Site icon Vistara News

Viral Video| ವೈರ್​ ಆ ಕಡೆ ಬಂತಾ?- ಪರಿಶೀಲನೆ ಮಾಡಿದ ಎಲೆಕ್ಟ್ರಿಷಿಯನ್​ ಬೆಕ್ಕು ಇದು!

Cat Video

ಬೆಕ್ಕುಗಳಿಗೆ ಮುದ್ದು, ಸೊಕ್ಕು-ತುಂಟಾಟ ಎಲ್ಲವೂ ಜಾಸ್ತಿ. ಮಡಿಲಲ್ಲಿ ಬಂದು ಬೆಚ್ಚಗೆ ಮಲಗುತ್ತವೆ. ನಮ್ಮ ಹಿಂದೆ-ಮುಂದೆ ಸುತ್ತುತ್ತ, ಆಟವಾಡುತ್ತಿರುತ್ತವೆ. ಸರಿಯಾದ ಟೈಮಿಗೆ ತಿಂಡಿ ಕೊಡದೆ ಇದ್ದರೆ ಮಿಯಾಂವ್​ ಎಂದು ಕೂಗುತ್ತ ಬೆನ್ನುಬೀಳುತ್ತವೆ. ನಮ್ಮ ಮಾತುಗಳನ್ನು ಕೇಳಿ ಅರ್ಥ ಮಾಡಿಕೊಳ್ಳುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬೆಕ್ಕುಗಳಿಗೆ ಕುತೂಹಲ ಜಾಸ್ತಿ. ಒಂದು ಕಿಂಡಿ ಕಂಡರೆ ಅದರಲ್ಲಿ ಮೂತಿ ತೂರಿಸುತ್ತದೆ, ಒಂದು ಬಾಲ್​​ ಸಿಕ್ಕರೆ, ಸುಮ್ಮನೆ ಅದನ್ನು ಕಾಲಿನಿಂದ ಒದ್ದು ನೋಡುತ್ತವೆ..ಹೀಗೆ ಮನೆಯಲ್ಲಿ ಬೆಕ್ಕುಗಳಿದ್ದರೆ ಅವುಗಳ ಆಟ-ಹಾವ-ಭಾವ-ವಿನೋದ-ನಮಗೆ ಸ್ಪಂದಿಸುವ ರೀತಿಯನ್ನು ನೋಡುವುದೇ ಒಂದು ಆನಂದ.

ಇಲ್ನೋಡಿ, ಇಲ್ಲೊಂದು ಬೆಕ್ಕು ಎಲ್ಲವನ್ನೂ ಬಿಟ್ಟು ತುಂಬ ಸೀರಿಯಸ್​ ಆಗಿ ಎಲೆಕ್ಟ್ರಿಷಿಯನ್ (ವಿದ್ಯುತ್​ ಕೆಲಸಗಾರ) ಕೆಲಸ ಮಾಡುತ್ತಿದೆ. Madeyousmile ಎಂಬ ಟ್ವಿಟರ್​ ಅಕೌಂಟ್​​ನಲ್ಲಿ ವಿಡಿಯೊ ಶೇರ್​ ಮಾಡಲಾಗಿದೆ. ಅದರಲ್ಲಿ ಎಲೆಕ್ಟ್ರಿಷಿಯನ್​ವೊಬ್ಬ ಮನೆಯ ಸೀಲಿಂಗ್​​ಗೆ ಅದೇನೋ ವೈರ್ ಫಿಕ್ಸ್ ಮಾಡುತ್ತಿದ್ದರೆ, ಅವನ ಮುದ್ದಿನ ಬೆಕ್ಕು ಕೂಡ ತಾನೂ ಸಹಾಯಕ್ಕೆ ಮುಂದಾಗಿದೆ. ಮೊದಲು ಮುಂದಿನ ಎರಡು ಕಾಲನ್ನು ಮೇಲೆತ್ತಿ ಸೀಲಿಂಗ್​ನ್ನು ನೋಡುತ್ತದೆ. ಬಳಿಕ ಮುಂದೆ ಬಾಗಿ, ಆ ವೈರ್​ನ್ನು ತನ್ನ ಮುಂದಿನ ಕಾಲಲ್ಲಿ ನಾಜೂಕಾಗಿ ಮುಟ್ಟಿ, ಪರಿಶೀಲನೆ ಮಾಡುತ್ತದೆ. ಅದೆಷ್ಟು ಸೀರಿಯಸ್​ ಆಗಿ ಈ ಕೆಲಸ ಮಾಡುತ್ತದೆ ಎಂಬುದನ್ನು ವಿಡಿಯೊದಲ್ಲಿಯೇ ನೋಡಬೇಕು.

ನವೆಂಬರ್​ 25ರಂದು ಶೇರ್​ ಆದ ವಿಡಿಯೊಕ್ಕೆ ಇಲ್ಲಿಯವರೆಗೆ 1.3 ಮಿಲಿಯನ್​ ವೀವ್ಸ್​ ಬಂದಿದೆ. ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್​ ಮಾಡಿದ್ದಾರೆ. 20 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್​ ಮಾಡಲಾಗಿದೆ. ನೆಟ್ಟಿಗರಂತೂ ಸಖತ್​ ಫನ್ನಿಯಾಗಿ ಕಮೆಂಟ್​ ಮಾಡಿದ್ದಾರೆ. ‘ಬೆಕ್ಕು ತಾನು ನಿಜಕ್ಕೂ ಎಲೆಕ್ಟ್ರಿಷಿಯನ್​ ಎಂದುಕೊಂಡಂತೆ ಇದೆ. ‘ಅದೆಷ್ಟು ಸೀರಿಯಸ್​ ಆಗಿ ಕೆಲಸ ಮಾಡುತ್ತಿದೆ’ ‘ಆ ಬೆಕ್ಕನ್ನು ನೋಡೋಕೆ ಎಷ್ಟು ಖುಷಿಯಾಗತ್ತೆ’ ಎಂಬಿತ್ಯಾದಿ ಕಮೆಂಟ್​ಗಳನ್ನು ಬರೆದಿದ್ದಾರೆ.

ಇದನ್ನೂ ಓದಿ: Viral Video| ಡ್ರೈವರ್​ ಸೀಟ್​​ನಲ್ಲಿ ಕುಳಿತುಕೊಳ್ಳದೆ, 18 ಚಕ್ರದ ಬೃಹತ್​ ಟ್ರಕ್​​ನ್ನು ಪಾರ್ಕ್​ ಮಾಡಿದ ಚಾಲಕ!

Exit mobile version