Site icon Vistara News

Viral Video: ನೆಲವ ಬಿಟ್ಟು ನೀರ ಮೇಲೆ ನಡೆದ ಜೇಡ; ಮೂಗಿನ ಮೇಲೆ ಬೆರಳಿಟ್ಟ ನೆಟ್ಟಿಗರು

spider

spider

ನವ ದೆಹಲಿ: ಈ ಜಗತ್ತು ಅನೇಕ ವಿಸ್ಮಯಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿದೆ. ಕೆಲವೊಂದು ವಿಚಾರಗಳು ನಮ್ಮ ಊಹೆಗೂ ಮೀರಿ ಘಟಿಸುತ್ತವೆ. ಆಗ ಇವು ನಮ್ಮಲ್ಲಿ ಕುತೂಹಲ ಹುಟ್ಟಿಸುತ್ತವೆ. ಅಂತಹದ್ದೇ ಒಂದು ಆಸಕ್ತಿದಾಯಕ ವಿಡಿಯೊವೊಂದು ಇದೀಗ ವೈರಲ್‌ (Viral Video) ಆಗಿದೆ. ಗೋಡೆ ಮೇಲೆ ಓಡಾಡುವ ಜೇಡ (Spider) ನೀರ ಮೇಲೆಯೂ ನಡೆಯುತ್ತದೆ ಎಂದರೆ ನೀವು ನಂಬುತ್ತೀರಾ? ಈ ವಿಡಿಯೊ ನೋಡಿದ ಮೇಲೆ ಅಚ್ಚರಿಯಿಂದ ನಿಮ್ಮ ಹುಬ್ಬೇರುವುದು ಖಂಡಿತ. ನೀರ ಮೇಲೆ ಜೇಡ ಸರಾಗವಾಗಿ ನಡೆಯುವ ಈ ವಿಡಿಯೊವನ್ನು ಈಗಾಗಲೇ 3 ಲಕ್ಷಕ್ಕಿತಂತ ಅಧಿಕ ಮಂದಿ ವೀಕ್ಷಿಸಿದ್ದಾರೆ.

‘ಫಿಸಿಕ್ಸ್‌ ಲವರ್ಸ್‌’ ಎನ್ನುವ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಈ ‘ನಂಬಲಾಸಾಧ್ಯ ‘ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ನೆಲದ ಮೇಲೆ ನಡೆಯುವಂತೆ ಸರಾಗವಾಗಿ ನೀರ ಮೇಲೆಯೂ ಜೇಡ ನಡೆಯುತ್ತಿದೆ. ಅದರ ಮೊದಲ 3 ಕಾಲುಗಳು ಪೆಡಲ್‌ನಂತೆ ಕೆಲಸ ಮಾಡುತ್ತವೆ ಮತ್ತು ನೀರನ್ನು ಹಿಂದಕ್ಕೆ ತಳ್ಳಿ ಮುಂದಕ್ಕೆ ನಡೆಯಲು ನೆರವಾಗುತ್ತವೆ.

ʼಟರಂಟುಲಾ ಜೇಡಗಳು ತಮ್ಮ ಕಾಲುಗಳ ಮೇಲೆ ಹೈಡ್ರೋಫೋಬಿಕ್ ಕೂದಲಿನ ದಪ್ಪ ಪದರವನ್ನು ಹೊಂದಿದೆ. ಅದು ನೀರನ್ನು ಹಿಮ್ಮೆಟ್ಟಿಸುತ್ತದೆ. ಅಲ್ಲದೆ ಇದು ಮುಳುಗದೆ ನೀರಿನ ಮೇಲೆ ನಡೆಯಲು ಅವಕಾಶ ಮಾಡಿ ಕೊಡುತ್ತದೆʼ ಎಂದು ವಿಡಿಯೊದೊಂದಿಗೆ ವಿವರಣೆ ನೀಡಲಾಗಿದೆ.

ನೆಟ್ಟಗರ ಪ್ರತಿಕ್ರಿಯೆ ಏನು?

ಈ ವಿಡಿಯೊವನ್ನು ಕುತೂಹಲದಿಂದ ವೀಕ್ಷಿಸಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹಲವರು ಕಮೆಂಟ್‌ ಮೂಲಕ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ʼʼಹಾಗಾದರೆ ಇನ್ನು ಸ್ಪೈಡರ್‌ ಮ್ಯಾನ್‌ ನೀರ ಮೇಲೆ ನಡೆಯಬಹುದೇ?ʼʼ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ʼʼಹೊಸದೊಂದು ಭಯ ಆರಂಭವಾಗಿದೆ ಎಂದಿದ್ದಾರೆʼʼ ಮತ್ತೊಬ್ಬರು. ʼʼಇದೊಂದು ಅ‍ದ್ಭುತʼʼ ಎನ್ನುವ ಉದ್ಗಾರ ಮಗದೊಬ್ಬರದ್ದು. ʼʼಈ ಕಾರಣಕ್ಕಾಗಿ ನಾನು ಜೇಡವಾಗಿ ಬದಲಾಗಬೇಕಿದೆʼʼ ಎನ್ನುವ ಬಯಕೆ ಮತ್ತೊಬ್ಬರದ್ದು. ʼʼಜೇಡನ ಅಪ್‌ಡೇಟ್‌ ವರ್ಷನ್‌ ಬಂದಿದೆʼʼ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಇನ್ನೆಂದೂ ಈಜಲು ಹೋಗಲಾರೆʼʼ ಎನ್ನುವ ಪ್ರತಿಜ್ಞೆ ಮಾಡಿದ್ದಾರೆ ವಿಡಿಯೊ ವೀಕ್ಷಿಸಿದವರೊಬ್ಬರು. ʼʼಇವು ಬೆಂಕಿಯಲ್ಲೂ ನಡೆಯಬಹುದೇ?ʼʼ ಎನ್ನುವ ಕುತೂಹಲ ಇನ್ನೊಬ್ಬರದ್ದು. ʼʼಮುಂದಿನ ಸ್ಪೈಡರ್‌ ಮ್ಯಾನ್‌ ಚಿತ್ರದಲ್ಲಿ ಈ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದುʼʼ ಎಂಬ ಯೋಚನೆ ಸಿನಿಮಾ ಪ್ರೇಮಿಯದ್ದು. ʼʼಇದು ಫೇಕ್‌ ವಿಡಿಯೊ ಎಂದು ಮೊದಲು ಭಾವಿಸಿದ್ದೆ. ಬಳಿಕ ನಿಜ ತಿಳಿಯಿತುʼʼ ಎಂದಿದ್ದಾರೆ ಮತ್ತೊಬ್ಬರು. ʼʼಕೆಲವು ಹೊತ್ತಲ್ಲಿ ಇವು ಏಡಿಯಾಗಿ ಬದಲಾಗುತ್ತವೆʼʼ ಎನ್ನುವ ವಿವರಣೆ ಮತ್ತೊಬ್ಬ ನೋಡುಗರದ್ದು. ಹಲವರು ಇದನ್ನು ದೇವರ ಅದ್ಭುತ ಸೃಷ್ಟಿ ಎಂದೇ ಬಣ್ಣಿಸಿದ್ದಾರೆ. ಒಟ್ಟಿನಲ್ಲಿ ಈ ಪುಟ್ಟ ವಿಡಿಯೊ ಬಹು ದೊಡ್ಡ ಸಂಚಲನವನ್ನೇ ಉಂಟು ಮಾಡಿದೆ.

ಇದನ್ನೂ ಓದಿ: Viral Video: ಮೈದಾನದಲ್ಲೇ ರವೂಫ್ ಕೆನ್ನೆಗೆ ಬಾರಿಸಿದ ನಾಯಕ ಬಾಬರ್​ ಅಜಂ

ಟರಂಟುಲಾ ಜೇಡಗಳು ಅಪಾಯಕಾರಿಯೇ?

ಮೊದಲ ನೋಟದಲ್ಲೇ ಭಯ ಹುಟ್ಟಿಸುವ ಟರಂಟುಲಾ ಜೇಡಗಳು ಅಪಾಯಕಾರಿ ಏನಲ್ಲ. ಆದರೆ ಇವು ಕಡಿದರೆ ಕಿರಿಕಿರಿಯ ಅನುಭವವಾಗುತ್ತದೆ. ಜೇನು ನೊಣ ಕಡಿದಾಗ ಅನುಭವಕ್ಕೆ ಬರುವ ನೋವಿನಿಂದ ಕಡಿಮೆ ನೋವು ಈ ಜೇಡದ ಕಡಿತದಿಂದ ಆಗುತ್ತದೆ ಎಂದು ತಜ್ಞರು ಹೇಳುತ್ತಾರೆ.

Exit mobile version