ಬಂದ ಹುಲಿಯೊಂದು ಆಕೆಯನ್ನು ಹಿಡಿದುಕೊಂಡು, ದರದರನೇ ಎಳೆದುಕೊಂಡು ಹೋಗುತ್ತದೆ. ಇಲ್ಲಿಯವರೆಗಿನ ದೃಶ್ಯವನ್ನು ವಿಡಿಯೊದಲ್ಲಿ ನೋಡಬಹುದು. ಆಮೇಲೆ ಮಹಿಳೆಯ ಸ್ಥಿತಿಯೇನು? ಆಕೆ ಬದುಕಿಬಂದಳಾ? ಏನೂ ವಿಷಯ ಗೊತ್ತಾಗಲಿಲ್ಲ.