ರಸ್ತೆ ನಿರ್ಮಾಣ ಮಾಡಿ ಒಂದೆರಡು ದಿನದಲ್ಲೇ ಆ ಹೊಸ ರಸ್ತೆಗೆ ಹಾಕಿದ್ದ ಸಿಮೆಂಟ್, ಜಲ್ಲಿ-ಕಲ್ಲು, ಟಾರ್ಗಳೆಲ್ಲ ಕಿತ್ತು ಬರುವುದನ್ನು ನಾವು ನೋಡುತ್ತಿರುತ್ತೇವೆ, ಹಾಗೇ, ಆ ರಸ್ತೆ ನಿರ್ಮಾಣ ಮಾಡಿದ, ಮಾಡಿಸಿದವರಿಗೆ ಹಿಡಿಶಾಪ ಹಾಕುತ್ತ, ಇದೆಂಥಾ ಕಳಪೆ ಕಾಮಗಾರಿ ಎನ್ನುತ್ತ ಅದೇ ರಸ್ತೆಯಲ್ಲೇ ಓಡಾಡುತ್ತಿರುತ್ತೇವೆ. ಆದರೆ ಇಲ್ಲೊಂದು ವಿಡಿಯೊ ವೈರಲ್ ಆಗಿದೆ ನೋಡಿ. ಮಹಾರಾಷ್ಟ್ರದ ಹಳ್ಳಿಯೊಂದರ ಜನರು, ಹೊಸದಾಗಿ ನಿರ್ಮಾಣವಾದ ರಸ್ತೆಯನ್ನು (Newly Made Road) ತಮ್ಮ ಕೈಗಳಿಂದಲೇ ಹಿಡಿದು, ಎತ್ತಿ ತೋರಿಸಿದ್ದಾರೆ. ನಾಲ್ಕೈದು ಜನರು ಸೇರಿ ರಸ್ತೆಯನ್ನು ಒಂದು ಬದಿಯಿಂದ ಥೇಟ್ ಕಾರ್ಪೆಟ್ ಎತ್ತಿದಂತೆ ಕೈಯಲ್ಲಿ ಎತ್ತಿ ಹಿಡಿಯುವುದನ್ನು 38 ಸೆಕೆಂಡ್ಗಳ ವಿಡಿಯೊ ಕ್ಲಿಪ್ನಲ್ಲಿ ನೋಡಬಹುದು.
ಈ ರಸ್ತೆ ನಿರ್ಮಾಣದ ಗುತ್ತಿಗೆದಾರನಿಗೆ ಬೈಯುತ್ತಲ್ಲೇ ಹಳ್ಳಗರು ಹೊಸ ರಸ್ತೆಯನ್ನು ಕೈಯಲ್ಲಿ ಎತ್ತಿಹಿಡಿದಿದ್ದಾರೆ. ಟಾರ್ ಹಾಕುವುದಕ್ಕೂ ಮೊದಲು ಕಾರ್ಪೆಟ್ನಂಥ ಏನನ್ನೋ ಅಡಿಯಲ್ಲಿ ಹಾಕಿದ್ದು ಕಾಣಿಸುತ್ತದೆ. ಗುತ್ತಿಗೆದಾರನ ಹೆಸರು ರಾಣಾ ಠಾಕೂರ್ ಎಂದು ಅವರು ಹೇಳುತ್ತಿರುವುದು ಕೇಳುತ್ತದೆ. ಅಷ್ಟೇ ಅಲ್ಲ, ಇದು ಬೋಗಸ್ ಕೆಲಸ ಎಂದು ಹಳ್ಳಿಯ ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಅಂದಹಾಗೇ ಈ ರಸ್ತೆ ನಿರ್ಮಾಣವಾಗಿದ್ದು ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಅಂಬಾಡ್ ತಾಲೂಕಿನ ಖರ್ಜತ್-ಹಸ್ತ್ ಪೊಖಾರಿ ಎಂಬಲ್ಲಿ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಇದನ್ನು ನಿರ್ಮಿಸಲಾಗಿತ್ತು. ಜರ್ಮನ್ ತಂತ್ರಜ್ಞಾನ ಬಳಸಿ ರಸ್ತೆ ನಿರ್ಮಾಣ ಮಾಡುತ್ತಿರುವುದಾಗಿ ಗುತ್ತಿಗೆದಾರ ಹೇಳಿಕೊಂಡಿದ್ದ. ಆದರೆ ಈಗ ನೋಡಿದರೆ ಪೂರ್ತಿಯಾಗಿ ಕಳಪೆ ಕಾಮಗಾರಿ ಮಾಡಿದ್ದಾನೆಂದು ಸ್ಥಳೀಯರು ದೂರಿದ್ದಾರೆ. ಇಂಜಿನಿಯರ್, ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.
When Kaleen Bhaiya ventures into Road construction 😂😂 The contractor made a fake road— with carpet as a base! #Maharashtra #India #Wednesdayvibe pic.twitter.com/6MpHaL5V6x
— Rohit Sharma 🇺🇸🇮🇳 (@DcWalaDesi) May 31, 2023