Site icon Vistara News

Video: ಹೊಲದಲ್ಲಿ ಉಳುವಾ ಯೋಗಿ, ಹಿಂಬದಿಯಲ್ಲೇ ಹುಲಿ; ಉತ್ತರ ಪ್ರದೇಶದಲ್ಲಿ ಅಪರೂಪದ ಸನ್ನಿವೇಶ!

Tiger In Field

ಕಾಡ ಬುಡದಲ್ಲಿರುವ ಹೊಲ-ಗದ್ದೆ-ತೋಟಗಳಿಗೆ ಹುಲಿ, ಚಿರತೆ, ಆನೆಗಳಂಥ ಕಾಡು ಪ್ರಾಣಿಗಳು ಬರುವುದು ಸಾಮಾನ್ಯ. ಈಗಂತೂ ಬಿಡಿ, ಈ ಪ್ರಾಣಿಗಳೆಲ್ಲ ಪಟ್ಟಣಕ್ಕೂ ಬರಲು ಶುರು ಮಾಡಿವೆ. ಇದೀಗ ಉತ್ತರ ಪ್ರದೇಶದ ಪಿಲಿಭಿತ್​​ ಜಿಲ್ಲೆಯಲ್ಲಿ ಹುಲಿಯೊಂದು ಹೊಲದಲ್ಲಿ ಅಡ್ಡಾಡಿಕೊಂಡಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Video Viral) ಆಗುತ್ತಿದೆ. ವಿಶೇಷವೆಂದರೆ, ಅಲ್ಲೇ ಒಬ್ಬ ರೈತ ಟ್ರ್ಯಾಕ್ಟರ್​​ನಲ್ಲಿ ಹೊಲವನ್ನು ಉಳುಮೆ ಮಾಡುತ್ತಿದ್ದಾನೆ. ಅವನ ಹಿಂಬದಿಯಲ್ಲಿ ಹುಲಿಯೊಂದು ಓಡಾಡುತ್ತಿರುವುದು ಅವನಿಗೇ ಗೊತ್ತಿಲ್ಲ.

ರಾಜ್​ ಲೇಖನಿ ಎಂಬ ಟ್ವಿಟರ್​ ಬಳಕೆದಾರರು ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ. ಅದೊಂದು ಭತ್ತದ ಗದ್ದೆ. ಸುತ್ತಲೆಲ್ಲ ಕಾಡಿನ ಸ್ವಚ್ಛಂದ ಹಸಿರು. ಅರಣ್ಯದಲ್ಲಿ ಸುತ್ತಾಡಿ ಸಾಕಾದ ಹುಲಿ ಹೊಲಕ್ಕೆ ಇಳಿದಿದೆ. ಅದನ್ನು ಮತ್ತೊಬ್ಬ ರೈತ ವಿಡಿಯೊ ಮಾಡಿಕೊಂಡಿದ್ದಾನೆ. ಟ್ವಿಟರ್​​ನಲ್ಲಿ ವಿಡಿಯೊ ಪೋಸ್ಟ್ ಮಾಡಿರುವ ಲೇಖನಿ ‘ಇದು ಉತ್ತರ ಪ್ರದೇಶದ ಪಿಲಿಭಿತ್​. ಹೊಲದಲ್ಲಿ ರೈತ ಉಳುಮೆ ಮಾಡುತ್ತಿದ್ದಾನೆ. ಹಿಂಬದಿಯಲ್ಲಿ ಹುಲಿ ಆರಾಮಾಗಿ ಓಡಾಡಿಕೊಂಡಿದೆ. ಇನ್ನೊಬ್ಬ ರೈತ ವಿಡಿಯೊ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ. ವಿಡಿಯೊ ಶೇರ್ ಆದಾಗಿನಿಂದ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಲಕ್ಷಕ್ಕೂ ಹೆಚ್ಚು ವೀವ್ಸ್​ ಆಗಿದೆ. 2000ಕ್ಕೂ ಅಧಿಕ ಲೈಕ್ಸ್ ಬಂದಿದೆ. ನೆಟ್ಟಿಗರು ವಿವಿಧ ಕಮೆಂಟ್ ಮಾಡುತ್ತಿದ್ದಾರೆ. ಹುಲಿಯ ಗಾಂಭೀರ್ಯ ಮನಸೋಲುವಂತಿದೆ ಎಂದಿದ್ದಾರೆ. ಕೆಲವರು ರೈತನ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ.

Exit mobile version