ಮಹಿಳೆಯರು, ಯುವತಿಯರನ್ನು ಚುಡಾಯಿಸಿದ ಅನೇಕರು ಹಿಗ್ಗಾಮುಗ್ಗಾ ಥಳಿತಕ್ಕೊಳಗಾದ ಘಟನೆ ಈಗಾಗಲೇ ಹಲವು ಬಾರಿ ನಡೆದಿದೆ. ಆದರೆ ಈ ವ್ಯಕ್ತಿ ತಿಂದಷ್ಟು ಚಪ್ಪಲಿ ಏಟನ್ನು ಇನ್ಯಾರೂ ತಿಂದಿರಲಿಕ್ಕಿಲ್ಲವೇನೋ !!. ಯುವತಿಯೊಬ್ಬಳನ್ನು ಅಶ್ಲೀಲವಾಗಿ ಚುಡಾಯಿಸಿದ ಈತನಿಗೆ ಆ ಹುಡುಗಿ 20 ಸೆಕೆಂಡ್ಗಳಲ್ಲಿ 40 ಏಟುಗಳನ್ನು ಚಪ್ಪಲಿಯಲ್ಲಿ ಕೊಟ್ಟಿದ್ದಾಳೆ. ಕಾಲಿಗಿದ್ದ ಶೂಗಳನ್ನು ಕೈಗಳಿಗೆ ತೆಗೆದುಕೊಂಡು, ಚುಡಾಯಿಸಿದ ವ್ಯಕ್ತಿಯ ತಲೆ-ಮುಖಕ್ಕೆಲ್ಲ ರಪರಪನೇ ಹೊಡೆದಿದ್ದಾಳೆ. ವಿಡಿಯೋ ಕೂಡ ವ್ಯಾಪಕವಾಗಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ಓರೈ ಎಂಬಲ್ಲಿ ಘಟನೆ ನಡೆದಿದೆ. ‘ಹುಡುಗಿಯೊಬ್ಬಳು ರಸ್ತೆಯ ಮೇಲೆ ಹೋಗುತ್ತಿದ್ದಳು. ಕಂಠಮಟ್ಟ ಕುಡಿದುಕೊಂಡಿದ್ದ ಈ ವ್ಯಕ್ತಿ ಅಲ್ಲೇ ರಸ್ತೆಬದಿಯಲ್ಲಿ ಕುಳಿತು ಆಕೆಯನ್ನು ಅಶ್ಲೀಲವಾಗಿ ಚುಡಾಯಿಸಿದ್ದ. ಹುಡುಗಿ ಅದಕ್ಕೆಲ್ಲ ಹೆದರದೆ, ಕಾಲಲ್ಲಿದ್ದ ಚಪ್ಪಲಿಯನ್ನು ಕೈಯಿಗೆ ತೆಗೆದುಕೊಂಡು, ಆತನಿಗೆ ಹೊಡೆದಿದ್ದಾಳೆ. ಬಿಳಿ ಬಣ್ಣದ ಚಪ್ಪಲಿಯಲ್ಲಿ ಅವನಿಗೆ ಥಳಿಸಿದ್ದಾಳೆ. ಆ ವ್ಯಕ್ತಿಯೋ ಕುಕ್ಕರಗಾಲಿನಲ್ಲಿ, ತಲೆತಗ್ಗಿಸಿ ಕುಳಿತು ಅಷ್ಟೂ ಹೊಡೆತ ತಿಂದಿದ್ದಾನೆ. ತಪ್ಪಿಸಿಕೊಳ್ಳುವ ಸಣ್ಣ ಯತ್ನವನ್ನೂ ಮಾಡಲಿಲ್ಲ. ಈ ಗಲಾಟೆ ನೋಡಿ ಅಲ್ಲಿಗೆ ಬಂದ ಸ್ಥಳೀಯರು ನಂತರ ಅವನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ’ ಎಂದು ಹೇಳಲಾಗಿದೆ.
ವಿಡಿಯೋ ನೋಡಿದ ನೆಟ್ಟಿಗರು ಹುಡುಗಿಯ ಧೈರ್ಯವನ್ನು ಹೊಗಳಿದ್ದಾರೆ. ‘ಕಿರುಕುಳ ನೀಡುವವರಿಗೆ ಹೀಗೇ ಮಾಡಬೇಕು. ಅವರನ್ನೆಲ್ಲ ಹೊಡೆದು ಕೊಲ್ಲಬೇಕು’ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ‘ಆ ವ್ಯಕ್ತಿಗೆ ಹುಡುಗಿ ತಕ್ಕ ಪಾಠವನ್ನೇ ಕಲಿಸಿದ್ದಾಳೆ. ಪ್ರತಿಯೊಬ್ಬ ಹುಡುಗಿಯೂ ಇಂಥ ಧೈರ್ಯವನ್ನು ತೋರಬೇಕು. ಆಗಲೇ ಅತ್ಯಾಚಾರ, ದೌರ್ಜನ್ಯಗಳೆಲ್ಲ ಕೊನೆಗಾಣುತ್ತವೆ’ ಎಂದು ಇನ್ನೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: Viral Video | ಅದ್ಯಾಕೆ ಈ ಚಿರತೆ ನೆಲಕ್ಕೆ ಹಾರದೇ ತೆಂಗಿನ ಮರದ ಮೇಲೆ ಇಷ್ಟು ವೇಗವಾಗಿ ಓಡಿತು?!