ಉತ್ಖನನ ಕಾರ್ಯದ ಸಂದರ್ಭ ಅಚಾನಕ್ಕಾಗಿ ಸಿಗುವ ಕೆಲವು ವಸ್ತುಗಳು ಎಷ್ಟೋ ವರ್ಷಗಳ ಹಿಂದಿನ ಇತಿಹಾಸ ತೆಗೆದು ನಮ್ಮ ಕಣ್ಣ ಮುಂದಿರಿಸುತ್ತವೆ. ಹಳೆಯ ನಾಣ್ಯಗಳು, ಮಡಕೆಯ ಚೂರು, ಊರಿದ್ದ ಕುರುಹು, ಹೀಗೆ ಎಲ್ಲವೂ ಮಣ್ಣಾಗಿ ಹೋದ ಮೇಲೆ ಮತ್ತೆ ಮಣ್ಣಿಂದೆದ್ದು ಹೊರಬಂದು ನಿಲ್ಲುವುದೇ ಒಂದು ರೋಚಕ ಅನುಭವ. ಇದೂ ಕೂಡಾ ಆಂಥದ್ದೇ ಒಂದು ಘಟನೆ.
೧೩೦೦ ವರ್ಷಗಳ ಹಳೆಯ ಚಿನ್ನದ ನೆಕ್ಲೇಸೊಂದು ಮಧ್ಯ ಇಂಗ್ಲೆಂಡಿನ ಆಂಗ್ಲೋ ಸ್ಯಾಕ್ಸನ್ ಸ್ಮಶಾನದ ಬಳಿ ಪತ್ತೆಯಾಗಿದೆಯಂತೆ. ಸದ್ಯ ಆಂಗ್ಲೋ ಸ್ಯಾಕ್ಸನ್ ಸ್ಮಶಾನವು ದುರಸ್ತಿ ಕಾರ್ಯಾಚರಣೆಯಲ್ಲಿದ್ದು, ಈ ಸಂದರ್ಭ ನೆಕ್ಲೇಸೊಂದು ಪತ್ತೆಯಾಗಿದೆ. ಇಂಗ್ಲೆಂಡಿನ ಪ್ರಮುಖ ಹೆಂಗಸೊಬ್ಬಳ ನೆಕ್ಲೆಸ್ ಇದಾಗಿರಬಹುದೆಂದು ಮ್ಯೂಸಿಯಂ ಆಫ್ ಲಂಡನ್ ಆರ್ಕಿಯಾಲಜಿ ಅಂದಾಜಿಸಿದೆ.
ʻವನ್ಸ್ ಇನ್ ಅ ಲೈಫ್‌ಟೈಮ್ʼ ಎಂಬ ಹೆಸರನ್ನು ಈ ನೆಕ್ಲೇಸಿಗೆ ಇಡಲಾಗಿದ್ದು, ಇದು ಸುಮಾರು ಕ್ರಿಸ್ತಶಕ ೬೩೦- ೬೭೦ನೇ ಇಸವಿಯ ಕಾಲದ ನೆಕ್ಲೆಸ್ ಆಗಿದೆ ಎಂದು ಪುರಾತತ್ವ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ಈವರೆಗೆ ಇಂಗ್ಲೆಂಡ್‌ನಲ್ಲಿ ದೊರಕಿದ ಚಿನ್ನದ ಆಭರಣಗಳ ಪೈಕಿ ಅತ್ಯಂತ ಬೆಲೆಬಾಳುವ ಹಾಗೂ ಶ್ರೀಮಂತವೆಂದು ಅಂದಾಜಿಸಲಾಗಿದ್ದು, ಇದು ೩೦ ರೋಮನ್ ಚಿನ್ನದ ನಾಣ್ಯಗಳಿಂದಲೂ, ಸಾಧಾರಣ ಬೆಲೆಬಾಳುವ ಹರಳುಗಳಿಂದಲೂ ಮಾಡಲ್ಪಟ್ಟಿದೆ. ಇದರ ಮಧ್ಯಭಾಗದಲ್ಲಿ ಫಳಫಳಿಸುವ ದೊಡ್ಡದೊಂದು ಆಯತಾಕಾರದ ಪದಕವಿದೆ.
ಇದನ್ನೂ ಓದಿ | Viral Video | ಕಳ್ಳ ತಪ್ಪಿಸಿಕೊಳ್ಳಲು ತಡೆಯಾಯ್ತು ಗಾಜಿನ ಬಾಗಿಲು; ಶಾಂತವಾಗಿಯೇ ನಿಂತು ನೋಡ್ತಿದ್ದ ಅಂಗಡಿ ಮಾಲೀಕ!
ಇದು ಯಾವುದಾದರೂ ಶ್ರೀಮಂತ ಮಹಿಳೆಯ ಆಭರಣವಾಗಿದ್ದಿರಬಹುದೆಂದು ಅಂದಾಜಿಸಲಾಗಿದೆ. ಬಹುಶಃ ರಾಣಿಯ ಅಥವಾ, ಸಮಾಜದ ಉನ್ನತ ಸ್ತರದಲ್ಲಿದ್ದ ಶ್ರೀಮಂತ ಮಹಿಳೆಯ ಆಭರಣ ಇದಾಗಿದ್ದಿರಬಹುದೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಆಭರಣದ ಜೊತೆಗೆ ಎರಡು ಅಲಂಕರಿಸಿದ ಮಡಕೆಗಳು ಹಾಗೂ ಒಂದು ತಾಮ್ರದ ಪಾತ್ರೆಯೂ ಲಭ್ಯವಾಗಿದೆ.
ಮಣ್ಣನ್ನು ಅಗೆಯುವ ಸಂದರಭ ಸಿಕ್ಕಿದ ಈ ಹೊಳೆಯುವ ಆಭರಣ, ಮೊದಲು ಆಭರಣವಾಗಿರಬಹುದೆಂದು ಅಂದಾಜಿಸಲಿಲ್ಲ. ಆಮೇಲೆ ಇದು ಆಭರಣವೆಂದು ತಿಳಿದು ಸೋಜಿಗವೆನಿಸಿತು. ಈ ಆಭರಣದ ಬಗೆಗೆ ಇನ್ನೂ ಅಧ್ಯಯನಗಳು ನಡೆಯಬೇಕಿದೆ. ಈಗ ಮೇಲ್ನೋಟಕ್ಕಷ್ಟೆ ಕೆಲವು ಅಂದಾಜುಗಳನ್ನು ತಜ್ಞರು ಮಾಡಿದ್ದು, ಇದರಲ್ಲಿ ಬಹಳ ಅದ್ಭುತ ಕುಸುರಿ ಕೆಲಸಗಳೂ ಸೂಕ್ಷ್ಮವಾಗಿ ಗಮನಿಸಿದರೆ ಕಾಣುತ್ತದೆ. ಹೀಗಾಗಿ ಈ ಬಗ್ಗೆ ವಿಸ್ತೃತ ಅಧ್ಯಯನ ಮಾಡಲಿದ್ದೇವೆ ಎಂದು ಮ್ಯೂಸಿಯಂನ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ | Viral post | ಇಂಗ್ಲೆಂಡಿನ ಈ ವಿಶೇಷ ಅನನಾಸಿನ ಬೆಲೆ ಒಂದು ಲಕ್ಷ ರೂಪಾಯಿಗಳು!