Site icon Vistara News

Traffic Jam: ಬೆಂಗಳೂರು ಆಯ್ತು ಇದೀಗ ಗುರುಗ್ರಾಮದಲ್ಲೂ ಟ್ರಾಫಿಕ್‌ ಜಾಮ್‌; ಸಾರ್ವಜನಿಕ ವಾಹನ ಬಳಸಿ ಎಂದು ನೆಟ್ಟಿಗರು

gurugarama

gurugarama

ಗುರುಗ್ರಾಮ: ಸಿಲಿಕಾನ್‌ ಸಿಟಿ ಬೆಂಗಳೂರು ಕೆಟ್ಟ ಟ್ರಾಫಿಕ್‌ ಕಾರಣಕ್ಕೂ ಆಗಾಗ ಸುದ್ದಿಯಾಗುತ್ತದೆ (Bengaluru Traffic). ಇದೀಗ ಇನ್ನೊಂದು ಮಹಾನಗರ ಹರಿಯಾಣದ ಗುರುಗ್ರಾಮದಲ್ಲಿಯೂ ಬಹುದೊಡ್ಡ ಟ್ರಾಫಿಕ್‌ ಜಾಮ್‌ (Traffic Jam) ಸಂಭವಿಸಿದ್ದು, ಈ ವಿಡಿಯೊ ವೈರಲ್‌ ಆಗಿದೆ. ಈಗ ಇದನ್ನು ಬೆಂಗಳೂರು ಟ್ರಾಫಿಕ್‌ನೊಂದಿಗೆ ಹೋಲಿಸಿ ಚರ್ಚೆ ಆರಂಭವಾಗಿದೆ. ಗುರುಗ್ರಾಮದ ಟ್ರಾಫಿಕ್‌ ಅನ್ನು ಪ್ರದರ್ಶಿಸುವ ಈ ಪುಟ್ಟ ವಿಡಿಯೊದಲ್ಲಿ ರಸ್ತೆಯ ಉದ್ದಕ್ಕೂ ಕಾರುಗಳು ಸಿಲುಕಿಕೊಂಡಿರುವುದು ಕಂಡು ಬರುತ್ತಿದೆ. ಈ ವಾಹನಗಳ ಸಾಲು ಮುಗಿಯುವುದೇ ಇಲ್ಲ. ಎಕ್ಸ್‌ನಲ್ಲಿ ಈ ವಿಡಿಯೊವನ್ನು ಕನ್ನಡಿಗ ವಿಲಾಸ್‌ ನಾಯಕ್‌ ಹಂಚಿಕೊಂಡಿದ್ದು, ʼನಾನು ಹಿಂದೆ ಬೆಂಗಳೂರಿನ ಟ್ರಾಫಿಕ್‌ ಬಗ್ಗೆ ಹೇಳಿದ್ದೆ. ಇದೀಗ ಗುರುಗ್ರಾಮದ ಸರದಿʼ ಎಂದು ಬರೆದಿದ್ದಾರೆ.

ಈ ವಿಡಿಯೊ ಇದೀಗ ನೆಟ್ಟಿಗರನ್ನು ಸೆಳೆದಿದೆ. ಈಗಾಗಲೇ 2 ಲಕ್ಷಕ್ಕಿಂತಲೂ ಅಧಿಕ ಮಂದಿ ಈ ವಿಡಿಯೊವನ್ನು ವೀಕ್ಷಿಸಿದ್ದಾರೆ. ಹಲವರು ಕಮೆಂಟ್‌ ಮಾಡಿದ್ದಾರೆ. ನೆಟ್ಟಿಗರೊಬ್ಬರು ʼʼಗುರುಗ್ರಾಮದಲ್ಲಿ ಕೆಲವೊಮ್ಮೆ ಇಂತಹ ಟ್ರಾಫಿಕ್‌ ಜಾಮ್‌ ಸಂಭವಿಸುತ್ತದೆ. ಆದರೆ ಬೆಂಗಳೂರಿನಲ್ಲಿ ಹಾಗಲ್ಲ. ಅಲ್ಲಿನ ಟ್ರಾಫಿಕ್‌ ಯಾವತ್ತೂ ಕೆಟ್ಟದಾಗಿರುತ್ತದೆ. ಇದು ಬೆಂಗಳೂರು ಮತ್ತು ಗುರುಗ್ರಾಮಕ್ಕಿರುವ ವ್ಯತ್ಯಾಸʼʼ ಎಂದಿದ್ದಾರೆ. ʼʼದಿಲ್ಲಿ-ಗುರುಗ್ರಾಮ ಹೆದ್ದಾರಿಯಲ್ಲಿ ಪ್ರತಿದಿನ ಇಂತಹ ಘಟನೆ ನಡೆಯುತ್ತದೆ. ಬೆಳಗ್ಗೆ ದಿಲ್ಲಿಯ ವಾಹನಗಳು ಒಂದು ಬದಿಯ ರಸ್ತೆಯನ್ನು ಬ್ಲಾಕ್‌ ಮಾಡಿದರೆ ಸಂಜೆ ಗುರುಗ್ರಾಮದ ವಾಹನಗಳು ಇನ್ನೊಂದು ಬದಿಯ ಜಾಮ್‌ಗೆ ಕಾರಣವಾಗುತ್ತವೆ. ಗುರುಗ್ರಾಮದಲ್ಲಿ ವಾಸಿಸುತ್ತಿರುವ, ಮತ್ತು ಉದ್ಯೋಗಕ್ಕಾಗಿ ದಿಲ್ಲಿಗೆ ಪ್ರಯಾಣಿಸುವವರು ಅದೃಷ್ಟವಂತರುʼʼ ಎಂದಿದ್ದಾರೆ ಮತ್ತೊಬ್ಬರು. ʼʼಸಾರ್ವಜನಿಕ ವಾಹನಗಳನ್ನು ನಿರ್ಲಕ್ಷಿಸಿದ ಪರಿಣಾಮವಿದು. ಪ್ರತಿಯೊಂದು ಕುಟುಂಬದಲ್ಲಿ 3-4 ವಾಹನಗಳಿರುತ್ತವೆ. ಹೀಗಾಗಿ ಈ ರೀತಿಯ ಪರಿಸ್ಥಿತಿ ಉದ್ಘವಿಸುತ್ತದೆʼʼ ಎಂದು ಇನ್ನೊಬ್ಬರು ಕಾರಣ ವಿವರಿಸಿದ್ದಾರೆ.

ʼʼಅರೋಗ್ಯ ಸಮಸ್ಯೆ ಕಾಡಿದವರು ಅದರಲ್ಲೂ ಮಧುಮೇಹಿಗಳು ಈ ಟ್ರಾಫಿಕ್‌ ಮಧ್ಯೆ ಸಿಲುಕಿಕೊಂಡರೆ ಅವರ ಪರಿಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ಒಮ್ಮೆ ಆಲೋಚಿಸಿʼʼ ಎಂದು ಹೇಳಿ ಮಗದೊಬ್ಬರು ಗಂಭೀರ ಚಿಂತನೆಗೆ ಹಚ್ಚಿದ್ದಾರೆ. ʼʼರಸ್ತೆ ಹೆಚ್ಚಾದಂತೆ ವಾಹನಗಳೂ ಹೆಚ್ಚುತ್ತವೆ ಎಂದು ಅಧ್ಯಯನ ತಿಳಿಸುತ್ತದೆ. ನಮಗೆ ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅಗತ್ಯವಿದೆʼʼ ಎನ್ನುವುದು ಮತ್ತೊಬ್ಬರ ಅಭಿಮತ. ʼʼತಾಂತ್ರಿಕವಾಗಿ ಈ ಗುರುಗ್ರಾಮ ನಗರದ ರಚನೆ ಸಮರ್ಪಕವಾಗಿಲ್ಲʼʼ ಎಂದು ಇನ್ನೊಬ್ಬ ನೆಟ್ಟಿಗರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Bengaluru Traffic: ಟ್ರಾಫಿಕ್‌ ಚಕ್ರವ್ಯೂಹಕ್ಕೆ ಸಿಲುಕಿ 12 ಕಿ.ಮೀ ನಡೆದು ಮನೆ ತಲುಪಿದ ವ್ಯಕ್ತಿ!

ವೈರಲ್‌ ಆಗಿದ್ದ ಬೆಂಗಳೂರು ಟ್ರಾಫಿಕ್‌ ಜಾಮ್‌ ವಿಡಿಯೊ

ಇತ್ತೀಚೆಗೆ ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ ಭಾರಿ ಜಾಮ್ ಉಂಟಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಆಗ ಎಷ್ಟು ವಾಹನಗಳು ಸಿಕ್ಕಿ ಹಾಕಿಕೊಂಡಿದ್ದವು ಎಂದರೆ ಕೆಲವೇ ಕಿ.ಮೀ. ಅಂತರದಲ್ಲಿದ್ದವರು ಮನೆಗೆ ತಲುಪಲು 4-5 ಗಂಟೆ ಬೇಕಾಯಿತಂತೆ. ವ್ಯಕ್ತಿಯೊಬ್ಬರು ಯಾವುದೇ ವಾಹನ ಸಿಗದೆ ಸುಮಾರು 12 ಕಿ.ಮೀ. ನಡೆದು ಮನೆಗೆ ಸೇರಿದ್ದರಂತೆ. ಈ ವಿಚಾರವನ್ನು ಅವರ ಸ್ನೇಹಿತರೊಬ್ಬರು ಹಂಚಿಕೊಂಡಿದ್ದು ವೈರಲ್‌ ಆಗಿತ್ತು. ಒಟ್ಟಿನಲ್ಲಿ ನಗರಗಳಲ್ಲಿನ ಟ್ರಾಫಿಕ್‌ ವ್ಯವಸ್ಥೆ ಸರಿಪಡಿಸುವುದು ಕೂಡ ಜೀವನ ಸುಧಾರಣೆಗೆ ಅಗತ್ಯ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Exit mobile version