ಭಾರತ ವೈವಿಧ್ಯತೆಯನ್ನೇ ಜೀವಾಳವಾಗಿಟ್ಟುಕೊಂಡ ದೇಶ. ಇಲ್ಲಿ ಜನಜೀವನ, ನೆಲ, ಭಾಷೆ, ಉಡುಪು, ಆಹಾರ, ಸಂಪ್ರದಾಯ, ಸಂಸ್ಕೃತಿ, ಹಬ್ಬಗಳ ಆಚರಣೆ..ಹೀಗೆ ಪ್ರತಿಯೊಂದರಲ್ಲೂ ನಾವು ವಿವಿಧತೆಯನ್ನು ಕಾಣುತ್ತೇವೆ. ಭಾರತ ತನ್ನ ಹಲವು ವಿಭಿನ್ನತೆ ಕಾರಣಕ್ಕೇ ಒಂದು ವಿಶೇಷ ರಾಷ್ಟ್ರ ಎನ್ನಿಸಿಕೊಂಡಿದೆ. ಅದರಲ್ಲೊಂದು ಇಲ್ಲಿನ ಪ್ರವಾಸಿ ತಾಣ (Tourist Destinations)ಗಳು. ಇಲ್ಲಿನ ಪ್ರತಿರಾಜ್ಯಗಳಲ್ಲೂ ಒಂದೊಂದೂ ಐತಿಹಾಸಿಕ, ಪೌರಾಣಿಕ ಹಿನ್ನೆಲೆಯಿರುವ ಪ್ರವಾಸಿ ಸ್ಥಳಗಳಿವೆ. ಶೈಕ್ಷಣಿಕ ಅರಿವು ಮೂಡಿಸುವ ತಾಣಗಳಿಂದ ಹಿಡಿದು, ಭಕ್ತಿಯ ಪರಾಕಾಷ್ಠೆಗೆ ಕೊಂಡೊಯ್ಯುವ, ಪ್ರಕೃತಿ ಸೌಂದರ್ಯವನ್ನು ಬಿಚ್ಚಿಟ್ಟು ಮನಸಿಗೆ ಆಹ್ಲಾದ ಉಂಟು ಮಾಡುವ, ರೊಮ್ಯಾಂಟಿಕ್ ಫೀಲ್ ಹುಟ್ಟಿಸುವ ಪ್ರದೇಶಗಳವರೆಗೆ ಎಲ್ಲ ರೀತಿಯ ಪ್ರವಾಸಿ ಸ್ಥಳಗಳೂ ಭಾರತದಲ್ಲಿವೆ. ಇಲ್ಲಿ ಪ್ರವಾಸಕ್ಕೆಂದು ಹೊರಟರೆ ಸುತ್ತಾಡಲು ಒಂದು ಜನ್ಮ ಸಾಕಾಗದಷ್ಟು ತಾಣಗಳು ಸಿಗಬಹುದು.
ಹೀಗೆ ಭಾರತಕ್ಕೆ ವಿಭಿನ್ನತೆಯನ್ನು ಕೊಟ್ಟ ಇಲ್ಲಿನ ಒಂದಷ್ಟು ಪ್ರವಾಸಿ ತಾಣಗಳ ತ್ವರಿತ ಪರಿಚಯವನ್ನು ಈಗ ಉದ್ಯಮಿ ಹರ್ಷ್ ಗೋಯೆಂಕಾ ಅವರು ಮಾಡಿಸಿದ್ದಾರೆ. 30 ಸೆಕೆಂಡ್ಗಳ ವಿಡಿಯೊವನ್ನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿರುವ ಅವರು Incredible ಎಂದು ಕ್ಯಾಪ್ಷನ್ ಬರೆದು, ಭಾರತದ ಧ್ವಜದ ಚಿತ್ರ ಹಾಕಿದ್ದಾರೆ. ಅಂದರೆ ಭಾರತ ನಂಬಿಕೆಗೆ ನಿಲುಕದಷ್ಟು ವೈವಿಧ್ಯಮಯವಾಗಿದೆ ಎಂಬ ಭಾವವನ್ನು ಅವರು ಇಲ್ಲಿ ಸ್ಫುರಿಸಿದ್ದಾರೆ.
ಹರ್ಷ್ ಗೋಯೆಂಕಾ ಸೋಷಿಯಲ್ ಮೀಡಿಯಾಗಳಲ್ಲಿ ಸದಾ ಒಂದಿಲ್ಲೊಂದು ಗಮನಸೆಳೆಯುವ ವಿಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಸಲ ನಮ್ಮನ್ನು ಅವರು ಕೇರಳದಿಂದ ಕಾಶ್ಮೀರದವರೆಗೆ ವಿವಿಧ ಸ್ಥಳಗಳಿಗೆ ಕ್ಷಣಿಕ ಪ್ರವಾಸಕ್ಕೇ ಕರೆದುಕೊಂಡು ಹೋಗಿಬಿಟ್ಟಿದ್ದಾರೆ. ದೇಶದ ವಿವಿಧ ನಗರಗಳ ಪ್ರಸಿದ್ಧ ಪ್ರವಾಸಿ ಸ್ಥಳಗಳ ತುಣುಕುಗಳ ವಿಡಿಯೊಕ್ಕೆ, ಅದಕ್ಕೊಪ್ಪುವ ಹಾಡನ್ನೂ ಹಾಕಲಾಗಿದೆ. ಆಯಾ ಸ್ಥಳಗಳ ಹವಾಮಾನವನ್ನು-ಪರಿಸರ ವ್ಯವಸ್ಥೆಯನ್ನು ಈ ಹಾಡಿನಲ್ಲಿ ಬಿಂಬಿಸಲಾಗಿದೆ. ಇಲ್ಲಿದೆ ನೋಡಿ..ವಿಡಿಯೊ, ಹಾಗೇ, ಒಂದು ರೌಂಡ್ ಇಲ್ಲಿಯೇ ಪ್ರವಾಸಕ್ಕೆ ಹೋಗಿ ಬಂದುಬಿಡಿ..! ವಿಡಿಯೊ ನೋಡಿದ ನೆಟ್ಟಿಗರಂತೂ ನಮ್ಮ ಭಾರತದ ವೈವಿಧ್ಯತೆಯನ್ನು ಮನಸು ತುಂಬಿ ಹೊಗಳುತ್ತಿದ್ದಾರೆ.