ಬರೇಲಿ: ಸಂಚಾರ ನಿಯಮ ಉಲ್ಲಂಘನೆ ಮಾಡಿ, ನಿಮಗೆ ಪೊಲೀಸರು ದಂಡ ಹಾಕಿದರೆ ನೀವೇನು ಮಾಡುತ್ತೀರಿ?-ಒಂದೋ ಒಪ್ಪಿಕೊಂಡು ದಂಡ ತುಂಬಿ ಬರುತ್ತೀರಿ, ಇಲ್ಲ ಪೊಲೀಸರೊಂದಿಗೆ ವಾದಕ್ಕೆ ಇಳಿಯುತ್ತೀರಿ. ಏನೇ ಮಾಡಿದರೂ ಅಂತಿಮವಾಗಿ ಹಣ ಕೊಡುವುದು ತಪ್ಪೋದಿಲ್ಲ ಎಂದು ಗೊತ್ತಿದ್ದರೂ ಒಂದಷ್ಟು ಹೊತ್ತು ಜಗಳ-ಗಲಾಟೆ ನಡೆಸುವವರೂ ಇದ್ದಾರೆ. ಆದರೆ ಉತ್ತರ ಪ್ರದೇಶದ (Uttar Pradesh) ಬರೇಲಿಯ ವ್ಯಕ್ತಿಯೊಬ್ಬ ತನಗೆ ದಂಡ ವಿಧಿಸಿದ ಪೊಲೀಸರ ಮೇಲೆ ಅತ್ಯಂತ ವಿಭಿನ್ನವಾಗಿ ಪ್ರತೀಕಾರ ತೀರಿಸಿಕೊಂಡಿದ್ದು ವರದಿಯಾಗಿದೆ.
ಈ ವ್ಯಕ್ತಿಯ ಹೆಸರು ಭಗವಾನ್ ಸ್ವರೂಪ್ ಎಂದಾಗಿದ್ದು ವೃತ್ತಿಯಲ್ಲಿ ಲೈನ್‌ಮೆನ್. ಇವರೊಂದು ದಿನ ಬೈಕ್‌ನಲ್ಲಿ ಹೋಗುತ್ತಿದ್ದಾಗ ಹರ್ದಾಸ್‌ಪುರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮೋದಿ ಸಿಂಗ್ ಎಂಬುವರ ಕೈಯಲ್ಲಿ ಸಿಕ್ಕಿಬಿದ್ದಿದ್ದರು. ವಾಹನದ ದಾಖಲೆಗಳನ್ನು ತೋರಿಸುವಂತೆ ಮೋದಿ ಸಿಂಗ್ ಕೇಳಿದ್ದಾರೆ. ಆದರೆ ಅವರು ಕೇಳಿದ ಎಲ್ಲ ದಾಖಲೆಗಳೂ ಸ್ವರೂಪ್ ಬಳಿ ಬೈಕ್‌ನಲ್ಲಿ ಇರಲಿಲ್ಲ. ʼ ನನ್ನ ಬಳಿ ಎಲ್ಲ ಡಾಕ್ಯುಮೆಂಟ್‌ಗಳೂ ಸರಿಯಾಗಿಯೇ ಇವೆ. ಆದರೆ ಮನೆಯಲ್ಲಿ ಇದೆ. ನಾನು ತಂದು ತೋರಿಸುತ್ತೇನೆ ಬಿಡಿʼ ಎಂದು ಸ್ವರೂಪ್ ಕೇಳಿಕೊಂಡರೂ, ಆ ಪೊಲೀಸ್ ಅಧಿಕಾರಿ ಕೇಳಲಿಲ್ಲ. ಬದಲಿಗೆ 500 ರೂಪಾಯಿ ದಂಡ ವಿಧಿಸಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಈ ಬಾರಿ ರಸ್ತೆಯಲ್ಲಿ ನಮಾಜ್ ನಡೆದಿಲ್ಲ: ಇತಿಹಾಸದಲ್ಲೆ ಮೊದಲು
ಇಷ್ಟಾದ ಮೇಲೆ ತಮಗೆ ಅವಮಾನ ಆಗಿದ್ದಕ್ಕೆ ಸ್ವರೂಪ್ ತುಂಬ ನೊಂದಿದ್ದರು. ಅವರಿಗೆ ಪೊಲೀಸ್ ಅಧಿಕಾರಿಯ ಮೇಲೆ ಮನಸಲ್ಲೇ ಕ್ರೋಧ ಕುದಿಯುತ್ತಿತ್ತು. ಈ ಬಗ್ಗೆ ತಮ್ಮ ಕೆಲವು ಸಹೋದ್ಯೋಗಿಗಳೊಂದಿಗೆ ಚರ್ಚಿಸಿದ್ದಾರೆ. ಬಳಿಕ ಒಂದು ಉಪಾಯ ಮಾಡಿ, ಒಂದೆರಡು ಜನರೊಂದಿಗೆ ಹೋಗಿ ಹರ್ದಾಸ್‌ಪುರ ಪೊಲೀಸ್ ಸ್ಟೇಶನ್‌ನ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಿದ್ದಾರೆ. ಅಂದರೆ ಪೊಲೀಸ್ ಠಾಣೆಗೆ ವಿದ್ಯುತ್ ಇಲ್ಲದಂತೆ ಮಾಡಿದ್ದಾರೆ. ಪೊಲೀಸ್ ಸ್ಟೇಶನ್‌ಗೆ ಮಾತ್ರ ಕರೆಂಟ್ ಇಲ್ಲದಾಗ ಸಹಜವಾಗಿಯೇ ಅದರ ಬಗ್ಗೆ ಗಮನಹರಿಸಲಾಯಿತು. ಆಗ ಈ ಕೆಲಸ ಸ್ವರೂಪ್‌ದೇ ಎಂದು ಗೊತ್ತಾಗಿದೆ. ಆದರೆ ಸ್ವರೂಪ್ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ, ಬದಲಿಗೆ ʼಮಾಧ್ಯಮಗಳೊಂದಿಗೆ ಮಾತನಾಡಿ, ಆ ಪೊಲೀಸ್ ಸ್ಟೇಶನ್‌ನಲ್ಲಿ ವಿದ್ಯುತ್ ಮೀಟರ್ ಇರಲಿಲ್ಲ. ಮೀಟರ್ ಇಟ್ಟುಕೊಳ್ಳದೆ ವಿದ್ಯುತ್ ಬಳಸುವುದು ಕಾನೂನು ಬಾಹಿರ. ಹಾಗಾಗಿಯೇ ಸಂಪರ್ಕ ಕಡಿತಗೊಳಿಸಲಾಗಿದೆʼ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಕೋಲ್ಕತ್ತದಲ್ಲಿ ಗುಂಡಿನ ದಾಳಿ ನಡೆಸಿ, ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಕಾನ್‌ಸ್ಟೆಬಲ್