Site icon Vistara News

Viral News: 101ನೇ ವಯಸ್ಸಿಗೆ ಡಿಪ್ಲೊಮಾ ಪದವಿ, ಅಜ್ಜನ ಕನಸು ನನಸಾಗಿಸಿದ ಮಕ್ಕಳು!

Merrill Pittman Cooper man who gets diploma in 101

ವಿದ್ಯೆಗೆ ವಯಸ್ಸಿನ ಹಂಗಿಲ್ಲ ಎಂಬ ಮಾತಿದೆ. ಆದರೆ ಈ ಅಜ್ಜ ಮಾತ್ರ 101ರ ವಯಸ್ಸಿನಲ್ಲೊಂದು ಡಿಪ್ಲೊಮಾ ಪಡೆಯುವ ಮೂಲಕ ಎಲ್ಲರನ್ನು ಚಕಿತರನ್ನಾಗಿಸಿದ್ದಾರೆ! 101ರವರೆಗೂ ಬದುಕುವುದೇ ಹೆಚ್ಚು ಎಂಬ ಸ್ಥಿತಿಯಿರುವಾಗ ಈ ಅಜ್ಜ 80 ವರ್ಷಗಳಿಂದ ಮಾಡಬೇಕೆಂದಿದ್ದ ತನ್ನ ಕನಸನ್ನು ಈಗ ನನಸಾಗಿಸಿಕೊಂಡಿದ್ದಾನೆ!

ನ್ಯೂಜೆರ್ಸಿಯ ಮೆರ್ರಿಲ್‌ ಪಿಟ್‌ಮ್ಯಾನ್‌ ಕೂಪರ್‌ ಎಂಬ ಹೆಸರಿನ ಅಜ್ಜನಿಗೆ ಈಗ ಬರೋಬ್ಬರಿ 101 ವಯಸ್ಸು. ಈ ವಯಸ್ಸಿಗೆ ಸಣ್ಣ ವಯಸ್ಸಿನವರನ್ನೂ ನಾಚಿಸುಚಂತೆ ಗಟ್ಟಿಮುಟ್ಟಾಗಿದ್ದಾನೆ! ಆದರೆ, ತಾನೊಂದು ಹೈಸ್ಕೂಲ್‌ ಡಿಪ್ಲೋಮಾ ಆದರೂ ಪಡೆಯಬೇಕೆಂಬುದು ಆತನ ಕನಸಾಗಿತ್ತು. ಈಗ ಕೊನೆಗೂ ಅಜ್ಜ ತನ್ನ ಕನಸನ್ನು ನನಸಾಗಿಸಿದ ಖುಷಿಯಲ್ಲಿದ್ದಾನೆ. ಈತನ ಖುಷಿಗಾಗಿ ಈತನ ಕುಟುಂಬಸ್ಥರು ಪದವಿ ಪ್ರದಾನ ಸಮಾರಂಭವೊಂದನ್ನೂ ಏರ್ಪಡಿಸಿ ಅಲ್ಲಿ ಪದಕ ಹೆಗಲಿಗೇರಿಸಿ ಪ್ರಮಾಣ ಪತ್ರ ಹಿಡಿದು ಹೆಮ್ಮೆಯಿಂದ ಕೋಟು ಹಾಕಿಸಿ ಕ್ಯಾಮರಾಕ್ಕೆ ಪೋಸು ಕೊಟ್ಟು ಖುಷಿಯಾಗಿಸಿದ್ದಾರೆ.

1930ರ ಆಸುಪಾಸಿನಲ್ಲಿ ಶಾಲೆಗೆ ಹೋಗುತ್ತಿದ್ದ ಈ ಅಜ್ಜ, ಹಲವು ಕೌಟುಂಬಿಕ ಸಮಸ್ಯೆಗಳ ಕಾರಣದಿಂದ ಶಾಲೆಯನ್ನು ಅರ್ಧಕ್ಕೇ ಬಿಡಬೇಕಾಯ್ತು. ಎಂಟನೇ ತರಗತಿಯವರೆಗಷ್ಟೇ ಓದಲು ಸಾಧ್ಯವಾಗಿದ್ದ ಈತನಿಗೆ ಹೆಚ್ಚು ಬಾಧಿಸಿದ್ದು ವರ್ಣಭೇದ. ಕರಿಯನಾಗಿದ್ದ ಈತನಿಗೆ ವಿದ್ಯಾಭ್ಯಾಸ ಸಿಗುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ, 1934ರಿಂದ ೩೮ರವರೆಗೆ ಈತ ಕಷ್ಟಪಟ್ಟು ಕಾಲೇಜೂ ಕೂಡಾ ಓದುವಲ್ಲಿ ಸಫಲನೂ ಆಗಿದ್ದ. ಆಗ ಈತನ ಅಮ್ಮ, ಹಲವು ಮನೆಗಳಲ್ಲಿ ಕೆಲಸ ಮಾಡಿ ಸಂಪಾದಿಸುತ್ತಿದ್ದ ಹಣವನ್ನು ಮಗನ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡುತ್ತಿದ್ದಳು. ಆದರೆ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅದು ಸಾಲುವಂತಿರಲಿಲ್ಲ. ಹೀಗಾಗಿ ಅವರು ಫಿಲಿಡೆಲ್ಫಿಯಾಗೆ ಸ್ಥಳಾಂತರ ಹೊಂದಿದರು. ಆದರೆ ವಿದ್ಯಾಭ್ಯಾಸಕ್ಕೆಂದು ಇಲ್ಲಿಗೆ  ಬಂದರೂ, ಅಮ್ಮ ಕಷ್ಟ ಪಟ್ಟು ದುಡಿದರೂ, ಶಿಕ್ಷಣಕ್ಕೆ ಅದು ಸಾಕಾಗುತ್ತಿಲ್ಲವೆಂದು ಈತನಿಗೆ ಅರಿವಾಗಲು ಶುರುವಾಗಿದ್ದೇ ಈತ ಶಾಲೆ ಬಿಟ್ಟ. ಹಾಗೂ 1945ರಲ್ಲಿ ಕಾರ್‌ ಆಪರೇಟರ್‌ ಆಗಿ ಕೆಲಸಕ್ಕೆ ಸೇರಿಕೊಂಡ. ಈ ಕೆಲಸದಿಂದ ಸಾಕಷ್ಟು ಪದೋನ್ನತಿಗಳಾಗಿ, ಹಲವಾರು ಸ್ಥಳೀಯ ಸಂಘ ಸಂಸ್ಥೆಗಳ ಅಧ್ಯಕ್ಷನೂ ಆದ ಸಮಾಜಮುಖಿ ಕೆಲಸಗಳನ್ನೂ ಮಾಡಿದ. ಆದರೆ, ಜೀವನ ಈತನಿಗೆ ಎಲ್ಲವನ್ನೂ ಕೊಟ್ಟರೂ, ತನ್ನ ಡಿಪ್ಲೊಮಾ ಮಾತ್ರ ಪೂರ್ಣಗೊಳಿಸಲಾಗಲಿಲ್ಲವಲ್ಲ ಎಂಬ ಕೊರಗು ಈತನನ್ನು ಯಾವಾಗಲೂ ಕಾಡುತ್ತಿತ್ತು.

ಹೀಗೆ ಕಾಲ ಉರುಳಿತು. ಬದುಕಿನ ಜವಾಬ್ದಾರಿಗಳೆಡೆಯಲ್ಲೆಲ್ಲೋ ಮೂಲೆಯಲ್ಲಿ ಕನಸು ಮುಚ್ಚಿ ಹೋಯಿತು. ಆದರೂ ಬಹಳಷ್ಟು ಬಾರಿ ಆ ನೆನಪು ಮಾತ್ರ ಅವರನ್ನು ಕಾಡುತ್ತಿತ್ತು. ಆದರೆ ಇನ್ನು ಓದುವುದು ಹಾಗೂ ಡಿಪ್ಲೊಮಾ ಪಡೆಯುವುದು ಮಾತ್ರ ಆಗದ ಮಾತು ಎಂದು ಅನ್ನಿಸಿ ಆ ಕೆಲಸಕ್ಕೆ ಕೈ ಹಾಕಿರಲಿಲ್ಲ. ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿದ ಕೂಪರ್‌ ಅವರ ಈ ಕೈಗೂಡದ ಕನಸಿನ ಬಗ್ಗೆ ಮೊದಲೇ ಅರಿವಿದ್ದ ಈತನ ಕುಟುಂಬಸ್ಥರು ಈತನಿಗೆ ಸರ್‌ಪ್ರೈಸ್‌ ಆಗಿ ಈತನದೇ ಶಾಲೆಯಲ್ಲಿ ಗೌರವ ಡಿಪ್ಲೋಮಾ ಪದವಿ ದೊರೆಯುವಂತೆ ಮಾಡಿದ್ದಾರೆ. ಅದೂ 101ನೇ ವಯಸ್ಸಿನಲ್ಲಿ!

80 ವರ್ಷಗಳ ನಂತರ ಇದೀಗ ಕಳೆದ ಎಪ್ರಿಲ್‌ ತಿಂಗಳಲ್ಲಿ ಮಕ್ಕಳು, ಮೊಮ್ಮಕ್ಕಳು ತನ್ನದೇ ಶಾಲೆಯ ಸ್ಟೇಜ್‌ ಮೇಲೆ ಬರುವಂತೆ ಮಾಡಿದಾಗ ಕೂಪರ್‌ ಕಣ್ಣು ತುಂಬಿ ಬಂದಿತ್ತು. ಅಂದುಕೊಳ್ಳದೆ ಇದ್ದಕ್ಕಿದ್ದಂತೆ ಕನಸೊಂದು ಹೀಗೆ ನನಸಾದರೆ ಹೇಗಿರಬೇಡ! ಕೂಪರ್‌ಗೂ ಅದೇ ಆಗಿತ್ತು. ಭಾವಪರವಶರಾದ ಅವರು ತನ್ನ 101ನೇ ವಯಸ್ಸಿನಲ್ಲಿ ಗೌರವ ಡಿಪ್ಲೊಮಾ ಪಡೆಯುವಂತಾಗಿದ್ದು ಮಾತ್ರ ಅವರನ್ನು ಆಶ್ಚರ್ಯಚಕಿತರನ್ನಾಗಿಸಿದೆ.

ಪದವಿ ಸ್ವೀಕರಿಸಿದ ಕ್ಷಣದಲ್ಲಿ ಸಂತೋಷ ತಡೆಯಲಾಗದೆ ಕೂಪರ್‌, ಇದು ನನ್ನ ಜೀವನದ ಅತ್ಯಂತ ಹೆಚ್ಚು ನೆನಪಿಟ್ಟುಕೊಳ್ಳುವ ದಿನ, ಕೊನೆಗೂ ನನಗೆ ಈ ವಯಸ್ಸಿನಲ್ಲಿ ಪದವಿ ಸಿಕ್ಕಿತು ಎಂಬುದೇ ದೊಡ್ಡ ವಿಚಾರ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Video Viral: ವಡಾ ಪಾವ್ ತಿಂದು, ಅಯ್ಯೋ ಖಾರ ಅಂದ್ರು ಜಪಾನ್ ರಾಯಭಾರಿ! ಹೀಗೆ ವಿಡಿಯೋ ಪೋಸ್ಟ್ ಮಾಡಿ ಅಂದ್ರು ಮೋದಿ

Exit mobile version