ಟೊಮ್ಯಾಟೊ ಬೆಲೆ (Tomato Price) ವಿಪರೀತ ಏರಿಕೆಯಾಗುತ್ತಿದೆ. 20 ರೂಪಾಯಿಗೆಲ್ಲ ಒಂದು ಕೆಜಿ ಟೊಮ್ಯಾಟೊ ಸಿಗುತ್ತಿತ್ತು. ಆದರೆ ಈಗ ಕೆಜಿಗೆ 120-150 ರೂಪಾಯಿಗೆ ಟೊಮ್ಯಾಟೊ ಮಾರಾಟವಾಗುತ್ತಿದೆ. ಟೊಮ್ಯಾಟೊ ಬೆಳೆಗಾರರಿಗೆ ಇದು ಬಂಪರ್. ಆದರೆ ಗ್ರಾಹಕರಿಗೆ ಹೊರೆಯಾಗಿದ್ದಂತೂ ನಿಜ. ಹೀಗೆಲ್ಲ ಇರುವಾಗ ದೇಶಾದ್ಯಂತ ಈ ಕೆಂಪು ಸುಂದರಿಯ ಸುತ್ತಮುತ್ತಲೂ ಹಲವು ಸುದ್ದಿಗಳು ಹುಟ್ಟಿಕೊಳ್ಳುತ್ತಿವೆ. ಟೊಮ್ಯಾಟೊ ಮಾರುಕಟ್ಟೆಯಲ್ಲಿ ಸಿಸಿಟಿವಿ ಅಳವಡಿಸಿದ್ದು, ಟೊಮ್ಯಾಟೊ ಅಂಗಡಿ ಇಟ್ಟವ ರಕ್ಷಣೆಗಾಗಿ ಬೌನ್ಸರ್ಗಳನ್ನು ನೇಮಿಸಿಕೊಂಡಿದ್ದು, ಟೊಮ್ಯಾಟೊ ಕಳವಿನ ಪ್ರಕರಣಗಳು ಜಾಸ್ತಿಯಾಗಿದ್ದು, ಅಷ್ಟೇ ಅಲ್ಲ, ಆಂಧ್ರಪ್ರದೇಶದಲ್ಲಿ ಟೊಮ್ಯಾಟೊ ಬೆಳೆದು 30 ಲಕ್ಷ ರೂಪಾಯಿ ಸಂಪಾದಿಸಿದ ರೈತನೊಬ್ಬನ ಹತ್ಯೆಯೇ ಆಗಿದೆ. ಟೊಮ್ಯಾಟೊಕ್ಕೆ ಸಂಬಂಧಿಸಿದ ವಿವಿಧ ವಿಚಿತ್ರ ಸುದ್ದಿಗಳು-ವಿಡಿಯೊಗಳೂ ವೈರಲ್ (Viral Video) ಆಗುತ್ತಿವೆ.
ಟೊಮ್ಯಾಟೊ ಬೆಲೆ ಏರಿಕೆ ಮಧ್ಯೆಯೇ ಇಂಟರ್ನೆಟ್ನಲ್ಲಿ ವಿವಿಧ ಮೀಮ್ಸ್ಗಳು ಹರಿದಾಡುತ್ತಿವೆ. ಜೋಕ್ಗಳಿಗೆ, ಟೊಮ್ಯಾಟೊ ಬೆಲೆಯನ್ನು ಅಣುಕಿಸುವ ಪೋಸ್ಟರ್ಗಳಿಗೆ ಲೆಕ್ಕವಿಲ್ಲ. ಆದರೆ ಈಗೊಂದು ವಿಡಿಯೊ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನಸಿಗೆ ಮುದ ನೀಡಿದೆ. ಟೊಮ್ಯಾಟೊ ಹಣ್ಣಿರುವ ಬುಟ್ಟಿಯ ಬಳಿ ಒಂದು ಬೃಹತ್ ಗಾತ್ರದ ಕಾಳಿಂಗ ಸರ್ಪ ಹೆಡೆಯೆತ್ತಿ ಕುಳಿತ ವಿಡಿಯೊ ಇದು. ತನ್ನ ತಲೆಯನ್ನು ಮಾತ್ರ ಅಲ್ಲಾಡಿಸುತ್ತ, ನಾಲಿಗೆಯನ್ನು ಒಳಗೂ-ಹೊರಗೂ ಚಾಚುತ್ತ ಅದು ಟೊಮ್ಯಾಟೊ ಹಣ್ಣಿನ ಬಳಿ ಕುಳಿತಿದೆ. ಅದು ತುಂಬ ಆಕ್ರಮಣಕಾರಿಯಾಗಿ ವರ್ತಿಸುತ್ತಿದೆ. ನಿಧಿ ಕಾವಲಿಗೆ ಕಾಳಿಂಗ ಸರ್ಪಗಳು ಇರುತ್ತವೆ ಎಂಬ ಮಾತಿದೆ. ಹಾಗೇ, ಇದೀಗ ವಿಪರೀತ ಬೆಲೆ ಏರಿಕೆಯಾಗಿ ಅತ್ಯಮೂಲ್ಯ ಎನ್ನಿಸಿರುವ ಟೊಮ್ಯಾಟೊಕ್ಕೂ ಕಾಳಿಂಗ ಸರ್ಪದ ಕಾವಲು ಇರುವಂತೆ ಭಾಸವಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಸಿಕ್ಕಾಪಟೆ ವೈರಲ್ ಆಗುತ್ತಿದೆ. ನೆಟ್ಟಿಗರಂತೂ ಇದನ್ನು ನೋಡಿ ಫುಲ್ ಎಂಜಾಯ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Tomato Price: ಟೊಮ್ಯಾಟೊ ಬೆಳೆದು 30 ಲಕ್ಷ ರೂ. ಸಂಪಾದಿಸಿದ ರೈತನ ಬರ್ಬರ ಹತ್ಯೆ
ಈ ವಿಡಿಯೊವನ್ನು Mirza Md Arif ಎಂಬ ಇನ್ಸ್ಟಾಗ್ರಾಂ ಪೇಜ್ನಲ್ಲಿ ಪೋಸ್ಟ್ ಮಾಡಲಾಗಿದೆ. ಹಾಗೇ, ಟೊಮ್ಯಾಟೊಗಳು ಈಗ ನಿಧಿಯಂತೆ ಅತ್ಯಮೂಲ್ಯ. ಹೀಗಾಗಿ ಹಾವು ಅದರ ಕಾವಲಿಗೆ ಇದೆ ಎಂದು ಕ್ಯಾಪ್ಷನ್ ಬರೆದಿದ್ದಾರೆ. ಇದು ಎಲ್ಲಿಯ ವಿಡಿಯೊ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಬಳಿಕ ಹಾವನ್ನು ಹಿಡಿದು, ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾಗಿ ವರದಿಯಾಗಿದೆ.