Site icon Vistara News

Viral video | 80 ವರ್ಷಗಳ ನಂತರ ಭೇಟಿಯಾದ ಗೆಳತಿಯರಿವರು!

friendship

ಗೆಳೆತನ ಎಂಬ ಸಂಬಂಧವನ್ನು ಅನುಗಾಲ ಉಳಿಯುವಂತೆ ಮಾಡಲು ಪ್ರಯತ್ನವೂ ಬೇಕು. ಪ್ರೀತಿ, ಕಾಳಜಿ, ಒಬ್ಬರ ಮನಸ್ಸನ್ನು ಇನ್ನೊಬ್ಬರು ಅರಿಯುವುದೂ ಸೇರಿದಂತೆ ಹಲವು ಗುಣಗಳು ಗೆಳೆತನವನ್ನು ಬಹುಕಾಲ ಉಳಿಯುವಂತೆ ಮಾಡುತ್ತದೆ. ಗಾಢವಾದ ಗೆಳೆತನ ಬಹಳ ಕಾಲ ಉಳಿಯಲು ಪುಣ್ಯ ಮಾಡಿರಬೇಕು ಎಂಬ ಮಾತಿದೆ. ಇಲ್ಲಿ ಅಂಥದ್ದೊಂದು ಗೆಳೆತನದ ಪುಟಾಣಿ ವಿಡಿಯೋ ಝಲಕ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಕಣ್ಣಲ್ಲೂ ಆನಂದಭಾಷ್ಪ ಜಿನುಗಿಸುತ್ತಿದೆ.

ಮುಕಿಲ್‌ ಮೆನನ್‌ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಹಣ್ಣು ಹಣ್ಣು ಮುದುಕಿಯರಿಬ್ಬರ ೮೦ ವರ್ಷಗಳ ಗೆಳೆತನದ ಮಿಲನದ ಸಂದರ್ಭದ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. ಇದೀಗ ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದು, ಇವರಿಬ್ಬರ ಪುನರ್ಮಿಲನಕ್ಕೆ ಸಹಾಯ ಮಾಡಿದ ಮೊಮ್ಮಗನಿಗೆ ಶಹಬ್ಬಾಸ್‌ ಹೇಳುತ್ತಿದ್ದಾರೆ.

ಈ ವಿಡಿಯೋ ಜೊತೆಗೆ ಮೆನನ್‌ ಅವರು ವಿವರವನ್ನೂ ಬರೆದುಕೊಂಡಿದ್ದು, ಅದರ ಪ್ರಕಾರ, ʻನನ್ನ ಅಜ್ಜಿ ಬಹಳಷ್ಟು ವರ್ಷಗಳಿಂದ ಆಕೆಯ ಬೆಸ್ಟ್‌ ಫ್ರೆಂಡ್‌ ಭೇಟಿ ಮಾಡಬೇಕು ಎಂದು ಹೇಳುತ್ತಿದ್ದಳು. ಅದು ಸಾಧ್ಯವಾಗಿರಲಿಲ್ಲ ಎಂಬ ನೋವಿತ್ತು.  ಕೊನೆಗೂ ಅದು ನನ್ನಿಂದ ಈಗ ಸಾಧ್ಯವಾಗಿದೆ. ಆಕೆಯ ಗೆಳತಿಯನ್ನು ಪತ್ತೆ ಹಚ್ಚಿ ನನ್ನಜ್ಜಿಯನ್ನು ಆಕೆಯ ಮನೆಗೆ ಕರೆದೊಯ್ದೆವು. ಹೀಗೆ, ೮೦ ವರ್ಷದ ಹಿಂದಿನ ಗೆಳತಿಯನ್ನು ಕಂಡ ಅಪರೂಪದ ಗಳಿಗೆ ವಿಡಿಯೋ ಇಲ್ಲಿದೆ. ದಶಕಗಳ ಮೆಲುಕು, ನಗೆ, ತಮಾಷೆ, ಹರಟೆಯ ಅಪೂರ್ವ ಸಂದರ್ಭವಿದುʼ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ | Viral post | ಬೆಂಗಳೂರಲ್ಲಿ ಬಾಡಿಗೆ ಮನೆ ಬೇಕೆಂದರೆ ಐಐಟಿ, ಐಐಎಂನಲ್ಲಿ ಓದಿರಬೇಕಾ?!

ಮೆನನ್‌ ಅವರು ತನ್ನಜ್ಜಿಯ ಗೆಳತಿಯನ್ನು ಹುಡುಕಿ ಆಕೆಯನ್ನು ಆಕೆಯ ಗೆಳತಿಯ ಮನೆಗೆ ಕರೆದೊಯ್ದು ಭೇಟಿ ಮಾಡಿಸುವ ವ್ಯವಸ್ಥೆ ಮಾಡಿದ್ದು, ಈ ಪಯಣದ ವಿಡಿಯೋವನ್ನು ಮಾಡಿ, ಈ ಅತ್ಯಪೂರ್ವ ಗಳಿಗೆಯನ್ನು ದಾಖಲಿಸಿದ್ದಾರೆ. ವೃದ್ಧಾಪ್ಯದಲ್ಲಿರುವ ಇಬ್ಬರೂ ಒಬ್ಬರನ್ನೊಬ್ಬರು ಕಂಡ ಕೂಡಲೇ ಅರಳುವ ಮುಖ, ಖುಷಿಯ ಚಿಲುಮೆ, ವರ್ಷಗಳೆಷ್ಟು ಕಳೆದರೂ ಗೆಳೆತನದ ನೆನಪು ಮಾತ್ರ ಶಾಶ್ವತ ಎಂಬ ಹೇಳಿಕೆಯನ್ನು ಸತ್ಯವಾಗಿಸಿದೆ. ಇಬ್ಬರೂ ಅಪ್ಪಿಕೊಂಡು ಆಡುವ ಮಾತುಗಳು, ನಗು, ತಮಾಷೆಗಳು, ಇಂಥ ವಯಸ್ಸಿನಲ್ಲೂ ಹರಿಸಿದ ಕಣ್ಣ ಮಿಂಚಿನಿಂದ ಜಾಲತಾಣದಲ್ಲಿ ಸಾವಿರಾರು ಮಂದಿ ಮಂತ್ರಮುಗ್ಧರಾಗಿದ್ದಾರೆ.

ಈ ೮೦ ವರ್ಷಗಳ ಗೆಳೆತನ ತೋರಿಸುವ ನಿಜವಾದ ಪ್ರೀತಿಗೆ ನಾವು ಶರಣಾಗಿದ್ದೇವೆ. ಎಂಥ ಅದ್ಭುತ ಬಂಧವಿದು. ಇದನ್ನು ನೋಡುವುದೇ ಖುಷಿ ಎಂದು ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಹಲವರು ಮೊಮ್ಮಗನ ನಡೆಯನ್ನು ಶ್ಲಾಘಿಸಿದ್ದಾರೆ. ಇನ್ನೂ ಕೆಲವರು ೮೦ ವರ್ಷಗಳ ದೀರ್ಘ ಗೆಳೆತನವೇ ಅಚ್ಚರಿ ಎಂದು ಖುಷಿಪಟ್ಟಿದ್ದಾರೆ.

ಇದನ್ನೂ ಓದಿ | Viral video | ಮತ್ತೊಂದು ಚಾರ್ಲಿ 777 ಕತೆ: ದೆಹಲಿಯಿಂದ ಲಡಾಕ್‌ವರೆಗೆ ನಾಯಿ ಜೊತೆಗೆ ಬೈಕ್‌ ಸವಾರಿ!

Exit mobile version